ADVERTISEMENT

ಹುಶಾರ್, ಈ ಸಿನಿಮಾ ನೋಡಿದ್ರೆ ಭಯವಾಗತ್ತೆ!

ಕೆಲವು ದಿನಗಳ ನಂತರ...

​ಪ್ರಜಾವಾಣಿ ವಾರ್ತೆ
Published 21 ಜೂನ್ 2018, 20:13 IST
Last Updated 21 ಜೂನ್ 2018, 20:13 IST
ಸೋನು ಪಾಟೀಲ್
ಸೋನು ಪಾಟೀಲ್   

ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಾಗ ‘ಎಲ್ಲ ವರ್ಗದ ಪ್ರೇಕ್ಷಕರೂ ದಯವಿಟ್ಟು ನಮ್ಮ ಸಿನಿಮಾ ನೋಡಿ’ ಎಂದು ಕೇಳಿಕೊಳ್ಳವುದು ಮಾಮೂಲಿ. ಆದರೆ ‘ಕೆಲವು ದಿನಗಳ ನಂತರ...’ ಚಿತ್ರತಂಡ ಮಾತ್ರ ‘ಗರ್ಭಿಣಿಯರು, ಹೃದಯತೊಂದರೆ ಇರುವವರಿಗೆ ನಮ್ಮ ಸಿನಿಮಾ ನಿಷೇಧಿಸಲಾಗಿದೆ’ ಎಂದು ಪೋಸ್ಟರ್‌ನಲ್ಲಿಯೇ ಬರೆದುಕೊಂಡಿದ್ದರು. ಮಾತಿನಲ್ಲಿಯೂ ಅದನ್ನೇ ಹೇಳಿದರು.

ಇದಕ್ಕೆ ಕಾರಣವೂ ಇದೆ. ‘ಇದು ಹಾರರ್ ಸಿನಿಮಾ. ದೃಶ್ಯಗಳು ಮತ್ತು ಧ್ವನಿ ಎಷ್ಟು ಭಯಾನಕವಾಗಿದೆ ಎಂದರೆ ಸಾಮಾನ್ಯರಿಗೇ ಅರಗಿಸಿಕೊಳ್ಳುವುದು ಕಷ್ಟ. ಇನ್ನು ಗರ್ಭಿಣಿಯರು, ದುರ್ಬಲ ಮನಸ್ಸಿನವರು ನೋಡಲು ಸಾಧ್ಯವೇ ಇಲ್ಲ’ ಎಂಬುದು ತಂಡ ನೀಡುವ ಸಮಜಾಯಿಷಿ.

ಶ್ರೀನಿ ನಿರ್ದೆಶನದ ‘ಕೆಲವು ದಿನಗಳ ನಂತರ’ ಚಿತ್ರ ಇಂದು (ಜೂನ್ 22) ಬಿಡುಗಡೆಯಾಗುತ್ತಿದೆ. ಈ ಸಂಗತಿಯನ್ನು ಹಂಚಿಕೊಳ್ಳಲಿಕ್ಕಾಗಿಯೇ ತಂಡ ಪತ್ರಿಕಾಗೋಷ್ಠಿ ಕರೆದಿತ್ತು. ಶುಭಾ ಪೂಂಜಾ ಈ ಚಿತ್ರದ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ‘ಇದು ಹಾರರ್ ಸಿನಿಮಾ. ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಹಾರರ್ ಸಿನಿಮಾಗಳು ಬಂದಿವೆ. ಆದರೆ ಈ ಸಿನಿಮಾದ ಕೊನೆಯಲ್ಲಿ ಒಂದು ಸಂದೇಶ ಇದೆ. ಕಮರ್ಷಿಯಲ್‌ ಅಂಶಗಳ ಜತೆಗೆ ಸಂದೇಶವನ್ನೂ ಕೊಡುವುದೇ ಈ ಚಿತ್ರದ ವೈಶಿಷ್ಠ್ಯ’ ಎಂದರು ಶುಭಾ. ಚಿತ್ರತಂಡದೊಟ್ಟಿಗೆ ಈ ಚಿತ್ರವನ್ನು ವೀಕ್ಷಿಸುವಾಗ ಅವರು ಭಯದಿಂದ ಪಕ್ಕ ಕೂತಿದ್ದವರ ಕೈಯನ್ನು ಪರಚಿಬಿಟ್ಟಿದ್ದರಂತೆ. ‘ಸಿನಿಮಾದಲ್ಲಿ ನಟಿಸಿದ ನನಗೇ ಇಷ್ಟು ಭಯವಾಗಿರಬೇಕಾದರೆ ಪ್ರೇಕ್ಷಕರಿಗೆ ಇನ್ನೆಷ್ಟು ಭಯವಾಗಬೇಡ?’ ಎಂದು ಕಣ್ಣುಗಳಲ್ಲಿ ಅಚ್ಚರಿ ತುಂಬಿಕೊಂಡು ಪ್ರಶ್ನಿಸಿದರು ಶುಭಾ.

ADVERTISEMENT

ದ್ರವ್ಯಾ ಶೆಟ್ಟಿ ಅವರಿಗೆ ಇದು ಮೊದಲ ಸಿನಿಮಾ. ಆ ಖುಷಿ ಅವರ ಮಾತಿನಲ್ಲಿಯೂ ಎದ್ದು ಕಾಣುತ್ತಿತ್ತು. ‘ಇದು ನನ್ನ ಮೊದಲ ಸಿನಿಮಾ. ತುಂಬಾ ನಿರೀಕ್ಷೆ ಇದೆ ಈ ಚಿತ್ರದ ಮೇಲೆ. ನನಗೆ ಮೊದಲಿನಿಂದಲೂ ಹಾರರ್ ಸಿನಿಮಾಗಳೆಂದರೆ ಇಷ್ಟ. ಈ ಸಿನಿಮಾದಿಂದ ನಾನು ಸಾಕಷ್ಟು ವಿಷಯಗಳನ್ನು ಕಲಿತುಕೊಂಡಿದ್ದೇನೆ’ ಎನ್ನುತ್ತಾರೆ ದ್ರವ್ಯಾ. ಸಾಫ್ಟ್‌ವೇರ್ ಇಂಜಿನಿಯರ್ ಸ್ನೇಹಿತರು ಪಿಕ್‌ನಿಕ್‌ ಹೋದಾಗ ಸಂಭವಿಸುವ ಘಟನಾವಳಿಗಳ ಮೇಲೆಯೇ ಈ ಚಿತ್ರದ ಕಥೆ ಹೆಣೆಯಲಾಗಿದೆ. ಸೋನು ಪಾಟೀಲ್, ಜಗದೀಶ್, ರಮ್ಯವರ್ಷಿಣಿ ಮತ್ತು ಬೇಬಿ ಶ್ರೀಲಕ್ಷ್ಮೀ ಚಿತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದಲ್ಲಿ ಆರು ತಿಂಗಳ ಮಗುವನ್ನು ಕಂಪ್ಯೂಟರ್ ಗ್ರಾಫಿಕ್ಸ್‌ನಲ್ಲಿಯೇ ರೂಪಿಸಲಾಗಿರುವುದೂ ಒಂದು ವಿಶೇಷ.

‘ಇದು ಕನಿಷ್ಠ ಬಜೆಟ್‌ನಲ್ಲಿ ಮಾಡಬೇಕು ಎಂದು ಹೊರಟ ಸಿನಿಮಾ. ಆದರೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಮುಗಿಸಿದ ಕಾರಣ ಬಜೆಟ್ ಜಾಸ್ತಿ ಆಯ್ತು. ಆದರೆ ನಿರ್ಮಾಪಕರು ತುಂಬ ಪ್ರೋತ್ಸಾಹದಿಂದ ಹಣ ಒದಗಿಸಿದರು. ಭಯಾನಕ ಅಂಶಗಳಿರುವುದಕ್ಕೆ ಈ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ನೀಡಲಾಗಿದೆ. ಆದರೆ ಯಾವುದೇ ದ್ವಂದ್ವಾರ್ಥ, ಆಶ್ಲೀಲ ಸಂಭಾಷಣೆಗಳು ಇಲ್ಲ. ಭಯದ ಜತೆ ಹಾಸ್ಯವೂ ಇದೆ’ ಎಂದರು ನಿರ್ದೇಶಕ ಶ್ರೀನಿ.

ಮುತ್ತುರಾಜ್ ಎಚ್‌.ಪಿ., ವಸಂತ ಕುಮಾರ್, ಬಿ.ಎಂ. ಚಂದ್ರಕುಮಾರ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಮುರಳೀಧರ್ ಮತ್ತು ನವೀನ್‌ಕುಮಾರ್ ಛಾಯಾಗ್ರಹಣ, ಬಕೇಶ್ ಮತ್ತು ವಿಜಯರಾಜ್ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.