ADVERTISEMENT

Sandalwood: ಸೆಟ್ಟೇರಿತು ‘ಲೂಸ್ ಮಾದ’

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 23:30 IST
Last Updated 1 ಆಗಸ್ಟ್ 2025, 23:30 IST
ಯೋಗೇಶ್‌
ಯೋಗೇಶ್‌   

‘ದುನಿಯಾ’ ಚಿತ್ರದ ಬಳಿಕ ‘ಲೂಸ್ ಮಾದ’ ಪಾತ್ರದಿಂದಲೇ ಚಿರಪರಿಚಿತರಾದವರು ನಟ ಯೋಗೇಶ್‌. ಅದೇ ಹೆಸರಿನ ಚಿತ್ರವೊಂದು ಇತ್ತೀಚೆಗಷ್ಟೇ ಸೆಟ್ಟೇರಿದೆ. ರಂಜಿತ್ ಕುಮಾರ್ ಗೌಡ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ.

‘ಲೂಸ್ ಮಾದ’ ನನ್ನ‌ ನಿರ್ದೇಶನದ ಮೂರನೇ‌ ಚಿತ್ರ. ಇದು ಕರಾವಳಿ ಭಾಗದಲ್ಲಿ ನಡೆಯುವ ಕಥೆ. ಉಡುಪಿ, ಸುರತ್ಕಲ್ ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣವಾಗಲಿದೆ. ಆಗಸ್ಟ್ 25ರಿಂದ ಚಿತ್ರೀಕರಣ ಆರಂಭವಾಗಲಿದೆ. ಎಲ್ಲಾ ಪ್ರಾಣಿಗಳಿಗಿಂತ ತೋಳವನ್ನು ಪಳಗಿಸುವುದು ಸ್ವಲ್ಪ ಕಷ್ಟ. ಅದು ಯಾರ ಮಾತನ್ನು ಕೇಳದ ಪ್ರಾಣಿ. ನಮ್ಮ ಚಿತ್ರದಲ್ಲಿ ನಾಯಕನ ಸ್ವಭಾವವೂ ಅದೇ ರೀತಿ. ಯಾವುದಕ್ಕೂ ಹಾಗೂ ಯಾರಿಗೂ ಬಗ್ಗದ ಹುಡುಗ. ಈ ಹಿಂದೆ ಯೋಗೇಶ್ ಅವರು ಮಾಡಿರುವ ಪಾತ್ರಗಳಿಗಿಂತ ಭಿನ್ನ ಪಾತ್ರ. ಕಿಶೋರ್‌ ಕೂಡ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆದಿ ಲೋಕೇಶ್, ಅಚ್ಯುತ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ತಾರಾಬಳಗದಲ್ಲಿದ್ದಾರೆ’ ಎಂದು ಮಾಹಿತಿ ನೀಡಿದರು ನಿರ್ದೇಶಕರು. 

ಜಾನಕಿ ಕಂಬೈನ್ಸ್ ಲಾಂಛನದಲ್ಲಿ ಧರ್ಮೇಂದ್ರ ಬಂಡವಾಳ ಹೂಡುತ್ತಿದ್ದಾರೆ. ‘ನಿರ್ದೇಶಕರು ನನಗೆ ಬಹಳ ವರ್ಷಗಳ ಪರಿಚಯ. ಈ ಹಿಂದೆ ನಮ್ಮಿಬ್ಬರ ಕಾಂಬಿನೇಶನ್‌ನಲ್ಲಿ ‘ಕಂಸ’ ಎಂಬ ಸಿನಿಮಾ ಆರಂಭವಾಗಬೇಕಿತ್ತು. ಕಾರಣಾಂತರದಿಂದ ಆ ಸಿನಿಮಾ ವಿಳಂಬವಾಯಿತು. ಈಗ ‘ಲೂಸ್ ಮಾದ’ ಸಿನಿಮಾ ಶುರುವಾಗಿದೆ‌‌. ಈ ಶೀರ್ಷಿಕೆಯನ್ನಿಟ್ಟುಕೊಂಡು ಹಿಂದೆ ಸಾಕಷ್ಟು ನಿರ್ಮಾಪಕರು ಚಿತ್ರ ಮಾಡಲು ಮುಂದಾಗಿದ್ದರು. ನಾನೇ ಬೇಡ ಎನ್ನುತ್ತಿದ್ದೆ. ಆದರೆ ಈ ಕಥೆಗೂ ಶೀರ್ಷಿಕೆಗೂ ಪೂರಕವಾಗಿದೆ. ‘ದುನಿಯಾ’ ಸಿನಿಮಾದ ಲೂಸ್ ಮಾದನ‌ ಪಾತ್ರಕ್ಕೂ ಈ ಚಿತ್ರದ ಪಾತ್ರಕ್ಕೂ ಸಂಬಂಧ ಇರುವುದಿಲ್ಲ’ ಎಂದರು ಯೋಗೇಶ್‌.

ADVERTISEMENT

ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ, ಪ್ರದೀಪ್ ರೆಡ್ಡಿ ಛಾಯಾಚಿತ್ರಗ್ರಹಣ, ರಂಜನ್‌ ಸಂಕಲನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.