ADVERTISEMENT

ಕೋಲೆ ಬಸವನ ವಾದ್ಯದಲ್ಲಿ ಮೂಡಿಬಂದ ಕಾಂತಾರ ಸಿನಿಮಾದ ಹಾಡು: ವಿಡಿಯೊ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜನವರಿ 2026, 11:27 IST
Last Updated 16 ಜನವರಿ 2026, 11:27 IST
<div class="paragraphs"><p>ಕೋಲೆ ಬಸವನ ವಾದ್ಯದಲ್ಲಿ ಮೂಡಿಬಂದ ಕಾಂತಾರ ಸಿನಿಮಾದ ಹಾಡು</p></div>

ಕೋಲೆ ಬಸವನ ವಾದ್ಯದಲ್ಲಿ ಮೂಡಿಬಂದ ಕಾಂತಾರ ಸಿನಿಮಾದ ಹಾಡು

   

ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಈ ಸಿನಿಮಾದ ಹಾಡುಗಳು ಕೂಡ ಜನರನ್ನು ಸೆಳೆದಿವೆ. ಈಗ ಕೋಲೆ ಬಸವನೊಬ್ಬ ತನ್ನ ವಾದ್ಯದಲ್ಲಿ ಕಾಂತಾರ ಅಧ್ಯಾಯ –1ರ ಹಾಡನ್ನು ನುಡಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 

ಈ ಬಗ್ಗೆ ಕಾಂತಾರ ಸಿನಿಮಾದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್‌ ಅವರು ‘ಎಕ್ಸ್‌’ನಲ್ಲಿ ವಿಡಿಯೊ ಹಂಚಿಕೊಂಡು, ‘ಹೃದಯದಿಂದ ಸಂಗೀತ ನುಡಿಸಿದಾಗ, ಅದು ಎಲ್ಲಾ ಅಡೆತಡೆಗಳನ್ನು ದಾಟುತ್ತದೆ. ಇಲ್ಲಿಯವರೆಗಿನ ಕಲಾವಿದರೊಬ್ಬರ ಕಾಂತಾರ ಹಾಡಿನ ಅತ್ಯುತ್ತಮ ಗಾಯನ ಇದು. ಇಷ್ಟವಾಯಿತು. ದಯವಿಟ್ಟು ಅವರನ್ನು ಸಂಪರ್ಕಿಸಲು ನನಗೆ ಸಹಾಯ ಮಾಡಿ’ ಎಂದು ಬರೆದುಕೊಂಡಿದ್ದಾರೆ. 

ADVERTISEMENT

ವಿಡಿಯೊದಲ್ಲಿ ಎತ್ತನ್ನು ಹಿಡಿದುಕೊಂಡು ಬಂದ ಕೋಲೆ ಬಸವನೊಬ್ಬ ತನ್ನ ವಾದ್ಯದಲ್ಲಿ ಕಾಂತಾರ ಚಿತ್ರದ ‘ಗೊತ್ತಿಲ್ಲ ಶಿವನೇ..’ ಹಾಡನ್ನು ನುಡಿಸಿದ್ದಾರೆ. ಇದರ ವಿಡಿಯೊ ತುಣುಕು ಈಗ ಎಲ್ಲೆಡೆ ಹರಿದಾಡುತ್ತಿದೆ‌. ವಿಡಿಯೊದ ಮೇಲೆ ‘ಅದಕ್ಕೇ ಹೇಳೋದು, ಕಲೆ ಯಾರಪ್ಪನ ಸೊತ್ತಲ್ಲ’ ಎಂದು ಬರೆಯಲಾಗಿದೆ. 

2022ರಲ್ಲಿ ತೆರೆಕಂಡ ಕಾಂತಾರ ಮತ್ತು 2025ರಲ್ಲಿ ಬಿಡುಗಡೆಯಾದ ಕಾಂತಾರ ಅಧ್ಯಾಯ–1 ಎರಡೂ ಸಿನಿಮಾಗಳಿಗೂ ಅಜನೀಶ್ ಲೋಕನಾಥ್‌ ಸಂಗೀತ ಸಂಯೋಜಕರಾಗಿದ್ದಾರೆ. 

‘ಕಾಂತಾರ ಚಾಪ್ಟರ್ 1’ 2025ರಲ್ಲಿ ಅತೀ ಹೆಚ್ಚು ಹಣ ಗಳಿಸಿದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜತೆಗೆ ಈ ಬಾರಿ ಆಸ್ಕರ್‌ ಅಂಗಳಕ್ಕೂ ಕಾಲಿಟ್ಟಿದ್ದು, ಅತ್ಯುತ್ತಮ ಸಿನಿಮಾ ಪಟ್ಟಿಯಲ್ಲಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.