ADVERTISEMENT

ಕತಾರ್‌ನಲ್ಲಿ ವಿಜೃಂಭಿಸಿದ ‘ಕೆಜಿಎಫ್’

ಬಿ.ಎಂ.ಹನೀಫ್
Published 17 ಆಗಸ್ಟ್ 2019, 4:03 IST
Last Updated 17 ಆಗಸ್ಟ್ 2019, 4:03 IST
ನಟ ಯಶ್‌
ನಟ ಯಶ್‌   

ದೋಹಾ, ಕತಾರ್: ದಕ್ಷಿಣ ಭಾರತದ ಚಿತ್ರರಂಗ ಒಂದಾಗಿ ಸಂಭ್ರಮಿಸಿದ, ಎಂಟನೇ ಪ್ಯಾಂಟಲೂನ್ಸ್ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಗುರುವಾರ ಮಧ್ಯರಾತ್ರಿ ಇಲ್ಲಿಯ ಲುಸೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ಭರ್ಜರಿ ಆರಂಭ ಕಂಡಿತು. ಶುಕ್ರವಾರ ರಾತ್ರಿಯೂ ನಡೆಯಲಿರುವ ಈ ಸಮಾರಂಭದಲ್ಲಿ ಮೊದಲ ದಿನ ಕನ್ನಡದ ಕೆಜಿಎಫ್ ಚಾಪ್ಟರ್ ಒನ್ ಮತ್ತು ತೆಲುಗಿನ ರಂಗಸ್ಥಲಂ ಚಿತ್ರಗಳು ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡು ಬೀಗಿದವು.

ಕನ್ನಡದ ಜನಪ್ರಿಯ ನಟ ಯಶ್ ವೇದಿಕೆಗೆ ಬರುವಾಗ ಮಧ್ಯರಾತ್ರಿಯಾಗಿತ್ತು. ಕೆಜಿಎಫ್ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದುಕೊಂಡ ಯಶ್, ಕನ್ನಡ ಚಿತ್ರವೊಂದು ದೇಶದಾದ್ಯಂತ ಸುದ್ದಿ ಮಾಡಿದ್ದಕ್ಕೆ ಸಂಭ್ರಮಿಸಿದರು. ಕೆಜಿಎಫ್ ಚಿತ್ರಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿಯನ್ನು ರವಿ ಬಸ್ರೂರ್ ಸ್ವೀಕರಿಸಿದರೆ, ಭುವನ್ ಗೌಡ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಗೆದ್ದರು. ಕೆಜಿಎಫ್ ಚಿತ್ರದ "ಸಲಾಂ ರಾಖಿ ಭಾಯ್" ಚಿತ್ರದ ಸಮೂಹಗೀತೆಗಾಗಿ ವಿಜಯಪ್ರಕಾಶ್ ಮತ್ತಿತರರು ಪ್ರಶಸ್ತಿ ಪಡೆದರು.

ಟಗರು ಚಿತ್ರದ ಹಿನ್ನೆಲೆ ಗಾಯನಕ್ಕಾಗಿ ಅನುರಾಧಾ ಭಟ್, ಚೊಚ್ಚಲ ಚಿತ್ರದ ನಟನೆಗಾಗಿ ಡ್ಯಾನಿಶ್ ಸೇಠ್, ಅತ್ಯುತ್ತಮ ಚೊಚ್ಚಲ ಚಿತ್ರ ನಿರ್ದೇಶನಕ್ಕಾಗಿ "ಅಯೋಗ್ಯ" ಚಿತ್ರದ ಮಹೇಶ್ ಕುಮಾರ್ ಮತ್ತು ಅಯೋಗ್ಯ ಚಿತ್ರದ ಗೀತರಚೆನಗಾಗಿ ಚೇತನ್ ಕುಮಾರ್ ಪ್ರಶಸ್ತಿ ಗೆದ್ದು ವೇದಿಕೆಯಲ್ಲಿ ಸಂಭ್ರಮಿಸಿದರು. "ಆ ಕರಾಳ ರಾತ್ರಿ" ಚಿತ್ರದ ನಟನೆಗಾಗಿ ಅನುಪಮಾ ಗೌಡ ಪ್ರಶಸ್ತಿ ಗೆದ್ದರು. ಕನ್ನಡದ ಕಾರ್ಯಕ್ರಮವನ್ನು ನಿರೂಪಿಸಿದ ಅನುಪಮಾ ಗೌಡ, ವಿಜಯ ರಾಘವೇಂದ್ರ ನೆರೆದಿದ್ದ ನೂರಾರು ಕನ್ನಡಿಗರನ್ನು ರಂಜಿಸಿದರು. ಅತ್ಯುತ್ತಮ ಪೋಷಕ ನಟನೆಗಾಗಿ ಅಚ್ಯುತ ಅವರೂ ಪ್ರಶಸ್ತಿ ಗೆದ್ದು ಕನ್ನಡದ ಹಿರಿಮೆಯನ್ನು ಸಾರಿದರು.

ADVERTISEMENT

ತೆಲುಗಿನ "ರಂಗಸ್ಥಲಂ" ಅತ್ಯಧಿಕ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಸಂಗೀತ ನಿರ್ದೇಶಕ ದೇವಿಪ್ರಸಾದ್, ಕ್ಯಾಮೆರಾಮನ್ ರತ್ನವೇಲು, ಗಾಯಕಿ ಮಾನಸಿ ಪ್ರಶಸ್ತಿ ಗೆದ್ದವರಲ್ಲಿ ಪ್ರಮುಖರು. ಶುಕ್ರವಾರ ರಾತ್ರಿ ತಮಿಳು ಮತ್ತು ಮಲಯಾಳಂ ಸಿನಿಮಾಗಳ ಪ್ರಶಸ್ತಿ ಪ್ರದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.