ದುನಿಯಾ ವಿಜಯ್
‘ಕಾಟೇರ’ ಸಿನಿಮಾದ ಕಥೆಗಾರ ಜಡೇಶ ಕೆ. ಹಂಪಿ ನಿರ್ದೇಶನದ, ‘ದುನಿಯಾ’ ವಿಜಯ್ ನಟನೆಯ ಸಿನಿಮಾ ‘ಲ್ಯಾಂಡ್‌ಲಾರ್ಡ್’ ದಸರಾ ಅಥವಾ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಸಾರಥಿ ಫಿಲಂಸ್ ಬ್ಯಾನರ್‌ನಡಿಯಲ್ಲಿ ಹೇಮಂತ್ ಗೌಡ ಕೆ.ಎಸ್ ಹಾಗೂ ಕೆ.ವಿ ಸತ್ಯಪ್ರಕಾಶ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ನಡೆಯುತ್ತಿದೆ ಎಂದು ಚಿತ್ರತಂಡ ತಿಳಿಸಿದೆ. ವರಮಹಾಲಕ್ಷ್ಮಿ ಹಬ್ಬದಂದು ಚಿತ್ರತಂಡ ಹೊಸ ಸುದ್ದಿ ನೀಡಿದ್ದು, ಆನಂದ್ ಆಡಿಯೊ ಕಂಪನಿ ‘ಲ್ಯಾಂಡ್‌ಲಾರ್ಡ್’ ಚಿತ್ರದ ಆಡಿಯೊ ಹಕ್ಕುಗಳನ್ನು ದೊಡ್ಡ ಬೆಲೆಗೆ ಖರೀದಿಸಿದೆ. ಈ ಆಲ್ಬಂ ವಿಶೇಷತೆಗಳಿಂದ ಕೂಡಿದ್ದು, ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್ ಎಂದಿದೆ ಚಿತ್ರತಂಡ.
ಚಿತ್ರದಲ್ಲಿ ವಿಜಯ್ ಅವರ ಮಗಳಾದ ರಿತಿನ್ಯ ನಟಿಸುತ್ತಿದ್ದು, ರಚಿತಾರಾಮ್ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ಸ್ವತಂತ್ರ ಭೂಮಿಯ ಕಲ್ಪನೆ, ಶಿಕ್ಷಣ, ಕೂಲಿಗೆ ತಕ್ಕ ಕಾಸು ಎಂಬ ವಿಷಯಗಳ ಕುರಿತು ಚಿತ್ರ ಕಥಾಹಂದರವಿದೆ. ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಈ ಕಥೆಯಲ್ಲಿ ಅಸ್ತಿತ್ವದ ಹೋರಾಟವಿದೆ. ಸ್ವಾವಲಂಬಿಯಾಗಬೇಕು ಎನ್ನುವ ನಾಯಕನ ಯೋಚನೆ ಹೇಗೆ ಕ್ರಾಂತಿಯಾಗುತ್ತದೆ ಎನ್ನುವುದೇ ಕಥೆಯ ಜೀವಾಳ ಎಂದು ಚಿತ್ರತಂಡ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.