ADVERTISEMENT

ರೈತನ ಬದುಕು, ಬವಣೆಯ ಚಿತ್ರ 'ಕಾಸಿನಸರ'

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 23:45 IST
Last Updated 9 ಫೆಬ್ರುವರಿ 2023, 23:45 IST
ವಿಜಯ ರಾಘವೇಂದ್ರ ಹಾಗೂ ಹರ್ಷಿಕಾ ಪೂಣಚ್ಚ
ವಿಜಯ ರಾಘವೇಂದ್ರ ಹಾಗೂ ಹರ್ಷಿಕಾ ಪೂಣಚ್ಚ   

ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಅವರ ನಿರ್ದೇಶನದಲ್ಲಿ ನಟ ವಿಜಯ ರಾಘವೇಂದ್ರ ಪ್ರಗತಿಪರ ರೈತನಾಗಿ ನಟಿಸಿರುವ ಚಿತ್ರ ‘ಕಾಸಿನಸರ’. ಚಿತ್ರದ ‘ಭೂತಾಯಿಯ ಕಾಸಿನಸರ’ ಹಾಡನ್ನು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದರು.

‘Is not a jewel’ ಎನ್ನುವ ಅಡಿಬರಹವಿರುವ ಈ ಚಿತ್ರದ ಶೀರ್ಷಿಕೆಯನ್ನು ರೂಪಕದ ರೀತಿ ಬಳಸಿಕೊಳ್ಳಲಾಗಿದೆ. ‘ಇಲ್ಲಿ ಕಾಸಿನಸರಕ್ಕೆ ಅದರದೇ ಮೌಲ್ಯ, ಪರಂಪರೆ, ಸಂಪ್ರದಾಯವಿದೆ. ಅದೇ ರೀತಿ ಕೃಷಿಗೂ ತನ್ನದೇ ಆದ ಪರಂಪರೆ ಸಂಪ್ರದಾಯವಿದೆ. ಅದನ್ನು ಇಲ್ಲಿ ಕೃಷಿಭೂಮಿಗೆ ಹೋಲಿಸಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ನಂಜುಂಡೇಗೌಡ.

ನಾಯಕ ವಿಜಯ ವಿಜಯ ರಾಘವೇಂದ್ರ ಮಾತನಾಡಿ, ‘ಒಬ್ಬ ನಟನಿಗೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡುವ ಅವಕಾಶ ಸಿಗುತ್ತದೆ. ಆದರೆ ಒಬ್ಬ ರೈತನ ಪಾತ್ರ ಸಿಗುವುದು ಅಪರೂಪ. ನಂಜುಂಡೇಗೌಡರು ಈ ಸಿನಿಮಾದ ಕಥೆ, ಶೀರ್ಷಿಕೆ ಹೇಳಿದಾಗ ತುಂಬಾ ಖುಷಿಯಾಯಿತು. ಕಾಸಿನಸರ ತುಂಬಾ ತೂಕವಾದ ಹೆಸರು. ಅದರ ಹಿಂದೆ ದೊಡ್ಡ ಶ್ರಮವಿದೆ. ಇಲ್ಲಿ ಕಾಸಿನಸರ ಎನ್ನುವುದು ಬರೀ ಒಡವೆಯಲ್ಲ. ಅದಕ್ಕೊಂದು ಒಳ ಅರ್ಥವಿದೆ. ವೇಣು ಈ ಚಿತ್ರವನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಚಿತ್ರದಲ್ಲಿ ‘ಸುಂದರೇಶ’ ಎಂಬ ವ್ಯವಸಾಯದ ಮೇಲೆ ಭರವಸೆ ಇಟ್ಟಿರುವ ರೈತ ಹೋರಾಟಗಾರನಾಗಿ ನಟಿಸಿದ್ದೇನೆ’ ಎಂದು ತಮ್ಮ ಪಾತ್ರದ ವಿವರಣೆ ನೀಡಿದರು.

ADVERTISEMENT

‘ಚಿತ್ರದಲ್ಲಿ ನಾನು ಕೃಷಿ ವಿದ್ಯಾರ್ಥಿನಿ ‘ಸಂಪಿಗೆ’ ಎಂಬ ಪಾತ್ರ ಮಾಡಿದ್ದೇನೆ. ಈಗಿನ ಹುಡುಗಿಯರು ಓದು ಮುಗಿಸಿ ಐಟಿ ಕಂಪನಿಗಳಲ್ಲಿ, ವಿದೇಶಗಳಲ್ಲಿ ಕೆಲಸ ಹುಡುಕುತ್ತಾರೆ, ಆದರೆ ನಾನು ಕೃಷಿ ಕ್ಷೇತ್ರ ಆಯ್ದುಕೊಳ್ಳುತ್ತೇನೆ. ಅಭಿನಯಕ್ಕೆ ಹೆಚ್ಚಿನ ಆದ್ಯತೆ ಇರುವ ಪಾತ್ರ ನನ್ನದು’ ಎಂದರು ನಟಿ ಹರ್ಷಿಕಾ ಪೂಣಚ್ಚ.

ಚಿತ್ರದಲ್ಲಿ ಪಾತ್ರವೊಂದನ್ನು ನಿರ್ವಹಿಸಿರುವ ಸಚಿವ ಎಸ್‌.ಟಿ. ಸೋಮಶೇಖರ್ ಮಾತನಾಡಿ, ‘ಗ್ರಾಮೀಣ ಸೊಗಡಿನಲ್ಲಿ ನಡೆಯುವ ಕೌಟುಂಬಿಕ ಕಥಾಹಂದರ ಈ ಚಿತ್ರದಲ್ಲಿದೆ. ನನ್ನ ಸ್ನೇಹಿತ, ನಿರ್ಮಾಪಕ ಈ. ದೊಡ್ಡನಾಗಯ್ಯ ಅವರಿಗೆ ಕೃಷಿ ಎಂದರೆ ಅಚ್ಚುಮೆಚ್ಚು. ಗ್ರಾಮೀಣ ಭಾಗದಿಂದಲೇ ಬಂದ ಅವರು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಚಿತ್ರ ನಿರ್ಮಾಣಕ್ಕೂ ಕೈಹಾಕಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.