ADVERTISEMENT

ಬುಡಾಪೆಸ್ಟ್‌ನಲ್ಲಿ ನಡೆದಿದೆ KD ಚಿತ್ರದ ಬಿಜಿಎಂ ಕೆಲಸಗಳು!

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 23:58 IST
Last Updated 7 ಆಗಸ್ಟ್ 2025, 23:58 IST
KD 
KD    

2025ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಪ್ರೇಮ್‌ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘KD’ ಸಿನಿಮಾ ಅಕ್ಟೋಬರ್‌ನಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ. ಚಿತ್ರದ ಬ್ಯಾಗ್ರೌಂಡ್‌ ಸ್ಕೋರ್‌ ಕೆಲಸಗಳು ಹಂಗರಿ ರಾಜಧಾನಿ ಬುಡಾಪೆಸ್ಟ್‌ನಲ್ಲಿ ಇತ್ತೀಚೆಗೆ ನಡೆದಿದೆ. 

ಕಳೆದ ವರ್ಷ ತೆರೆಕಂಡಿದ್ದ ಉಪೇಂದ್ರ ನಟನೆಯ ‘ಯುಐ’ ಸಿನಿಮಾ ತಂಡವೂ ಬುಡಾಪೆಸ್ಟ್‌ನಲ್ಲಿ ಸಂಗೀತವನ್ನು ರೆಕಾರ್ಡ್‌ ಮಾಡಿತ್ತು. ‘ಸರಿಲೇರು ನೀಕೆವ್ವರು’, ‘ವಿಕ್ರಾಂತ್ ರೋಣ’, ‘ಕೆಜಿಎಫ್- 2’ ಮತ್ತು ‘ಸಲಾರ್’ನಂತಹ ಸಿನಿಮಾಗಳು ಈ ಹಿಂದೆ ಬುಡಾಪೆಸ್ಟ್‌ನಲ್ಲಿ ತಮ್ಮ ಸ್ಕೋರ್‌ಗಳನ್ನು ರೆಕಾರ್ಡ್ ಮಾಡಿದ್ದವು. ಇದೀಗ ‘KD’ ತಂಡವೂ ಭರ್ಜರಿಯಾಗಿಯೇ ತಮ್ಮ ಸಿನಿಮಾದ ಸಂಗೀತವನ್ನು ಇಲ್ಲಿ ಸಂಯೋಜಿಸಿದೆ. 

‘ಬಿಗ್‌ ಬ್ಯಾಂಡ್‌ ತಂಡದೊಂದಿಗೆ ಇಲ್ಲಿ ಕೆಲಸ ನಡೆದಿದೆ. ಭಾರತೀಯ ಸಿನಿಮಾದಲ್ಲೇ ಅತಿ ದೊಡ್ಡ ಆರ್ಕೆಸ್ಟ್ರಾ ಹಾಕಿದ್ದೇವೆ. ಇದು ಕೆವಿಎನ್‌ ಪ್ರೊಡಕ್ಷನ್ಸ್‌ನಿಂದ ಹಾಗೂ ಪ್ರೇಮ್‌ ಅವರಿಂದ ಸಾಧ್ಯವಾಯಿತು. ‘KD’ ಬ್ಯಾಗ್ರೌಂಡ್‌ ಸ್ಕೋರ್‌ ಬಹಳ ರಿಚ್‌ ಆಗಿ ಬರಲಿದೆ’ ಎಂದಿದ್ದಾರೆ ಚಿತ್ರದ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ.   

ADVERTISEMENT

‘ಏಕ್‌ ಲವ್‌ ಯಾ’ ಸಿನಿಮಾ ನಂತರ ಪ್ರೇಮ್ ನಿರ್ದೇಶನದ ಪ್ಯಾನ್‌ ಇಂಡಿಯಾ ಚಿತ್ರ ಇದಾಗಿದ್ದು, ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಸಂಜಯ್‌ ದತ್‌, ರವಿಚಂದ್ರನ್, ಶಿಲ್ಪಾ ಶೆಟ್ಟಿ, ರಮೇಶ್‌ ಅರವಿಂದ್‌ ಚಿತ್ರದ ತಾರಾಬಳಗದಲ್ಲಿದ್ದಾರೆ. ಕೆವಿಎನ್‌ ಪ್ರೊಡಕ್ಷನ್ಸ್‌ ಈ ಸಿನಿಮಾ ನಿರ್ಮಾಣ ಮಾಡಿದೆ. 1970-75ರಲ್ಲಿ ನಡೆದ ನೈಜಘಟನೆ ಆಧಾರಿತ ಗ್ಯಾಂಗ್‌ಸ್ಟರ್ ಕಥೆ ಈ ಚಿತ್ರಲ್ಲಿದೆ. ‘KD’ ಅಂದ್ರೆ ಕಾಳಿದಾಸ. ಬೆಂಗಳೂರಿನಲ್ಲಿ 20 ಎಕರೆ ಪ್ರದೇಶದಲ್ಲಿ ಪುರಭವನ, ಕೆ.ಆರ್‌.ಮಾರ್ಕೆಟ್‌, ಮೈಸೂರು ಬ್ಯಾಂಕ್‌, ಧರ್ಮರಾಯ ದೇವಸ್ಥಾನ, ಶಿವಾಜಿ ಟಾಕೀಸ್‌ ಸೆಟ್‌ ಹಾಕಿ ಚಿತ್ರದ ಬಹುತೇಕ ಭಾಗ ಚಿತ್ರೀಕರಣಗೊಂಡಿತ್ತು. ಚಿತ್ರಕ್ಕಾಗಿ ಸುಮಾರು 180 ದಿನ ಚಿತ್ರೀಕರಣ ನಡೆಸಿತ್ತು ಚಿತ್ರತಂಡ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.