ADVERTISEMENT

‘777 ಚಾರ್ಲಿ’ ಚಿತ್ರಕ್ಕೆ ರಾಜ್ಯದ ಜಿಎಸ್‌ಟಿ ವಿನಾಯಿತಿ ನೀಡಿದ ಬೊಮ್ಮಾಯಿ ಸರ್ಕಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜೂನ್ 2022, 16:02 IST
Last Updated 18 ಜೂನ್ 2022, 16:02 IST
‘777 ಚಾರ್ಲಿ’ ಸಿನಿಮಾವನ್ನು ವೀಕ್ಷಿಸಿದ ಬಳಿಕ ಭಾವುಕರಾದ ಸಿಎಂ ಬೊಮ್ಮಾಯಿ, ನಟ ರಕ್ಷಿತ್ ಶೆಟ್ಟಿ ಜತೆಗಿದ್ದಾರೆ – ಸಂಗ್ರಹ ಚಿತ್ರ
‘777 ಚಾರ್ಲಿ’ ಸಿನಿಮಾವನ್ನು ವೀಕ್ಷಿಸಿದ ಬಳಿಕ ಭಾವುಕರಾದ ಸಿಎಂ ಬೊಮ್ಮಾಯಿ, ನಟ ರಕ್ಷಿತ್ ಶೆಟ್ಟಿ ಜತೆಗಿದ್ದಾರೆ – ಸಂಗ್ರಹ ಚಿತ್ರ   

ಬೆಂಗಳೂರು:ರಕ್ಷಿತ್ ಶೆಟ್ಟಿ ಅಭಿನಯದ ಕನ್ನಡ ಸಿನಿಮಾ ‘777 ಚಾರ್ಲಿ’ಗೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ವಿನಾಯಿತಿ ನೀಡಿ ಕರ್ನಾಟಕ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

ಜೂನ್ 19ರಿಂದ ಮೊದಲ್ಗೊಂಡು ಆರು ತಿಂಗಳವರೆಗೆ ‘777 ಚಾರ್ಲಿ’ ಸಿನಿಮಾಗೆ ಕೆಲವು ಷರತ್ತುಗಳೊಂದಿಗೆ ಎಸ್‌ಜಿಎಸ್‌ಟಿ ವಿನಾಯಿತಿ ನೀಡಲಾಗುತ್ತದೆ ಎಂದು ರಾಜ್ಯ ಹಣಕಾಸು ಇಲಾಖೆ ಬಿಡುಗಡೆ ಮಾಡಿರುವ ಆದೇಶದಲ್ಲಿ ತಿಳಿಸಲಾಗಿದೆ.

ಪ್ರದರ್ಶಕರು ಚಾರ್ಲಿ ಸಿನಿಮಾ ಟಿಕೆಟ್‌ಗೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ ವಿಧಿಸಬಾರದು. ಜೂನ್ 19ರಿಂದ ಎಸ್‌ಜಿಎಸ್‌ಟಿ ಒಳಗೊಳ್ಳದ ಹೊಸ ದರ ಮುದ್ರಿಸಿರುವ ಟಿಕೆಟನ್ನೇ ಮಾರಾಟ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ.

ADVERTISEMENT

‘ಸಿನಿಮಾದ ನಿರ್ಮಾಪಕರೂ ಆಗಿರುವ ರಕ್ಷಿತ್ ಶೆಟ್ಟಿ ಅವರು, ಚಿತ್ರ ಪ್ರದರ್ಶನಕ್ಕೆ ಶೇ 100ರ ತೆರಿಗೆ ವಿನಾಯಿತಿ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದರು. ಇನ್‌ಬ್ರೀಡಿಂಗ್‌ನಿಂದಾಗಿ ಶ್ವಾನಗಳ ಸ್ವಾಸ್ಥ್ಯದ ಮೇಲಾಗುವ ಪರಿಣಾಮದ ಬಗ್ಗೆ ಸಿನಿಮಾದಲ್ಲಿ ಜಾಗೃತಿ ಮೂಡಿಸಲಾಗಿದ್ದು, ಬೀದಿ ನಾಯಿಗಳನ್ನು ದತ್ತು ಪಡೆಯುವ ಸಂದೇಶವನ್ನೂ ಸಾರಲಾಗಿದೆ. ಪ್ರಾಣಿ ಹಿಂಸೆಯ ಸೂಕ್ಷ್ಮವನ್ನೂ ಎತ್ತಿಹಿಡಿಯಲಾಗಿದೆ ಎಂದು ಮನವಿ ಪತ್ರದಲ್ಲಿ ನಿರ್ಮಾಪಕರು ಉಲ್ಲೇಖಿಸಿದ್ದರು. ಇದನ್ನು ಪರಿಗಣಿಸಿರುವ ಮುಖ್ಯಮಂತ್ರಿಗಳು, ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿದರೆ ಇನ್ನಷ್ಟು ಜನರಿಗೆ ಸಂದೇಶವನ್ನು ತಲುಪಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದೇಶ ಹೊರಡಿಸುವಂತೆ ಸೂಚಿಸಿದ್ದಾರೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇತ್ತೀಚೆಗಷ್ಟೇ ಸಂಪುಟ ಸಹೋದ್ಯೋಗಿಗಳ ಜತೆ ‘777 ಚಾರ್ಲಿ’ ಸಿನಿಮಾವನ್ನು ವೀಕ್ಷಿಸಿದ್ದ ಬೊಮ್ಮಾಯಿ, ಭಾವುಕರಾಗಿದ್ದರು.

ಮೂಕ ಪ್ರಾಣಿಗಳ ಮುಗ್ಧ ಪ್ರೀತಿಯ ಕಥೆ ಒಳಗೊಂಡಿರುವ ‘777 ಚಾರ್ಲಿ’ ರಾಜ್ಯದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದು, ವಿಮರ್ಶಕರು, ಪ್ರೇಕ್ಷಕರು ಮತ್ತು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.