ಬೆಂಗಳೂರು: ‘ಕಳೆದ ಎರಡು ವರ್ಷಗಳಲ್ಲಿ ನಿರ್ದೇಶಕರ ಸಂಘವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಅಕಾಡೆಮಿಯು ಸರಿಯಾದ ರೀತಿಯಲ್ಲಿ ಚಿತ್ರರಂಗವನ್ನು ನಡೆಸಿಕೊಳ್ಳದೇ ಇದ್ದರೆ ಬೆಂಗಳೂರು ಚಿತ್ರೋತ್ಸವದ ಉದ್ಘಾಟನಾ ದಿನದಂದು ಕಪ್ಪುಬಟ್ಟೆ ಪ್ರದರ್ಶನ ಮಾಡಬೇಕಾಗುತ್ತದೆ’ ಎಂದು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ.ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಕಾಡೆಮಿಯ ಪದನಿಮಿತ್ತ ಸದಸ್ಯರಾಗಿ ನಿರ್ದೇಶಕರ ಸಂಘವಿದೆ. ಎರಡು ವರ್ಷಗಳಲ್ಲಿ ಅಕಾಡೆಮಿಯು ನಡೆಸಿದ ಸಭೆಗಳಿಗೆ ನಮ್ಮನ್ನು ಕರೆದೇ ಇಲ್ಲ. ಕೇಳಿದ ಮಾಹಿತಿಯನ್ನು ರಿಜಿಸ್ಟ್ರಾರ್ ನೀಡುತ್ತಿಲ್ಲ. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸರ್ಕಾರ ₹9 ಕೋಟಿ ನೀಡುತ್ತಿದೆ. ನಾಗತಿಹಳ್ಳಿ ಚಂದ್ರಶೇಖರ ಅವರು ಅಕಾಡೆಮಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ₹2.70 ಲಕ್ಷಕ್ಕೆ ಚಿತ್ರೋತ್ಸವ ಆಗಿತ್ತು. ಚಿತ್ರರಂಗಕ್ಕೆ ಮೂಲ ನಿರ್ದೇಶಕ. ಚಿತ್ರೋತ್ಸವನ್ನು ನಿರ್ದೇಶಕರು ಮಾಡಬೇಕು. ಸರ್ಕಾರ ನಮಗೆ ಚಿತ್ರೋತ್ಸವ ನಡೆಸುವ ಜವಾಬ್ದಾರಿ ನೀಡಿದರೆ, ₹3–4 ಕೋಟಿಯಲ್ಲಿ ಅದ್ಭುತವಾಗಿ ಆಯೋಜಿಸುತ್ತೇವೆ. ಅಕಾಡೆಮಿ ₹9 ಕೋಟಿ ತೆಗೆದುಕೊಂಡು ಚಲನಚಿತ್ರರಂಗಕ್ಕೆ ಏನು ಕೊಡುಗೆ ಕೊಟ್ಟಿದೆ? ಚಿತ್ರರಂಗವಿದ್ದರಷ್ಟೇ ಅಕಾಡೆಮಿ. ಅಲ್ಲಿ ಬರುವ ಆದಾಯವನ್ನು ಪ್ರಶ್ನಿಸುವ ವ್ಯಕ್ತಿಗಳು ಅಲ್ಲಿಗೆ ಹೋಗುವಂತಿಲ್ಲ ಎಂಬ ಪರಿಸ್ಥಿತಿ ಇದೆ. ನಮಗೆ ಅಲ್ಲಿ ಯಾವುದೇ ಬೆಲೆ ಇಲ್ಲ’ ಎಂದರು.
‘ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚಲನಚಿತ್ರರಂಗದ ಹಿರಿಯ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಹಾಗೂ ನಿರ್ದೇಶಕರನ್ನು ಗೌರವಿಸುವ, ರಾಷ್ಟ್ರ–ರಾಜ್ಯ ಪ್ರಶಸ್ತಿ ವಿಜೇತರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ನಿರ್ದೇಶಕರ ಸಂಘ ಹಮ್ಮಿಕೊಳ್ಳಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.