ADVERTISEMENT

ಬರಲಿದೆಯೇ ಕೆಜಿಎಫ್‌ ಚಾಪ್ಟರ್‌ 3: ಸುಳಿವು ಕೊಟ್ಟ ನಿರ್ದೇಶಕ ಪ್ರಶಾಂತ್‌ ನೀಲ್‌?

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 11:46 IST
Last Updated 31 ಡಿಸೆಂಬರ್ 2019, 11:46 IST
   

‘ರಾಕಿಂಗ್‌ ಸ್ಟಾರ್’ ಯಶ್‌ ಮತ್ತು ನಿರ್ದೇಶಕ ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ನಡಿ ತೆರೆಕಂಡ ‘ಕೆಜಿಎಫ್‌ ಚಾಪ್ಟರ್‌ 1’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹಲವು ಮೈಲುಗಲ್ಲಿಗಳಿಗೆ ಮುನ್ನುಡಿ ಬರೆದಿದ್ದು ಎಲ್ಲರಿಗೂ ತಿಳಿದಿದೆ. ಹಾಗಾಗಿ, ‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರದ ಮೇಲೂ ನಿರೀಕ್ಷೆ ದುಪ್ಪಟ್ಟಾಗಿದೆ. ಈಗಾಗಲೇ, ಎರಡನೇ ಭಾಗದ ಶೂಟಿಂಗ್‌ ಶೇಕಡ 50ರಷ್ಟು ಪೂರ್ಣಗೊಂಡಿದೆ.

ಹೈದರಾಬಾದ್‌ನಲ್ಲಿ ವಿವಿಧ ಹಂತದಲ್ಲಿ ಶೂಟಿಂಗ್‌ ನಡೆಸಿದ್ದ ಚಿತ್ರತಂಡ ಈಗ ಬಳ್ಳಾರಿ ಜಿಲ್ಲೆಯ ಸಂಡೂರಿನ ತುಂಗಾ ಮೈನ್ಸ್ ಕಂಪನಿಯಲ್ಲಿ ಶೂಟಿಂಗ್‌ಗಾಗಿ ಬೀಡು ಬಿಟ್ಟಿದೆ. ನಾಯಕ ನಟ ಯಶ್‌ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇನ್ನೂ ಹತ್ತು ದಿನಗಳ ಕಾಲ ಅಲ್ಲಿಯೇ ಶೂಟಿಂಗ್‌ ನಡೆಸಲು ಚಿತ್ರತಂಡ ನಿರ್ಧರಿಸಿದೆ.

ಎರಡನೇ ಅಧ್ಯಾಯ ಮುಗಿದ ಬಳಿಕ ‘ಕೆಜಿಎಫ್‌ ಚಾಪ್ಟರ್‌ 3’ ಬರಲಿದೆಯೇ ಎಂಬ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರಶಾಂತ್‌ ನೀಲ್‌ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಗನ ಫೋಟೊಸಹಿತ ಪ್ರಕಟಿಸಿರುವ ಸುದ್ದಿಯೇ ಈ ಚರ್ಚೆಗೆ ಮೂಲ ಕಾರಣ.

ADVERTISEMENT

‘ನನ್ನ ಮಗನ ಈ ಚಿತ್ರ ಪ್ರಕಟಿಸಿದ ಬಳಿಕ ನಿಮ್ಮ ಮನದಲ್ಲಿ ‘ಕೆಜಿಎಫ್‌ ಚಾಪ್ಟರ್‌ 3’ ಚಿತ್ರವೂ ಬರಲಿದೆಯೇ ಎಂಬ ನಿರೀಕ್ಷೆ ಹುಟ್ಟುವುದು ಸಹಜ. ಆದರೆ, ಇದಕ್ಕೆ ಪ್ರಶಾಂತ್‌ ನೀಲ್‌ ಮಾತ್ರವೇ ಉತ್ತರ ಕೊಡಲು ಸಾಧ್ಯ’ ಎಂದು ಅವರು ಬರೆದುಕೊಂಡಿದ್ದಾರೆ. ಅವರ ಈ ಬರಹ ಕೆಜಿಎಫ್‌ನ ಮೂರನೇ ಅಧ್ಯಾಯಕ್ಕೆ ಮುನ್ನುಡಿಯಾಗಲಿದೆಯೇ? ಎಂಬುದು ಅಭಿಮಾನಿಗಳ ಪ್ರಶ್ನೆ.

ಕೋಲಾರದ ಚಿನ್ನದ ಮಣ್ಣಿನಲ್ಲಿ ಬೆಳೆದ ಹುಡುಗನೊಬ್ಬ ಶ್ರೀಮಂತಿಕೆಯ ಕನಸು ಕಾಣುತ್ತಾ ಮುಂಬೈನ ಕೊಳೆಗೇರಿ ಪ್ರವೇಶಿಸುವುದೇ ‘ಕೆಜಿಎಫ್‌ ಚಾಪ್ಟರ್‌ 1’ರ ಕಥನ. ನರಾಚಿ ಗಣಿ ಸಾಮ್ರಾಜ್ಯದ ಒಡೆಯ ಸೂರ್ಯವರ್ಧನ್‌ನ ಪುತ್ರ ಗರುಡನ ಅಂತ್ಯದೊಂದಿಗೆ ಮೊದಲ ಅಧ್ಯಾಯ ಮುಕ್ತಾಯವಾಗುತ್ತದೆ. ಬಳಿಕ ಆ ಸಾಮ್ರಾಜ್ಯಕ್ಕೆ ಸೂರ್ಯವರ್ಧನ್‌ನ ತಮ್ಮ ‘ಅಧೀರ’ಯ ಪ್ರವೇಶವಾಗುವುದು ಎರಡನೇ ಅಧ್ಯಾಯದಲ್ಲಿ. ಬಾಲಿವುಡ್‌ ನಟ ಸಂಜಯ್‌ ದತ್‌ ಅಧೀರನಾಗಿ ಬಣ್ಣ ಹಚ್ಚಿದ್ದಾರೆ. ರಾಕಿ ಭಾಯ್‌(ಯಶ್‌) ವಿರುದ್ಧ ಅಧೀರ ಹೇಗೆ ಅಬ್ಬರಿಸಲಿದ್ದಾನೆ ಎನ್ನುವ ಕುತೂಹಲ ಮೂಡಿದೆ.

ನರಾಚಿ ಗಣಿ ಮೇಲೆ ಹಲವರ ಕಣ್ಣಿಟ್ಟಿರುವ ಕಥೆಯನ್ನು ಮೊದಲ ಅಧ್ಯಾಯದಲ್ಲಿಯೇ ನಿರ್ದೇಶಕರು ಹೇಳಿದ್ದಾರೆ. ಹಾಗಾಗಿ, ಎರಡನೇ ಅಧ್ಯಾಯದಲ್ಲಿ ಪ್ರಶಾಂತ್‌ ನೀಲ್‌ ಕಥೆ ಪೂರ್ಣಗೊಳಿಸುತ್ತಾರೆಯೇ ಅಥವಾ ಮೂರನೇ ಅಧ್ಯಾಯದಲ್ಲೂ ಈ ಕಥೆಯನ್ನು ಮುಂದುವರಿಸುತ್ತಾರೆಯೇ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಿಗೆ ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.