
ಭಜರಂಗ ಸಿನಿಮಾ ಲಾಂಛನದಲ್ಲಿ ವಿರೇನ್ ಸಾಗರ್ ಬಗಾಡೆ ನಿರ್ದೇಶಿಸಿರುವ ‘ಕೈಟ್ ಬ್ರದರ್ಸ್’ ಚಿತ್ರವು ನ.14ರಂದು ಬಿಡುಗಡೆಯಾಗಲಿದೆ.
ಮಂಜುನಾಥ್ ಬಿ.ಎಸ್, ರಜನಿಕಾಂತ್ ರಾವ್ ಹಾಗೂ ಮಂಜುನಾಥ್ ಬಗಾಡೆ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
ಚಿತ್ರದ ಕುರಿತು ಮಾಹಿತಿ ನೀಡಿದ ವಿರೇನ್, ‘ಇದು ಮಕ್ಕಳ ಚಿತ್ರವಾದರೂ ಎಲ್ಲಾ ವಯಸ್ಸಿನವರೂ ನೋಡಬೇಕಾದ ಸಂದೇಶವಿರುವ ಚಿತ್ರ. ಹಳೆಯ ಸರ್ಕಾರಿ ಶಾಲೆಗಳನ್ನು ಸರ್ಕಾರವೇ ದುರಸ್ತಿ ಮಾಡಿಸಲಿ ಎಂದು ಸಮಾಜ ಕಾಯಬಾರದು. ಆ ಶಾಲೆಯಲ್ಲಿ ಕಲಿತವರು ಸಶಕ್ತರಾಗಿ ಬದುಕು ರೂಪಿಸಿಕೊಂಡಾಗ ಆ ಶಾಲೆಯನ್ನು ಅಭಿವೃದ್ಧಿಗೊಳಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ಇದೇ ವಿಷಯವನ್ನು ಇಟ್ಟುಕೊಂಡು ಚಿತ್ರದ ಕಥೆ ಹೆಣೆಯಲಾಗಿದೆ. ಇಲ್ಲಿ ಇಬ್ಬರು ವಿದ್ಯಾರ್ಥಿಗಳು ಅಹಮದಾಬಾದ್‌ನಲ್ಲಿ ನಡೆಯುವ ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ನಡೆಯುವ ಘಟನೆಗಳ ಮೇಲೆ ಕಥೆಯಿದೆ. ಅಲ್ಲಿನ ಗೆಲುವಿನ ಹಣದಿಂದ ಶಾಲೆಯ ದುರಸ್ತಿ ಮಾಡಿಸುತ್ತಾರೆ. ಹಾಗಾಗಿ ಚಿತ್ರಕ್ಕೆ ಈ ಶೀರ್ಷಿಕೆ ಇಡಲಾಗಿದೆ. ಚಿತ್ರದಲ್ಲಿ ಪ್ರಣಿಲ್ ನಾಡಗೀರ್, ಸಮರ್ಥ ಆಶಿ, ವಿನೋದ್ ಬಗಾಡೆ, ಅನಂತ ದೇಶಪಾಂಡೆ, ಪ್ರಭು ಹಂಚಿನಾಳ, ಶ್ರೇಯಾ ಹರಿಹರ, ರಾಜೀವ್ ಸಿಂಗ್ ಹಲವಾಯಿ ಅಭಿನಯಿಸಿದ್ದಾರೆ’ ಎಂದರು.
ಚಿತ್ರಕ್ಕೆ ಅನೀಶ್ ಚೆರಿಯನ್ ಸಂಗೀತ, ಅಶೋಕ್ ಕಶ್ಯಪ್ ಛಾಯಾಚಿತ್ರಗ್ರಹಣವಿದೆ. ಧಾರವಾಡದಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿದೆ. ‘ನಾನು ಈವರೆಗೂ ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಚಿತ್ರಗ್ರಹಣ ಮಾಡಿದ್ದೇನೆ. ಈ ಸಿನಿಮಾದಲ್ಲಿ ಒಳ್ಳೆಯ ಕಥೆ ಮಾಡಿದ್ದಾರೆ. ಸಿನಿಮಾದಲ್ಲಿ ಕೆಲಸ ಮಾಡಿದ ಖುಷಿಯಿದೆ’ ಎಂದರು ಅಶೋಕ್ ಕಶ್ಯಪ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.