ಮುಂಬೈ: ಕಳೆದ ವಾರ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಹೇಳಿಕೆಯನ್ನು ಬಾಂದ್ರಾ ಪೊಲೀಸರು ದಾಖಲಿಸಿಕೊಂಡಿದ್ದಾರೆ.
’ತನ್ನ ಮೇಲೆ ನಡೆದ ದಾಳಿ ಹಾಗೂ ತನ್ನ ಕುಟುಂಬದವರನ್ನು ಹೇಗೆ ರಕ್ಷಿಸಲು ಪ್ರಯತ್ನಿಸಿದೆ ಎಂಬುದರ ಕುರಿತು ಸೈಫ್ ವಿವರಿಸಿದ್ದಾರೆ. ಅಲ್ಲದೆ ದಾಳಿಕೋರನನ್ನು ನಟ ಗುರುತಿಸಿದ್ದಾರೆ‘ ಎಂದೂ ಅವರು ತಿಳಿಸಿದ್ದಾರೆ.
ಘಟನೆ ಕುರಿತು ಸೈಫ್ ಅವರ ಪತ್ನಿ ಕರೀನಾ ಕಪೂರ್ ಮತ್ತು ಅವರ ಮನೆಯ ಸಿಬ್ಬಂದಿಯ ಹೇಳಿಕೆಗಳನ್ನೂ ಪೊಲೀಸರು ಈಗಾಗಲೇ ದಾಖಲಿಸಿಕೊಂಡಿದ್ದಾರೆ.
ಈ ಪ್ರಕರಣದ ಆರೋಪಿ, ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ (30) ಉರುಫ್ ವಿಜಯ್ ದಾಸ್ ಖಾನ್ ಅನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
29ರವರೆಗೂ ಪೊಲೀಸರ ವಶಕ್ಕೆ: ಬಂಧಿತ ಆರೋಪಿಯನ್ನು ಪೊಲೀಸರು ಶುಕ್ರವಾರ ಇಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಿದರು. ಕೋರ್ಟ್ ಆರೋಪಿಯನ್ನು ಜ. 29ರವರೆಗೂ ಪೊಲೀಸರ ವಶಕ್ಕೆ ಒಪ್ಪಿಸಿ ಆದೇಶಿಸಿತು.
ಮಗನ ವಿರುದ್ಧ ಸುಳ್ಳು ಆರೋಪ –ಆರೋಪಿ ತಂದೆ
ನವದೆಹಲಿ: ನಟ ಸೈಫ್ ಅಲಿ ಖಾನ್‌ಗೆ ಇರಿದಿರುವ ಪ್ರಕರಣದಲ್ಲಿ ನನ್ನ ಮಗನನ್ನು ತಪ್ಪಾಗಿ ಆರೋಪಿ ಮಾಡಲಾಗಿದೆ. ಇದರ ವಿರುದ್ಧ ಬಾಂಗ್ಲಾದೇಶ ಸರ್ಕಾರ ಭಾರತದ ರಾಯಭಾರಿ ಕಚೇರಿಗೆ ಮನವಿ ಸಲ್ಲಿಸಲಾಗುವುದು ಎಂದು ಬಂಧಿತ ಆರೋಪಿಯ ತಂದೆ ಹೇಳಿದ್ದಾರೆ.
ಆರೋಪಿ ಶರೀಫುಲ್ ಇಸ್ಲಾಂ ತಂದೆ ಮೊಹಮ್ಮದ್ ರುಹುಲ್ ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ‘ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡುಬಂದಿದ್ದ ವ್ಯಕ್ತಿ ಶರೀಫುಲ್ ಅಲ್ಲ. ಹೀಗಾಗಿ ಮಗನನ್ನು ತಪ್ಪಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.