ರೀವಾ ರಚ್ಛ
ಸಣ್ಣ ಬಜೆಟ್‌ನ ಸಿನಿಮಾಗಳು ದೊಡ್ಡಮಟ್ಟದ ಯಶಸ್ಸು ಕಾಣುವುದು ಬಲು ವಿರಳ. ಸ್ಟಾರ್ ನಟರಿಲ್ಲದ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಚಾರವಿಲ್ಲದ ಸಿನಿಮಾಗಳು ನೂರು ಕೋಟಿ ಕ್ಲಬ್ ಸೇರುವುದು ಬಹಳ ಅಪರೂಪ. ₹50 ಲಕ್ಷ ಬಜೆಟ್‌ನಲ್ಲಿ ನಿರ್ಮಾಣಗೊಂಡ ಗುಜರಾತಿ ಚಿತ್ರ ‘ಲಾಲೋ: ಕೃಷ್ಣ ಸದಾ ಸಹಾಯತೇ’ ₹100 ಕೋಟಿ ಗಳಿಕೆ ಕಂಡು ದೇಶದ ಚಿತ್ರರಂಗವೇ ಅಚ್ಚರಿಪಡುವಂತೆ ಮಾಡಿದೆ. ಅ.10ರಂದು ತೆರೆಕಂಡ ಚಿತ್ರ ಈಗಲೂ ಗುಜರಾತ್ ಮತ್ತು ದೇಶದ ಹಲವು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಕೃಷ್ಣ ಭಕ್ತಿಯ ಜತೆಗೆ ಇವತ್ತಿನ ಕಾಲದ ಡ್ರಾಮಾ ಕಥಾಹಂದರ ಹೊಂದಿರುವ ಚಿತ್ರಕ್ಕೆ ಅಂಕಿತ್ ಸಾಖಿಯಾ ನಿರ್ದೇಶನವಿದೆ. ಸಂಕಷ್ಟದಲ್ಲಿ ಸಿಲುಕಿಕೊಳ್ಳುವ ರಿಕ್ಷಾ ಚಾಲಕನೊಬ್ಬ ಕೃಷ್ಣನ ಆದೇಶದಂತೆ ಹೇಗೆ ಪಾರಾಗಿ ಬರುತ್ತಾನೆ ಎಂಬುದೇ ಚಿತ್ರಕಥೆ. ನಿರ್ಮಾಣ ಸಂಸ್ಥೆ ಹೊರತುಪಡಿಸಿ ಚಿತ್ರತಂಡದಲ್ಲಿ ಬಹುತೇಕರು ಹೊಸಬರು.
ರೀವಾ ರಚ್ಛ, ಶ್ರುಹದ್ ಗೋಸ್ವಾಮಿ, ಕರಣ್ ಜೋಶಿ ಮತ್ತು ಬೇಬಿ ಮಿಷ್ಟಿ ಕಡೇಚಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮೊದಲ ವಾರ ₹33 ಲಕ್ಷ, ಎರಡನೇ ವಾರ ₹27 ಲಕ್ಷ ಮತ್ತು ಮೂರನೇ ವಾರ ₹62 ಲಕ್ಷ ಗಳಿಕೆ ಮಾಡಿಕೊಂಡಿದ್ದ ‘ಲಾಲೋ’ ಜನರ ಬಾಯಿ ಮಾತಿನಿಂದಲೇ ಯಶಸ್ಸಾಗುತ್ತ ಹೋಯಿತು.
ಶ್ರೀಕೃಷ್ಣ ಬಹುತೇಕ ಗುಜರಾತಿಗಳ ಮನೆದೇವರು. ಕೃಷ್ಣ ಪವಾಡವನ್ನೇ ಆಧುನಿಕ ಸಂಕಷ್ಟಗಳಿಗೆ ಥಳುಕು ಹಾಕಿ ಕಥೆ ಹೆಣೆಯಲಾಗಿದೆ. ಬಾಲಿವುಡ್‌ನ ‘ಓಹ್ ಮೈ ಗಾಡ್’, ಕನ್ನಡದ ‘ಮುಕುಂದ ಮುರಾರಿ’ ಚಿತ್ರದ ರೀತಿಯಲ್ಲೇ ದೇವರಿದ್ದಾನೆಯೇ ಎಂಬ ಪ್ರಶ್ನೆಗೆ ಖುದ್ದು ದೇವರೇ ಬಂದು ಉತ್ತರ ನೀಡುವುದೇ ಚಿತ್ರದ ಒಟ್ಟಾರೆ ಕಥೆ. ಚಿತ್ರಕ್ಕೆ ವಿಮರ್ಶಕ ವಲಯದಿಂದ, ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ಇದ್ದರೂ ಚಿತ್ರಮಂದಿರಗಳಿಗೆ ಲಗ್ಗೆ ಇಡುವ ಪ್ರೇಕ್ಷಕರ ಸಂಖ್ಯೆ ಮಾತ್ರ ಕುಸಿಯುತ್ತಿಲ್ಲ.
ಕನ್ನಡದಲ್ಲಿ ಇತ್ತೀಚೆಗೆ ‘ಸು ಫ್ರಂ ಸೋ’ ಇಂಥದ್ದೆ ಗೆಲುವು ಕಂಡಿತ್ತು. ಆದರೆ ಚಿತ್ರದ ಬಜೆಟ್ ಈ ಚಿತ್ರಕ್ಕಿಂತ ತುಸು ಹೆಚ್ಚಿತ್ತು. ಹಿಂದಿಯ ‘ಸೈಯಾರಾ’ ಚಿತ್ರ ಕೂಡ ಸ್ಟಾರ್ ನಟರಿಲ್ಲದೆ ₹500 ಕೋಟಿಗಿಂತ ಹೆಚ್ಚು ಗಳಿಕೆ ಕಂಡಿತ್ತು. 2019ರಲ್ಲಿ ತೆರೆಕಂಡ ‘ಚಾಲ್ ಜೀವ ಲೈಯೇ’ ₹50 ಕೋಟಿ ಗಳಿಕೆ ಕಂಡು, ಈತನಕ ಗರಿಷ್ಠ ಗಳಿಕೆ ಕಂಡ ಗುಜರಾತಿ ಸಿನಿಮಾ ಎನಿಸಿಕೊಂಡಿತ್ತು. ಅದರ ದಾಖಲೆಯನ್ನು ‘ಲಾಲೋ’ ಮುರಿದು ಹಾಕಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.