ADVERTISEMENT

ಮೆಚ್ಯೂರಿಟಿ ಇಲ್ಲದ ಪ್ರಣಯ ಪ್ರಹಸನ

ಪದ್ಮನಾಭ ಭಟ್ಟ‌
Published 3 ಆಗಸ್ಟ್ 2018, 13:59 IST
Last Updated 3 ಆಗಸ್ಟ್ 2018, 13:59 IST
‘ಕುಮಾರಿ 21 ಎಫ್‌’ ಚಿತ್ರದಲ್ಲಿ ನಿಧಿ ಕುಶಾಲಪ್ಪ
‘ಕುಮಾರಿ 21 ಎಫ್‌’ ಚಿತ್ರದಲ್ಲಿ ನಿಧಿ ಕುಶಾಲಪ್ಪ   

ಸಿನಿಮಾ: ಕುಮಾರಿ 21 ಎಫ್‌

ನಿರ್ಮಾಪಕ: ಸಂಪತ್‌ ಕುಮಾರ್‌, ಶ್ರೀಧರ ರೆಡ್ಡಿ

ನಿರ್ದೇಶನ: ಶ್ರೀಮಾನ್‌ ವೇಮುಲ

ADVERTISEMENT

ತಾರಾಗಣ: ಪ್ರಣಾಮ್‌ ದೇವರಾಜ್‌, ನಿಧಿ ಕುಶಾಲಪ್ಪ, ರವಿ ಕಾಳೆ, ಅವಿನಾಶ್‌, ರಿತೀಶ್‌, ಅಕ್ಷಯ್‌, ಮನೋಜ್‌, ಚಿದಾನಂದ್

‘‘ನನ್ನನ್ನು ಪ್ರೀತಿಸುವಷ್ಟು ಮೆಚ್ಯೂರಿಟಿ ನಿಂಗಿನ್ನೂ ಬಂದಿಲ್ಲ; ಅದು ಬಂದ ಮೇಲೆ ಬಾ. ನಿನ್ನ ಪ್ರೀತಿಯನ್ನು ಒಪ್ಪಿಕೊಳ್ತೇನೆ’’ ಇದು ‘ ಕುಮಾರಿ 21 ಎಫ್‌’ ಚಿತ್ರದ ದೃಶ್ಯದಲ್ಲಿ ನಾಯಕಿ, ನಾಯಕನಿಗೆ ಹೇಳುವ ಮಾತು. ಇಡೀ ಸಿನಿಮಾ ನೋಡಿದ ಮೇಲೆ ನಿರ್ದೇಶಕರಿಗೂ ಅದೇ ಧಾಟಿಯಲ್ಲಿ ‘ನಿಮಗಿನ್ನೂ ಇಂಥ ಸಂಗತಿಗಳನ್ನು ಸಿನಿಮಾ ಮಾಧ್ಯಮದಲ್ಲಿ ಸಮರ್ಥವಾಗಿ ನಿರ್ವಹಿಸುವಷ್ಟು ಮೆಚ್ಯೂರಿಟಿ ಬಂದಿಲ್ಲ. ಬಂದ ಮೇಲೆ ಸಿನಿಮಾ ಮಾಡಿದ್ದರೆ ಚೆನ್ನಿತ್ತು’ ಎಂದು ಹೇಳಬೇಕು ಅನಿಸುತ್ತದೆ.

ಈ ಚಿತ್ರ ಆಧುನಿಕ ಮನಸ್ಥಿತಿಯ ಹೆಣ್ಣಿನ ಅಸ್ಮಿತೆಯ ಕುರಿತು ಕೆಲವು ಮುಖ್ಯ ಪ್ರಶ್ನೆಗಳನ್ನು ಎತ್ತುತ್ತದೆ. ಆದರೆ ಮತ್ತದೇ ಸಾಂಪ್ರದಾಯಿಕ ಮನಸ್ಥಿತಿಗೆ ಇಳಿದು ತಾನು ಎತ್ತಿದ್ದ ಪ್ರಶ್ನೆಗಳನ್ನೇ ಹಿನಾಯವಾಗಿ ತುಳಿದು ಮುಚ್ಚಿ ಹಾಕಿ ನಾಯಕ ಪ್ರಧಾನ ಸಿನಿಮಾ ಆಗಲು ಹವಣಿಸುತ್ತದೆ.

‘ಪ್ರತೀ ಹುಡುಗರ ಕಥೆಯ ಹಿಂದೆಯೂ ಒಂದು ಕ್ರಂ ಇರುತ್ತೆ. ಆ ಕ್ರೈಂ ಹಿಂದೆ ಹುಡುಗೀರು ಇರ್ತಾರೆ’ ಎಂಬ ನಾಯಕನ ಮಾತಿನಿಂದಲೇ ಸಿನಿಮಾ ಶುರುವಾಗುತ್ತದೆ. ಇದು ನಿರ್ದೇಶಕರ ಮನಸ್ಥಿತಿಯನ್ನು ಸೂಚಿಸುವ ಮಾತೂ ಹೌದು. ಹಾಗಾಗಿಯೇ ಹೆಣ್ಣಿನ ಶೀಲ– ಆಶ್ಲೀಲಗಳ ಕುರಿತು ಅನುಮಾನದಿಂದ ನೋಡುವ ಸಮಾಜದ ದೃಷ್ಟಿಯನ್ನು ಪ್ರತಿಭಟಿಸುವ ಕಥೆಯನ್ನು ಹೇಳಹೊರಟಂತೆ ಮೇಲ್ನೋಟಕ್ಕೆ ಕಾಣಿಸಿದರೂ ಆ ನೋಟ ಸೋಗಿನದ್ದು ಎಂದು ಹೇಳದೆ ವಿಧಿಯಿಲ್ಲ.

ಕುಮಾರಿ, ದಿಟ್ಟ (?) ಹುಡುಗಿ. ರಾತ್ರಿ ಹೊತ್ತಲ್ಲಿ ಯಾರೋ ತನ್ನನ್ನು ಬರೀ ಐನೂರು ರೂಪಾಯಿಗೆ ಕರೆದ ಎಂಬ ಕಾರಣಕ್ಕೆ ಕೋಪದಿಂದ ಅಟ್ಟಿಸಿಕೊಂಡು ಹೋಗುವವಳು. ‘ಬರೀ ಐನೂರಕ್ಕೆ ಬರಲು ಹೇಳ್ತಾನೆ. ಬರೀ ನನ್ನ ಸೊಂಟಕ್ಕೆ ಐದು ಸಾವಿರ ಬೆಲೆ ಕಟ್ಟಬಹುದಲ್ವಾ?’ ಎಂದು ಆಗಷ್ಟೇ ಸಿಕ್ಕ ಇನ್ನೊಬ್ಬ ಹುಡುಗನಲ್ಲಿ ತುಂಟತನದಿಂದ ಕೇಳಬಲ್ಲವಳು. ಪ್ರೇಮಕ್ಕಿಂತ, ಕ್ರಶ್‌, ಕಂಡ ಕೂಡಲೇ ಬೇಕು ಅನಿಸುವ ಭಾವಗಳೇ ಹೆಚ್ಚು ಆಹ್ಲಾದಕರ ಎಂದು ನಂಬಿದವಳು. ಆ ಕ್ಷಣದಲ್ಲಿಯೇ ಅವಳ ಮಿದುಳಲ್ಲಿ ಯಾವ್ಯಾವುದೋ ಹಾರ್ಮೋನುಗಳು ಉತ್ಪಾದನೆಯಾಗಿ ಪ್ರೇಮವುಂಟಾಗಿ ನಾಯಕನಿಗೆ ಪ್ರಪೋಸ್‌ ಕೂಡ ಮಾಡುತ್ತಾಳೆ.

‘ಇಷ್ಟು ಬೋಲ್ಡ್‌ ಆಗಿರುವವಳ ಕ್ಯಾರೆಕ್ಟರ್ ಸರಿ ಇದ್ದೀತಾ? ಅವಳು ಇನ್ನೂ ಕನ್ಯೆ ಆಗಿರಬಹುದಾ’ ಎಂಬ ಅನುಮಾನ ನಾಯಕನಿಗೆ. ಅವನ ಅನುಮಾನಕ್ಕೆ ಪುಷ್ಟಿ ನೀಡುವಂಥ ಸಾಕ್ಷಿಗಳೇ ಸಿಗುತ್ತ ಹೋಗುತ್ತದೆ. ಅವಳು ಅದನ್ನು ನಿರಾಕರಿಸುವುದೂ ಇಲ್ಲ. ಒಂದೊಮ್ಮೆ ತಾನು ಹಲವರೊಂದಿಗೆ ಓಡಾಡಿದ್ದರೂ ಅದನ್ನು ಒಪ್ಪಿಕೊಂಡು ತನ್ನ ಪ್ರೀತಿಸುವಷ್ಟು ಪ್ರಬುದ್ಧ ಆಗಬೇಕು ಎಂಬುದು ಅವಳ ಆಸೆ.

‘ಹೆಣ್ಣಿನ ಭೂತಕಾಲ ಕ್ಯಾರೆಕ್ಟರ್, ಅವಳ ಉಡುಗೆ ತೊಡಗೆ, ಅವಳಿಗೆ ಎಷ್ಟು ಜನ ಹುಡುಗರು ಫ್ರೆಂಡ್ಸ್‌ ಇದ್ದಾರೆ ಎನ್ನುವುದೆಲ್ಲ ಪ್ರೀತಿಸುವುದಕ್ಕೆ ಅರ್ಹತೆ ಆಗಬೇಕಿಲ್ಲ’ ಎನ್ನುವುದನ್ನು ಹೇಳಹೊರಟಿದ್ದಾರೆ ನಿರ್ದೇಶಕರು. ಆದರೆ, ಕೊನೆಗೂ ಅವಳು ಯಾರ ಜೊತೆಗೂ ಅಡ್ಡಾಡಿದವಳಲ್ಲ, ಕನ್ಯೆಯೇ ಆಗಿದ್ದಳು ಎಂಬುದು ತಿಳಿದು ನಾಯಕನಿಗೆ ಮನಃಪರಿವರ್ತನೆಯಾಗುತ್ತದೆ. ತನ್ನ ಸ್ನೇಹಿತರಿಂದಲೇ ಅತ್ಯಾಚಾರಕ್ಕೊಳಗಾದ ಅವಳಿಗೆ ಅವನು ‘ಬಾಳು ಕೊಡುತ್ತಾನೆ’ ಎಂಬ ಪುರುಷಪ್ರಧಾನ ದೃಷ್ಟಿಕೋನದ ಸ್ಥಾಪನೆಯೊಂದಿಗೇ ಸಿನಿಮಾ ಮುಗಿಯುತ್ತದೆ.

ನಾಯಕಿ ಮೇಲೆ ಅತ್ಯಾಚಾರ ನಡೆದಾಗ ಅವಳ ಸೀರೆ ಮೇಲಿನ ರಕ್ತದ ಕಲೆಯನ್ನು ನೋಡಿ ಅವಳು ಕನ್ಯೆಯೇ ಆಗಿದ್ದಳು ಎಂದು ನಾಯಕನಿಗೆ ಅರಿವಾಗಿ ದುಃಖಿಸುವ ಸನ್ನಿವೇಶವಂತೂ ನಿರ್ದೇಶಕರ ಅಭಿರುಚಿಯ ಕುರಿತೇ ಅಸಹ್ಯ ಹುಟ್ಟಿಸುವಂತಿದೆ.

ನಾಯಕಿ ಪ್ರಧಾನ ಚಿತ್ರ ಎಂದು ಹೇಳಿಕೊಂಡಿದ್ದರೂ ಇಡೀ ಚಿತ್ರದಲ್ಲಿ (ಕೆಲವು ದೃಶ್ಯಗಳನ್ನು ಹೊರತುಪಡಿಸಿ) ನಾಯಕಿಯ ಪಾತ್ರ ‘ಗ್ಲ್ಯಾಮರ್‌ ಮಟೀರಿಯಲ್‌’ ಆಗಿಯಷ್ಟೇ ಬಳಕೆಯಾಗಿದೆ. ಪಾರ್ಟಿಯಲ್ಲಿ, ಮನೆಯಲ್ಲಿ, ಬಟ್ಟೆ ಒಣಗಿಸುವಾಗ, ದುಃಖಿಸುವಾಗ, ಮೂವರು ವಿಕೃತರಿಂದ ಅತ್ಯಾಚಾರಕ್ಕೊಳಗಾಗಿ ಬಿದ್ದಿರುವಾಗಲೂ ನಾಯಕಿಯನ್ನು ಮಾದಕವಾಗಿಯೇ ತೋರಿಸಿರುವುದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕೋ ತಿಳಿಯದು.

ನಾಯಕ– ನಾಯಕಿ ಪಾತ್ರಗಳು ಸ್ಥಿರತೆಯೇ ಇಲ್ಲದೆ ಸೊರಗಿವೆ. ಪರಮನೀಚರ ಜತೆಗಿರುವ ನಾಯಕ ಮಾತ್ರ ತುಂಬ ಸಭ್ಯ ಎಂದು ತೋರಿಸಿರುವುದಾಗಲಿ, ಹುಡುಗ ಇಷ್ಟ ಆದ ಎಂದ ಕೂಡಲೇ ತನ್ನ ಬೆತ್ತಲೆ ಮೈಯನ್ನು ತೋರಿಸಿಬಿಡುತ್ತಾಳೆ ಎನ್ನುವಂತೆ ಬಿಂಬಿಸುವುದಾಗಲಿ ಒಪ್ಪಿಕೊಳ್ಳುವುದು ಕಡುಕಷ್ಟ.

ಇಂದಿನ ಆಧುನಿಕ ಹೆಣ್ಣುಮಕ್ಕಳ ಅಸ್ಮಿತೆಯನ್ನು ಎತ್ತಿಹಿಡಿಯುವ ಮತ್ತು ಪುರುಷ ಪ್ರಧಾನ ಮನಸ್ಥಿತಿಯನ್ನು ಬೆತ್ತಲು ಮಾಡುವ ಒಳ್ಳೆಯ ಸಿನಿಮಾ ಆಗುವ ಅವಕಾಶದಿಂದ ಈ ಚಿತ್ರಕ್ಕಿತ್ತು. ಆದರೆ ನಾಯಕಿಯ ಮೈಯ ಬೆತ್ತಲನ್ನು ಸಾಧ್ಯವಾದಷ್ಟೂ ತೋರಿಸಬೇಕು ಎಂಬ ಹಟದಲ್ಲಿ, ಹೆಣ್ಣಿನ ಮನಸೊಳಗೆ ಇಳಿಯುವ ಘನ ಅವಕಾಶದಿಂದ ವಿಮುಖವಾಗಿ ಆತ್ಮಹತ್ಯೆ ಮಾಡಿಕೊಂಡಿದೆ.

ನಾಯಕ ಪ್ರಣಾಮ್‌ ದೇವರಾಜ್‌ ನಟನೆಯನ್ನೂ, ಲಾಲಿತ್ಯವಿಲ್ಲದ ಕುಣಿತವನ್ನೂ ಇನ್ನಷ್ಟು ತಿದ್ದಿಕೊಳ್ಳಲೇಬೇಕು. ಅವರಿಗೆ ಹೋಲಿಸಿದರೆ ನಿಧಿ ಕುಶಾಲಪ್ಪ ಅವರೇ ನಟನೆಯಲ್ಲಿ ಪರವಾಗಿಲ್ಲ ಎನಿಸುತ್ತಾರೆ. ‘ರಸಿಕರ ಕಂಗಳ ಸೆಳೆಯುವ ನೋಟ’ವುಳ್ಳ ಹಲವು ದೃಶ್ಯಗಳಲ್ಲಿಯೂ ಅವರು ಲೀಲಾಜಾಲವಾಗಿ ಕಾಣಿಸಿಕೊಂಡಿದ್ದಾರೆ.

ಇದು ತೆಲುಗಿನ ಇದೇ ಹೆಸರಿನ ಚಿತ್ರದ ರಿಮೇಕ್‌. ಹೆಚ್ಚೂ ಕಮ್ಮಿ ‘ಫ್ರೇಮ್‌ ಟು ಫ್ರೇಮ್‌’ ಎನ್ನಬಹುದಾದಷ್ಟು ಯಥಾವತ್ತು ನಕಲಿ ಮಾಡಿರುವುದರಿಂದ ಛಾಯಾಗ್ರಹಣವಾಗಲಿ, ಇತರೆ ತಾಂತ್ರಿಕ ವಿಷಯಗಳ ಬಗೆಗಾಗಲಿ ಉಲ್ಲೇಕಿಸುವ ಅವಶ್ಯಕತೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.