ADVERTISEMENT

Sandalwood: ಸೆಟ್ಟೇರಿದ ಆಸ್ಕರ್ ಕೃಷ್ಣ ನಿರ್ದೇಶನದ 'ಕುಡುಕ ನನ್ಮಕ್ಳು' ಚಿತ್ರ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 23:30 IST
Last Updated 15 ಡಿಸೆಂಬರ್ 2025, 23:30 IST
ಚಿತ್ರದ ಮುಹೂರ್ತ 
ಚಿತ್ರದ ಮುಹೂರ್ತ    

ನಿರ್ದೇಶಕ ಆಸ್ಕರ್ ಕೃಷ್ಣ ನಿರ್ದೇಶನದ ಎಂಟನೇ ಚಿತ್ರ ‘ಕುಡುಕ ನನ್ಮಕ್ಳು’ ಸಿನಿಮಾ ಇತ್ತೀಚೆಗೆ ಸೆಟ್ಟೇರಿತು. ಚಿತ್ರಸಾಹಿತಿ ವಿ.ನಾಗೇಂದ್ರ ಪ್ರಸಾದ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್‌ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. 

‘ತುಂಬಾ ಒಳ್ಳೆಯವರು’ ಎಂಬ ಅಡಿಬರಹವಿರುವ ಈ ಸಿನಿಮಾವನ್ನು ಅರುಣ ಶೆಟ್ಟಿ, ವೈಶಾಲಿ ಮುರಳೀಧರ್ ಕೊಟ್ಟೂರು, ಪಲ್ಲವಿ ಅರುಣ್ ಅಗ್ನಿಹೋತ್ರಿ, ಎಸ್.ಎಚ್.ಬಾಬು ತುಮಕೂರು, ನಿಂಗರಾಜು.ಬಿ, ಲೋಕೇಶ್.ಎಸ್, ಸಿದ್ದಲಿಂಗಯ್ಯ ಮತ್ತು ರವೀಂದ್ರ ನಾಯಕ್ ಜಂಟಿಯಾಗಿ ಕಲಾ ಭೂಮಿ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣ ಮಾಡಲಿದ್ದಾರೆ. 

‘ನಿರ್ಮಾಪಕರೆಲ್ಲರೂ ಹಲವು ವರ್ಷಗಳಿಂದ ಸ್ನೇಹಿತರು. ಒಮ್ಮೆ ಔಪಚಾರಿಕವಾಗಿ ಪಾರ್ಟಿ ಮಾಡುವಾಗ ಹುಟ್ಟಿಕೊಂಡ ಕಥೆಯೇ ಇದು. ಇದು ಯಾವುದೇ ಕಾರಣಕ್ಕೂ ಮದ್ಯಪಾನಿಗಳಿಗೆ ಬೈಗುಳವಲ್ಲ. ಸಹಜವಾಗಿ ನಾವು ಮಾತನಾಡುವುದನ್ನೇ ಶೀರ್ಷಿಕೆ ಇಡಲಾಗಿದೆ. ಎಲ್ಲಾ ಕುಡುಕರ ಪ್ರತಿನಿಧಿಗಳಾಗಿ 25,30,35 ಹಾಗೂ 40 ವರ್ಷ ವಯಸ್ಸಿನ ನಾಲ್ಕು ಪಾತ್ರಗಳು ಸಾಗುತ್ತವೆ. ಆಯಾ ವಯಸ್ಸಿನಲ್ಲಿ ಅವರ ಚಿಂತನೆಗಳು, ಅಭಿಪ್ರಾಯಗಳು, ನಡವಳಿಕೆ ಏನಿರುತ್ತದೆ? ಕುಡಿತದಿಂದ ದೈಹಿಕವಾಗಿ, ಮಾನಸಿಕವಾಗಿ, ಕೌಟಂಬಿಕವಾಗಿ ಹಾಗೂ ಸಾಮಾಜಿಕವಾಗಿ ಆಗುವ ಸಮಸ್ಯೆಗಳು ಏನು ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗುವುದು. ಬೆಂಗಳೂರು, ಮೈಸೂರು, ಮಂಡ್ಯದಲ್ಲಿ ಚಿತ್ರೀಕರಣ ನಡೆಯಲಿದ್ದು, ಜನವರಿ 2ರಿಂದ ಶೂಟಿಂಗ್‌ ಆರಂಭವಾಗಲಿದೆ’ ಎನ್ನುತ್ತಾರೆ ಆಸ್ಕರ್ ಕೃಷ್ಣ.

ADVERTISEMENT

‘ಮಜಾಭಾರತ’, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಂದ್ರಪ್ರಭ, ವಿನೋದ್ ಗೊಬ್ಬರಗಾಲ, ಮಿಮಿಕ್ರಿ ಗೋಪಿ ಮತ್ತು ಸಚಿನ್ ಪುರೋಹಿತ್ ಸಿನಿಮಾದ ಮುಖ್ಯ ಪಾತ್ರದಲ್ಲಿದ್ದು, ಚೈತ್ರಾ ಕೊಟ್ಟೂರು, ಲಯಾ ಕೋಕಿಲ, ಧರಣಿ, ನಿಸರ್ಗ ಮಂಜುನಾಥ್, ಪ್ರಿಯಾಂಕ, ಮಮತಾ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮಂಜುಕವಿ ಸಂಗೀತ, ವಿನಯ್‌ ಗೌಡ ಛಾಯಾಚಿತ್ರಗ್ರಹಣ, ವೆಂಕಟ್‌ ಚಿತ್ರಕಥೆ, ವೈಲೆಂಟ್‌ ವೇಲು ಸಾಹಸ ನಿರ್ದೇಶನ ಚಿತ್ರಕ್ಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.