ADVERTISEMENT

ಅಡಿಕೆ ಕೃಷಿಕ ಸನಿಹ ಬಂದ, ಖಾತೆಯಲ್ಲಿ ಹಣವಿಲ್ಲ ಎಂದ!

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 19:30 IST
Last Updated 28 ಜನವರಿ 2021, 19:30 IST
ರಂಜನಿ ರಾಘವನ್‌
ರಂಜನಿ ರಾಘವನ್‌   

ತಾರಾ ಜೋಡಿ ದಿಗಂತ್‌– ಐಂದ್ರಿತಾ ರೇ ಹಾಗೂ ರಂಜನಿ ರಾಘವನ್‌ ಮುಖ್ಯ ಭೂಮಿಕೆಯಲ್ಲಿರುವ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಶೂಟಿಂಗ್‌ ಶೇ 90ರಷ್ಟು ಮುಗಿದಿದ್ದು, ಮೇ ತಿಂಗಳಿನಲ್ಲಿ ಚಿತ್ರ ತೆರೆಗೆ ಬರಲಿದೆ.

‘ಇದು ಎರಡೂವರೆ ವರ್ಷದ ಪಯಣ, ಇಲ್ಲಿಯ ತನಕ ತಂದು ನಿಲ್ಲಿಸಿದೆ. ಛಾಯಾಗ್ರಾಹಕ ನಂದಕಿಶೋರ್ ಕತೆ ಕೇಳಿದಾಗ ಖುಷಿಯಿಂದ ಕೈಜೋಡಿಸಿದರು. ಪ್ರಜ್ವಲ್‌ ಪೈ ಮೂರು ಚೆಂದದ ಹಾಡುಗಳನ್ನು ಕೊಟ್ಟಿದ್ದಾರೆ. ಇದರಲ್ಲಿ ಮಲೆನಾಡಿನ ಜನಜೀವನ ಬಿಂಬಿಸಲಾಗಿದೆ. ದಿಗಂತ್,‌ ಶಂಕರನಾಗಿ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಅಡಿಕೆ ಬೆಳೆಗಾರ, ಗೊಬ್ಬರದ ಅಂಗಡಿ ಮಾಲೀಕನಾಗಿ ಗಮನ ಸೆಳೆಯುತ್ತಾರೆ. ಜೀವನದಲ್ಲಿ ನಡೆದ ಒಂದು ಘಟನೆಯಿಂದ ಏನೇನು ಅವಾಂತರಗಳು ಆಗುತ್ತವೆ, ಅದರಿಂದ ಹೇಗೆ ಹೊರಗೆ ಬರುತ್ತಾರೆ ಎಂಬುದನ್ನು ಹಾಸ್ಯದ ಮೂಲಕ ತೋರಿಸಿದ್ದೇವೆ. ಕೊನೆಗೆ ಅರ್ಥಪೂರ್ಣ ಸಂದೇಶವನ್ನೂ ನೀಡಿದ್ದೇವೆ’ ಎಂದು ಮಾತಿಗಾರಂಭಿಸಿದರು ನಿರ್ದೇಶಕ ವಿನಾಯಕ ಕೋಡ್ಸರ.

ಐಂದ್ರಿತಾ ರೇ, ರಂಜನಿ ರಾಘವನ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಮಾಶ್ರೀ, ವಿದ್ಯಾಮೂರ್ತಿ, ರವಿಕಿರಣ್, ಯಶವಂತ್‌ ಸರದೇಶಪಾಂಡೆ, ಕಾಸರಗೋಡು ಚಿನ್ನಾ ಹಾಗೂ ನೀನಾಸಂ ಕಲಾವಿದರು ತಾರಾಗಣದಲ್ಲಿದ್ದಾರೆ.ಸಾಗರ, ಸಿಗಂದೂರು ಮತ್ತು ಬೆಂಗಳೂರು ಕಡೆಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಡಬ್ಬಿಂಗ್ ಕೆಲಸವೂ ಅರ್ಧದಷ್ಟು ಆಗಿದೆ. ಶೀರ್ಷಿಕೆ ಅಂತಿಮಗೊಳಿಸಲು ಎರಡು ತಿಂಗಳೇ ಬೇಕಾಯಿತು. ಈ ಶೀರ್ಷಿಕೆ ಯಾಕಾಗಿ ಇಟ್ಟಿದ್ದೇವೆ ಎನ್ನುವುದು ಚಿತ್ರನೋಡಿದ ಮೇಲೆ ಪ್ರೇಕ್ಷಕರಿಗೆ ಮನದಟ್ಟಾಗುತ್ತವೆ ಎನ್ನುವ ಮಾತನ್ನೂ ಸೇರಿಸಿದರು.

ADVERTISEMENT

‘ನಾನು ಸಹ ಮಲೆನಾಡಿನವನು. ಮಲೆನಾಡಿನ ಭಾಗದ ಕತೆಯಲ್ಲಿ ನಟಿಸಬೇಕೆಂಬ ಬಯಕೆ ಇತ್ತು. ನಿರ್ದೇಶಕರು ಕಥೆ ಹೇಳಿದಾಗ ಇಷ್ಟವಾಯಿತು. ಮಲೆನಾಡಿನಟಿಪಿಕಲ್ ಹುಡುಗನ ಪಾತ್ರದಲ್ಲಿ ನಟಿಸಿದ್ದು, ಹಳೇ ಮೋಟರ್‌ ಬೈಕ್, ಮಾರುತಿ 800 ಕಾರು ಚಲಾಯಿಸುವೆ. ಏಳು ವರ್ಷಗಳ ನಂತರ ಐಂದ್ರಿತಾ ಜತೆಗೆ ನಟಿಸಿರುವುದು ಖುಷಿಯಾಗಿದೆ. ಛಾಯಾಗ್ರಹಕರು ನಿಟ್ಟೂರನ್ನು ಚೆನ್ನಾಗಿ ತೋರಿಸಿದ್ದಾರೆ. ಅವರಿಗೆ ಥ್ಯಾಂಕ್ಸ್ ಹೇಳಲೇಬೇಕು’ ಎಂದರು ನಟ ದಿಗಂತ್.

‘ಈ ಸಿನಿಮಾ ಒಪ್ಪಿಕೊಳ್ಳಲು ಎರಡು ಕಾರಣಗಳು ಇವೆ. ಇದರಲ್ಲಿ ಒಂದು ಪ್ರಜ್ವಲ್‌ ಪೈ ಸಂಗೀತವಾದರೆ, ಮತ್ತೊಂದು ಚಿತ್ರದ ಕಥೆ’ ಎನ್ನುವ ಚುಟುಕು ಮಾತು ಐಂದ್ರಿತಾ ಅವರದು.

‘ಚಿತ್ರಕಥೆ ಓದುವಾಗ ಚಿತ್ರ ನೋಡಿದಂತೆಯೇ ಭಾಸವಾಗುತ್ತಿತ್ತು. ಮಲೆನಾಡಿನ ಹುಡುಗಿ ಸೌಮ್ಯ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಮಲೆನಾಡಿನ ಕನ್ನಡ ಮಾತನಾಡಲು ಮೊದಲು ಕಷ್ಟವಾಗುತ್ತಿತ್ತು. ಈ ಚಿತ್ರದ ಭಾಗವಾಗಿರುವುದಕ್ಕೆ ತುಂಬಾ ಖುಷಿ ಇದೆ’ ಎಂದರು ರಂಜನಿ ರಾಘವನ್.

ಉಪ್ಪಿ ಎಂಟರ್‌ಟೈನರ್ ಬ್ಯಾನರ್‌ನಡಿ ನಿರ್ಮಾಪಕ ಸಿಲ್ಕ್‌ ಮಂಜು ಬಂಡವಾಳ ಹೂಡಿದ್ದಾರೆ. ಪ್ರಜ್ವಲ್‌ ಪೈ ಅವರ ಸಂಗೀತ, ನಂದಕಿಶೋರ್ ಅವರ ಛಾಯಾಗ್ರಹಣ, ವೇಣು ಹಸ್ರಾಳಿ ಅವರ ಸಂಭಾಷಣೆ ಹಾಗೂ ರಾಹುಲ್ ಅವರ ಸಂಕಲನ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.