ADVERTISEMENT

ಸಂದರ್ಶನ | ನಮಗೆ ನಾವೇ ಗೆಲುವಿನ ದಾರಿ ಹುಡುಕಬೇಕು– ನಟ ಗೌರಿಶಂಕರ್‌

ವಿನಾಯಕ ಕೆ.ಎಸ್.
Published 15 ಮಾರ್ಚ್ 2024, 0:30 IST
Last Updated 15 ಮಾರ್ಚ್ 2024, 0:30 IST
ಗೌರಿಶಂಕರ್‌
ಗೌರಿಶಂಕರ್‌   
ಗೌರಿಶಂಕರ್‌ ಅಭಿಯನದ ‘ಕೆರೆಬೇಟೆ’ ಚಿತ್ರ ಇಂದು (ಮಾ.15) ತೆರೆ ಕಾಣುತ್ತಿದೆ. ಮಲೆನಾಡಿನ ವಿಶಿಷ್ಟ ಆಚರಣೆಯೊಂದನ್ನು ಕಥೆಯಾಗಿ ಹೊಂದಿರುವ ಚಿತ್ರ ಮತ್ತು ಸಿನಿ ಪಯಣ ಕುರಿತು ಮಾತನಾಡಿದ್ದಾರೆ.

ಚಿತ್ರದಲ್ಲಿ ನಿಮ್ಮ ಪಾತ್ರವೇನು?

‘ಹುಲಿಮನೆ ನಾಗ’ ಪಾತ್ರದ ಹೆಸರು. ಹಳ್ಳಿ ಹುಡುಗ. ಕೆಳ ಮಧ್ಯಮ ವರ್ಗಕ್ಕೆ ಸೇರಿದವನು. ಹತ್ತಾರು ಉದ್ಯೋಗ ಮಾಡಿಕೊಂಡಿರುತ್ತಾನೆ. ಸ್ವಭಾವದಿಂದ ತುಂಬ ಜೋರಾಗಿರುತ್ತಾನೆ. ಮನುಷ್ಯನಲ್ಲಿರುವ ಒಳ್ಳೆತನ, ಕೆಟ್ಟತನ ಎಲ್ಲವೂ ಆತನಲ್ಲಿ ಇರುತ್ತದೆ. 

ಬೇರೆ ಚಿತ್ರಗಳಿಗಿಂತ ಭಿನ್ನವಾಗಿದ್ದು ಈ ಚಿತ್ರದಲ್ಲಿ ಏನಿದೆ?

ADVERTISEMENT

ಈ ಚಿತ್ರದ ಕಥೆಯ ಚೌಕಟ್ಟು ಹೊಸತಾಗಿದೆ. ಮಲೆನಾಡು, ಅಲ್ಲಿನ ನೇಟಿವಿಟಿ, ಭಾಷೆ ಎಲ್ಲವೂ ಸಿನಿಮಾಕ್ಕೆ ತುಂಬ ಫ್ರೆಶ್‌ನೆಸ್‌ ನೀಡಿದೆ. ಅಲ್ಲಿನ ಕಥೆಗಳು ಬಂದಿಲ್ಲ ಎಂದಲ್ಲ, ಆದರೆ ಆ ಭಾಗದ ಆಚರಣೆಗಳನ್ನು ಸಿನಿಮಾಕ್ಕೆ ಅಳವಡಿಕೆ ಮಾಡಿಕೊಂಡಿರುವುದು ಭಿನ್ನವಾಗಿದೆ. 

‘ಕಾಂತಾರ’ ಕರಾವಳಿಯದ್ದು, ಅದೇ ರೀತಿ ಇಲ್ಲಿ ಮಲೆನಾಡಿನ ಆಚರಣೆಯೇ?

ಆ ಸಿನಿಮಾವನ್ನು ನಕಲು ಮಾಡಿಲ್ಲ. ಸಿನಿಮಾದಲ್ಲಿ ಹೊಸತೇನೋ ಯತ್ನಿಸಬೇಕು ಎಂದು ಹೊರಟೆವು. ಆಗ ಸ್ವಾಭಾವಿಕವಾಗಿ ನಾವು ಹುಟ್ಟಿ ಬೆಳೆದ ಜಾಗದ ಸುತ್ತಲಿನ ಘಟನೆಗಳೇ ನಮ್ಮನ್ನು ಕಾಡುತ್ತವೆ. ನಾವೆಲ್ಲ ಹುಟ್ಟಿ ಬೆಳೆದಿದ್ದು, ಒಡನಾಡಿದ್ದು ಮಲೆನಾಡಿನಲ್ಲಿ. ಸಾಗರ, ಹೊಸನಗರ, ತೀರ್ಥಹಳ್ಳಿ ಬದುಕಿನೊಂದಿಗೆ ಅವಿನಾಭಾವ ನಂಟು ಹೊಂದಿರುವ ಊರುಗಳು. ಇಲ್ಲಿನ ಕಥೆ ಹೇಳದೆ ಬೇರೆ ಊರನ್ನು ಆಯ್ದುಕೊಳ್ಳಲು ಸಾಧ್ಯವಿರಲಿಲ್ಲ.

ನಿಮ್ಮ ಸಿನಿಪಯಣದ ಕುರಿತು ಹೇಳಿ...

‘ಆಕಾಶ್‌’ ಸಿನಿಮಾಕ್ಕೆ ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದೆ. ಕೆಲವಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದೆ. ನಾಯಕನಾಗಿ ‘ಜೋಕಾಲಿ’ ಎಂಬ ಸಿನಿಮಾ ಮಾಡಿದೆ. ಉತ್ತಮ ಹೆಸರು ಬಂತು. ಆದರೆ ಆರ್ಥಿಕವಾಗಿ ಸೋಲು ಕಂಡೆ. ‘ರಾಜಹಂಸ’ ಚಿತ್ರದಲ್ಲಿ ನಟಿಸಿದೆ. ಅದರಲ್ಲಿಯೂ ಕಮರ್ಷಿಯಲ್‌ ಸಕ್ಸಸ್‌ ಸಿಗಲಿಲ್ಲ.

ಈವರೆಗಿನ ಸೋಲುಗಳು ನಿಮಗೆಷ್ಟು ಪಾಠ ಕಲಿಸಿದೆ?

ಒಂದು ಸೋಲಿನಿಂದ ಸುಧಾರಿಸಿಕೊಳ್ಳಲು ಸಾಕಷ್ಟು ದಿನಗಳು ಬೇಕು. ಅದು ನಮ್ಮನ್ನು ಒಂದಷ್ಟು ಕಾಲ ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ. ಮುಂದಿನ ಹೆಜ್ಜೆಗೆ ಅರಿವು ಮೂಡಿಸುತ್ತದೆ. ಹಾಗಂತ ಹಿಂದಿನ ಸಿನಿಮಾ ಕೆಟ್ಟದಾಗಿ ಮಾಡಿರುತ್ತೇವೆ ಎಂದಲ್ಲ. ಯಾವುದೋ ಒಂದು ವರ್ಕ್‌ ಆಗಿರುವುದಿಲ್ಲ. ಅದನ್ನು ಮುಂದಿನ ಹೆಜ್ಜೆಯಲ್ಲಿ ತಿದ್ದಿಕೊಳ್ಳುತ್ತೇವೆ. ಸೋಲು, ಮುಂದಿನ ಬದುಕು ನೆನಪಿಸಿಕೊಂಡ್ರೆ ಕೆಲವೊಮ್ಮೆ ಭಯವಾಗುತ್ತದೆ. ಆದರೆ ಅವೆಲ್ಲವನ್ನೂ ಮೀರಿ ಮುಂದಕ್ಕೆ ಹೋಗಲೇಬೇಕು. ಬೇರೆ ಯಾರಾದರೂ ನಮ್ಮನ್ನು ಕೈ ಹಿಡಿಯುತ್ತಾರೆ ಎಂಬುದು ನಾವು ಗೆಲ್ಲುವ ತನಕವೂ ಸುಳ್ಳು. ನಮಗೆ ನಾವೇ ಗೆಲುವಿನ ದಾರಿ ಹುಡುಕಿಕೊಳ್ಳಬೇಕು.

ನಿಮ್ಮ ಮುಂದಿನ ಯೋಜನೆ...?

ಹತ್ತಾರು ಕನಸುಗಳಿವೆ. ಎಲ್ಲದಕ್ಕೂ ಈ ಸಿನಿಮಾದ ಗೆಲುವೇ ಮುಖ್ಯ. ಗೆಲುವಾಗದೆ ಏನೂ ಆಲೋಚಿಸಲು ಸಾಧ್ಯವಿಲ್ಲ.

ಸುದೀಪ್‌, ಪುನೀತ್‌ ರಾಜಕುಮಾರ್‌ ಸಾಥ್‌
ಈ ಚಿತ್ರದ ಟ್ರೇಲರ್‌ ಅನ್ನು ನಟ ಸುದೀಪ್‌ ಬಿಡುಗಡೆಗೊಳಿಸಬೇಕಿತ್ತು. ಅನಾರೋಗ್ಯದಿಂದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮಕ್ಕೆ ಬಾರದಿರುವುದಕ್ಕೆ ಸುದೀಪ್‌ ತಂಡದ ಕ್ಷಮೆ ಕೇಳಿ ವಿಡಿಯೊ ಹಂಚಿಕೊಂಡಿದ್ದರು. ಚಿತ್ರ ಕುರಿತು ಮೆಚ್ಚುಗೆ ಮಾತನಾಡಿ ತಾವು ಚಿತ್ರ ವೀಕ್ಷಿಸುವುದಾಗಿ ಹೇಳಿದ್ದರು. ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಕೂಡ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. 
ಗೌರಿಶಂಕರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.