ADVERTISEMENT

ಇಲಿ ಜೊತೆ ಲಾಸ್ಯಾ ದೋಸ್ತಿ!

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 19:30 IST
Last Updated 21 ಏಪ್ರಿಲ್ 2020, 19:30 IST
ಲಾಸ್ಯಾ ನಾಗರಾಜ್
ಲಾಸ್ಯಾ ನಾಗರಾಜ್   

ನಟಿ ಲಾಸ್ಯಾ ನಾಗರಾಜ್ ಉದಯ ಟಿ.ವಿ.ಯ ‘ಮಧುಮಗಳು’ ಧಾರಾವಾಹಿ ಮೂಲಕ ಕ್ಯಾಮೆರಾ ಎದುರಿನ ನಟನಾ ಪಯಣ ಆರಂಭಿಸಿದರು. ಇದಾದ ಬಳಿಕ ಆಕೆಗೆ ‘ಪದ್ಮಾವತಿ’ ಸೀರಿಯಲ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿತು. ರಾಜೇಶ್‌ ವೇಣೂರ್‌ ಆ್ಯಕ್ಷನ್‌ ಕಟ್‌ ಹೇಳಿದ್ದ ‘ಅಸತೋಮ ಸದ್ಗಮಯ’ ಚಿತ್ರದ ಮೂಲಕ ಹಿರಿತೆರೆಗೂ ಕಾಲಿಟ್ಟರು. ಎರಡನೇ ನಾಯಕಿಯ ಪಾತ್ರಗಳಿಗೆ ಸೀಮಿತರಾಗಿದ್ದ ಅವರು, ಈಗ ಪೂರ್ಣಪ್ರಮಾಣದ ನಾಯಕಿಯಾಗುವ ಖುಷಿಯಲ್ಲಿದ್ದಾರೆ.

‘ಹೆಲೆನ್’ ಕಳೆದ ವರ್ಷ ತೆರೆಕಂಡ ಮಲಯಾಳದ ಸೂಪರ್ ಹಿಟ್ ಚಿತ್ರ. ಇದನ್ನು ನಿರ್ದೇಶಿಸಿದ್ದು ಮಾತುಕುಟ್ಟಿ ಕ್ಸೇವಿಯರ್. ನಾಯಕಿ ಪ್ರಧಾನವಾದ ಇದು ಕನ್ನಡಕ್ಕೆ ರಿಮೇಕ್ ಆಗುತ್ತಿದೆ. ಮಾಲಿವುಡ್‌ನಲ್ಲಿ ಅನ್ನಾ ಬೆನ್‌ ನಿರ್ವಹಿಸಿದ್ದ ಪಾತ್ರವನ್ನು ಲಾಸ್ಯಾ ನಿಭಾಯಿಸುತ್ತಿದ್ದಾರೆ. ಈ ಹಿಂದೆ ‘ಮಮ್ಮಿ’ ಮತ್ತು ‘ದೇವಕಿ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಲೋಹಿತ್ ಎಚ್. ಇದರ ರಿಮೇಕ್‌ ಹಕ್ಕು ಪಡೆದಿದ್ದು, ಕ್ರಿಯೇಟಿವ್‌ ಡೈರೆಕ್ಟರ್‌ ಆಗಿ ಕೆಲಸ ನಿರ್ವಹಿಸಲಿದ್ದಾರೆ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಎಂ. ಅರುಣ್‌ಕುಮಾರ್‌.

ಫ್ರೀಜರ್‌ ರೂಮ್‌ನಲ್ಲಿ ಸಿಲುಕಿಕೊಳ್ಳುವ ಯುವತಿಯೊಬ್ಬಳು ಅಲ್ಲಿಯೇ ಇಡೀ ರಾತ್ರಿ ಕಳೆಯಬೇಕಾಗುತ್ತದೆ. ಮೈನಸ್‌ ಡಿಗ್ರಿ ಚಳಿಯಲ್ಲಿ ನರಳಾಟ ಅನುಭವಿಸುತ್ತಾಳೆ. ಕೊನೆಗೆ, ಹೇಗೆ ಜೀವಂತವಾಗಿ ಬದುಕಿ ಹೊರಗೆ ಬರುತ್ತಾಳೆ ಎನ್ನುವುದೇ ಇದರ ಕಥಾಹಂದರ.

ADVERTISEMENT

ಜುಲೈ ವೇಳೆಗೆ ಚಿತ್ರೀಕರಣ ಪೂರ್ಣಗೊಳಿಸಲು ಚಿತ್ರತಂಡ ಉತ್ಸಾಹದಲ್ಲಿತ್ತು. ಕೊರೊನಾ ಭೀತಿಯಿಂದಾಗಿ ಶೂಟಿಂಗ್‌ ಆರಂಭಗೊಂಡಿಲ್ಲ. ಪ್ರಸ್ತುತ ಲಾಸ್ಯಾ ಚೆನ್ನೈನಲ್ಲಿದ್ದಾರೆ. ಅಲ್ಲಿ ಹೆಲೆನ್‌ ಪಾತ್ರದ ತಯಾರಿ ನಡೆಸುತ್ತಿದ್ದಾರಂತೆ.

‘ಇದು ನನ್ನ ವೃತ್ತಿಬದುಕಿನಲ್ಲಿಯೇ ಸವಾಲಿನ ಪಾತ್ರ. ನನ್ನೊಳಗಿನ ನಟನೆಯ ಸಾಬೀತಿಗೆ ಒಳ್ಳೆಯ ವೇದಿಕೆ ಒದಗಿಸಿದೆ’ ಎಂದು ‘ಪ್ರಜಾ ಪ್ಲಸ್‌’ ಜೊತೆಗೆ ಖುಷಿ ಹಂಚಿಕೊಂಡರು.

ಅನುಷ್ಕಾ ಶೆಟ್ಟಿ, ಪ್ರಿಯಾಂಕಾ ಚೋಪ್ರಾ, ಮಾಲಾಶ್ರೀ ನಟನೆಯ ಸಿನಿಮಾಗಳನ್ನು ನೋಡಿದಾಗ ಅವರಿಗೂ ಅಂತಹ ಮಹಿಳಾ ಕೇಂದ್ರಿತ ಚಿತ್ರಗಳಲ್ಲಿ ನಟಿಸುವ ಆಸೆಯಾಗುತ್ತಿತ್ತಂತೆ. ಆ ಆಸೆಯನ್ನು ಈ ಚಿತ್ರದ ಮೂಲಕ ಈಡೇರಿಸಿಕೊಂಡ ಸಂತಸ ಅವರದು.

‘ಸಿನಿಮಾದ ಬಹುತೇಕ ಭಾಗದ ಚಿತ್ರೀಕರಣ ನಡೆಯುವುದುಫ್ರೀಜರ್‌ ರೂಮ್‌ನಲ್ಲಿಯೇ. ಆ ಚಳಿಯ ವಾತಾವರಣಕ್ಕೆ ಹೊಂದಿಕೊಳ್ಳಲು ತಯಾರಿ ನಡೆಸಿದ್ದೇನೆ. ಚಿತ್ರದಲ್ಲಿ ಗ್ಲಾಮರ್‌ಗೆ ಹೆಚ್ಚಿನ ಆದ್ಯತೆ ಇಲ್ಲ. ಮುಖಭಾವದ ನಟನೆಗೆ ಹೆಚ್ಚು ಪ್ರಾಧಾನ್ಯವಿದೆ. ಪಾತ್ರಕ್ಕೆ ತಕ್ಕಂತೆ ಕಾರ್ಯಾಗಾರದ ಮೂಲಕ ತರಬೇತಿ ಪಡೆಯುತ್ತಿದ್ದೇನೆ’ ಎನ್ನುತ್ತಾರೆ ಅವರು.

ಚಿತ್ರದಲ್ಲಿ ಇಲಿಯೊಂದು ಪ್ರಮುಖ ಪಾತ್ರ ನಿರ್ವಹಿಸಲಿದೆ. ಈಗಾಗಲೇ, ಲಾಸ್ಯಾ ಎರಡು ಬಿಳಿ ಇಲಿಗಳ ಸಹವಾಸವನ್ನೂ ಮಾಡಿದ್ದಾರಂತೆ. ‘ಸಿನಿಮಾದಲ್ಲಿ ಇಲಿ ಪ್ರಧಾನ ಪಾತ್ರವಹಿಸಲಿದೆ. ನಾಯಕಿಯ ಮೈಮೇಲೆ ಓಡಾಡುತ್ತದೆ. ಆದರೆ, ನನಗೆ ಇಲಿಗಳನ್ನು ಕಂಡರೆ ವಿಪರೀತ ಭಯ. ಒಂದು ತಿಂಗಳ ಹಿಂದೆಯೇ ಇಲಿಗಳನ್ನು ಖರೀದಿಸಿದ್ದು, ಈಗ ಅವುಗಳೊಟ್ಟಿಗೆ ಕಾಲ ಕಳೆಯುತ್ತಿವೆ. ನನ್ನೊಳಗಿನ ಭಯ ದೂರವಾಗಿದೆ. ಅವು ನನ್ನ ಸ್ನೇಹ ಬಳಗಕ್ಕೆ ಸೇರಿವೆ. ಇನ್ನೂ ಅವುಗಳಿಗೆ ಸಾಕಷ್ಟು ತರಬೇತಿ ಬೇಕಿದೆ. ಶೂಟಿಂಗ್‌ ವೇಳೆಗೆ ಪಳಗುತ್ತವೆ’ ಎನ್ನುವುದು ಅವರ ವಿಶ್ವಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.