ADVERTISEMENT

₹1000 ಕೋಟಿ ಕ್ಲಬ್‌ ಸೇರಿದ ಕೆಜಿಎಫ್–2: ಯಶ್‌ ಸುನಾಮಿಗೆ ದಾಖಲೆಗಳು ಛಿದ್ರ ಛಿದ್ರ

​ಪ್ರಜಾವಾಣಿ ವಾರ್ತೆ
Published 3 ಮೇ 2022, 7:03 IST
Last Updated 3 ಮೇ 2022, 7:03 IST
ಕೆಜಿಎಫ್ ಚಾಪ್ಟರ್ –2 ಚಿತ್ರದಲ್ಲಿ ನಟ ಯಶ್
ಕೆಜಿಎಫ್ ಚಾಪ್ಟರ್ –2 ಚಿತ್ರದಲ್ಲಿ ನಟ ಯಶ್   

ನಟ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್–2 ಚಿತ್ರ ಗಳಿಕೆಯಲ್ಲಿ ಎಲ್ಲ ದಾಖಲೆಗಳನ್ನು ಮೀರಿ ಮುನ್ನುಗ್ಗುತ್ತಿದೆ. ಚಿತ್ರ ಬಿಡುಗಡೆಯಾಗಿ 20 ದಿನಗಳಲ್ಲಿ ₹1000 ಕೋಟಿ ಕ್ಲಬ್‌ ಸೇರಿದ ಮೊದಲ ಕನ್ನಡ ಸಿನಿಮಾ ಎಂಬ ಹೊಸ ದಾಖಲೆಸೃಷ್ಟಿಸಿದೆ.

ಹಿಂದಿ, ತಮಿಳಿನಲ್ಲಿ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ತಮಿಳುನಾಡಿನಲ್ಲಿ ₹100 ಕೋಟಿ ಗಳಿಕೆ ಕಂಡಿದೆ.ಹಿಂದಿ ನೆಲದಲ್ಲೂ ಈವರೆಗೆ ₹369 ಕೋಟಿ ಕಲೆಕ್ಷನ್‌ ಮಾಡಿದೆ.

ʼಕೆಜಿಎಫ್-2ʼ ಚಿತ್ರ ತೆರೆಕಂಡು 20 ದಿನಗಳಲ್ಲಿ ಸಾವಿರ ಕೋಟಿ ಕ್ಲಬ್‌ ಸೇರಿದೆ. ಕನ್ನಡ ಸಿನಿಮಾವೊಂದು ಮೊದಲ ಬಾರಿಗೆ ಸಾವಿರ ಕೋಟಿ ಕ್ಲಬ್‌ ಸೇರಿರುವುದು ವಿಶೇಷ. 20 ದಿನಗಳಲ್ಲಿ₹1,025 ಕೋಟಿ 61 ಲಕ್ಷ ಕಲೆ ಹಾಕಿದೆ ಎಂದು ಸಿನಿಮಾ ಕಲೆಕ್ಷನ್‌ ವಿಶ್ಲೇಷಕ ಮನೋಬಾಲ ವಿಜಯಬಾಲನ್‌ ಟ್ವೀಟ್ ಮಾಡಿದ್ದಾರೆ.

ADVERTISEMENT

ಸಾವಿರ ಕೋಟಿ ಕ್ಲಬ್‌ನಲ್ಲಿ ಅಮಿರ್ ಖಾನ್ ಅಭಿನಯದ ʼದಂಗಲ್ʼ ಸಿನಿಮಾ ಮೊದಲ ಸ್ಥಾನದಲ್ಲಿದೆ. ಎಸ್‌ಎಸ್ ರಾಜಮೌಳಿ ನಿರ್ದೇಶನದ ʼಬಾಹುಬಲಿʼ ಹಾಗೂ ʼಆರ್‌ಆರ್‌ಆರ್‌ʼ ಚಿತ್ರಗಳು ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಇದೀಗ ಕನ್ನಡದ ʼಕೆಜಿಎಫ್-2ʼ ನಾಲ್ಕನೇ ಸ್ಥಾನದಲ್ಲಿದೆ.

ಕಡಿಮೆ ಅವಧಿಯಲ್ಲಿ ₹ 1000 ಕೋಟಿ ಕ್ಲಬ್‌ ಸೇರಿರುವ ಈ ಸಿನಿಮಾ ದಂಗಲ್‌ ಸಿನಿಮಾದ ಗಳಿಕೆಯನ್ನು ಮೀರಿ ಮುನ್ನುಗುವ ಸಾಧ್ಯತೆಗಳಿವೆ ಎಂದು ಹಿಂದಿ ಸಿನಿಮಾಗಳ ಗಳಿಕೆಯನ್ನು ವಿಶ್ಲೇ‌ಷಣೆ ಮಾಡುವ ತರುಣ್‌ ಆದರ್ಶ್‌ ಹೇಳಿದ್ದಾರೆ.

ರಾಕಿಭಾಯ್ ಹಾವಳಿಗೆ ಇತ್ತೀಚೆಗೆ ತೆರೆಕಂಡ ಅಜಯ್ ದೇವಗನ್ ಅಭಿನಯದ ʼರನ್ ವೇ 34ʼ ಸಿನಿಮಾ ಕೂಡ ನೆಲ ಕಚ್ಚಿದೆ. ಈದ್‌ ಸಮಯದಲ್ಲಿ ಕೆಜಿಎಫ್‌ ಸಿನಿಮಾ ಹೆಚ್ಚು ಕಲೆಕ್ಷನ್‌ ಮಾಡಲಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.