ADVERTISEMENT

ಅಪ್ಪು ಅಭಿನಯದ ‘ಗಂಧದಗುಡಿ’ ಚಿತ್ರಕ್ಕೆ ತೆರಿಗೆ ವಿನಾಯಿತಿ: ಸಿಎಂ ಬೊಮ್ಮಾಯಿ ಘೋಷಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಅಕ್ಟೋಬರ್ 2022, 2:55 IST
Last Updated 22 ಅಕ್ಟೋಬರ್ 2022, 2:55 IST
ಪುನೀತ್‌ ರಾಜ್‌ಕುಮಾರ್‌
ಪುನೀತ್‌ ರಾಜ್‌ಕುಮಾರ್‌    

ಬೆಂಗಳೂರು: ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಸಾಕ್ಷ್ಯಚಿತ್ರ ‘ಗಂಧದಗುಡಿ’ಗೆ ತೆರಿಗೆ ವಿನಾಯಿತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಪ್ಪು’ ತಮ್ಮೊಂದಿಗೆ ಇಲ್ಲ ಎಂದು ನಂಬುವುದು ಕಷ್ಟ. ಅವರು ಈಗಲೂ ನಮ್ಮೊಂದಿಗಿದ್ದಾರೆ. ರಾಜ್ಯದಾದ್ಯಂತ, ಕೊಳ್ಳೇಗಾಲದಿಂದ ಬೀದರ್‌ವರೆಗೆ, ಪ್ರತಿ ಹಳ್ಳಿಯಲ್ಲೂ ಪುನೀತ್ ರಾಜ್‌ಕುಮಾರ್ ಕಟೌಟ್‌ಗಳನ್ನು ನೋಡಬಹುದು. ಪ್ರತಿಯೊಬ್ಬರ ಮನೆಗಳಲ್ಲಿ ‘ಅಪ್ಪು’ ಫೋಟೊ ಇಟ್ಟುಕೊಂಡಿರುವುದನ್ನು ನೋಡಿದರೆ ಅವರ ಮೇಲಿರುವ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಸಾಕ್ಷಿ ಎಂದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ‘ಗಂಧದಗುಡಿ’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ‘ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ನ. 1ರಂದು ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಂದು ಸಂಜೆ 4 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗಿರುವ ಈ ಚಿತ್ರವನ್ನು ‘ವೈಲ್ಡ್‌ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ನಿರ್ದೇಶಿಸಿದ್ದಾರೆ.

2021ರ ಅಕ್ಟೋಬರ್ 29ರಂದು ಅಪ್ಪು ನಿಧನರಾದರು. ಈ ಕಾರಣಕ್ಕೆ ‘ಗಂಧದ ಗುಡಿ’ ಸಾಕ್ಷ್ಯಚಿತ್ರವನ್ನು ಅಕ್ಟೋಬರ್ 28 ರಂದು ಬಿಡುಗಡೆ ಮಾಡಲಾಗುತ್ತಿದೆ. ವಿಶೇಷ ಎಂದರೆ ಇದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.