ADVERTISEMENT

ಮತ್ತೆ ಗೆಲ್ಲುತ್ತೇನೆ: ಯೋಗಿ

ವಿನೋದ್‌ ಪ್ರಭಾಕರ್‌ ಜತೆಗೆ ಹೊಸ ಸಿನಿಮಾ

​ಪ್ರಜಾವಾಣಿ ವಾರ್ತೆ
Published 7 ಮೇ 2020, 19:30 IST
Last Updated 7 ಮೇ 2020, 19:30 IST
ಲೂಸ್‌ ಮಾದ ಯೋಗಿ
ಲೂಸ್‌ ಮಾದ ಯೋಗಿ    

ಯೋಗಿ ಅವರು ಮರಿ ಟೈಗರ್ ವಿನೋದ್ ಪ್ರಭಾಕರ್ ಜೊತೆ ತೆರೆ ಹಂಚಿಕೊಳ್ಳಲು ಅಣಿಯಾಗಿದ್ದಾರೆ. ಜೊತೆಯಲ್ಲೇ, ತಮ್ಮದೇ ಆದ ನಿರ್ಮಾಣ ಸಂಸ್ಥೆ ಆರಂಭಿಸಿ ಹೊಸ ಸಿನಿಮಾ ನಿರ್ಮಾಣಕ್ಕೆ ಕೂಡ ಮುಂದಾಗಿದ್ದಾರೆ.

‘ನಾನು ಕೈಯಲ್ಲಿ ಏನೂ ಇಲ್ಲದೆ ಸಿನಿಮಾ ಉದ್ಯಮಕ್ಕೆ ಬಂದೆ. ದುನಿಯಾ ಸಿನಿಮಾದಲ್ಲಿ ಒಂದಿಷ್ಟು ಹಣ ದುಡಿದೆವು. ಆದರೆ, ಯಕ್ಷ ಸಿನಿಮಾದಲ್ಲಿ ಸೋಲು ಕಂಡೆವು. ಅಲ್ಲಿ ಹಣ ಕಳೆದುಕೊಂಡೆವು. ಅದಾದ ನಂತರ ನಮಗೆ ಚೇತರಿಸಿಕೊಳ್ಳಲು ತುಸು ಸಮಯ ಬೇಕಾಯಿತು. ನಮಗೆ ಬೇರೆ ದಾರಿ ಇಲ್ಲ. ಸಿನಿಮಾದಲ್ಲಿ ಕಳೆದುಕೊಂಡಿದ್ದನ್ನು ಸಿನಿಮಾದ ಮೂಲಕವೇ ಪಡೆದುಕೊಳ್ಳಬೇಕು’ ಎಂದು ನಟ ಯೋಗಿ ತಮ್ಮ ನೋವು ತೋಡಿಕೊಂಡರು.

ಯೋಗಿ ಅವರು ಈಚೆಗೆ ಒಂದು ಸಂದರ್ಶನದಲ್ಲಿ ತುಸು ಬೇಸರದಿಂದ ಮಾತನಾಡಿದ್ದರು. ‘ಏಕೆ ಬೇಸರ’ ಎಂದು ಪ್ರಶ್ನಿಸಿದರೆ, ‘ಎಲ್ಲ ಕ್ಷೇತ್ರಗಳಲ್ಲಿಯೂ ಇರುವಂತೆ ಸಿನಿಮಾ ಕ್ಷೇತ್ರದಲ್ಲಿಯೂ ಏಳುಬೀಳುಗಳು ಇರುತ್ತವೆ. ಒಂದಿಷ್ಟು ಬೇಸರ ನನ್ನ ಮನಸ್ಸಿನಲ್ಲಿ ಇತ್ತು. ಅದನ್ನು ಹಂಚಿಕೊಂಡೆ. ಯಶಸ್ಸು ಬಂದಾಗ ಎಲ್ಲರೂ ಇರುತ್ತಾರೆ. ಸೋತಾಗ ಬೆರಳೆಣಿಕೆಯಷ್ಟು ಜನ ಮಾತ್ರ ನಮ್ಮ ಜೊತೆ ಉಳಿದುಕೊಳ್ಳುತ್ತಾರೆ’ ಎಂದು ಹೇಳಿದರು.

ADVERTISEMENT

‘ಈಗ ಎಲ್ಲವೂ ಸುಧಾರಿಸುತ್ತಿದೆ. ಎಲ್ಲ ವ್ಯವಹಾರಗಳು ನಡೆಯುತ್ತಿವೆ. ಕಷ್ಟವಿದ್ದಾಗಲೂ ಜೀವನ ನಡೆಯುತ್ತಿತ್ತು. ಈಗಲೂ ಹಣಕಾಸಿನ ಒತ್ತಡ ಒಂದಿಷ್ಟು ಇದೆ. ಇನ್ನೂ ಒಂದೂವರೆ ವರ್ಷ ಇರುತ್ತೆ ಈ ಸ್ಥಿತಿ. ಅಲ್ಲಿಯವರೆಗೆ ತಾಳ್ಮೆ ಬೇಕು’ ಎಂದು ಹೇಳಿದರು.

‘ನಂದ ಲವ್ಸ್ ನಂದಿತಾ’ ಚಿತ್ರದಲ್ಲಿ ಜಿಂಕೆ ಮರೀನಾ ಹಾಡಿಗೆ ಹೆಜ್ಜೆ ಇಟ್ಟು, ಕಾಲೇಜು ಹುಡುಗರೂ ಆ ಹಾಡಿಗೆ ಹೆಜ್ಜೆ ಇರಿಸುವಂತೆ ಮಾಡಿದ್ದ ಯೋಗಿ ಅಲಿಯಾಸ್ ಲೂಸ್ ಮಾದ, ಈಗ ವಿನೋದ್ ಪ್ರಭಾಕರ್ ಜೊತೆ ಒಂದು ಸಿನಿಮಾ ಮಾಡಲು ಅಣಿಯಾಗುತ್ತಿದ್ದಾರೆ.

ಇದರ ಚಿತ್ರೀಕರಣವು ಇಷ್ಟೊತ್ತಿಗಾಗಲೇ ಶುರುವಾಗಬೇಕಿತ್ತು. ಆದರೆ, ಕೊರೊನಾ ಲಾಕ್‌ಡೌನ್‌ ಕಾರಣದಿಂದಾಗಿ ಇದು ಮುಂದಕ್ಕೆ ಹೋಗಿದೆ.

‘ವಿನೋದ್ ಪ್ರಭಾಕರ್ ಜೊತೆಗಿನ ನನ್ನ ಸಿನಿಮಾ ನಿರ್ದೇಶನವನ್ನು ಪ್ರಮೋದ್ ಎನ್ನುವವರು ಮಾಡಲಿದ್ದಾರೆ. ಆ್ಯಕ್ಷನ್ ಆಧಾರಿತ ಸಿನಿಮಾ ಇದು. ನನ್ನ ಪಾತ್ರ ಯಾವ ರೀತಿ ಇರುತ್ತದೆ ಎಂಬುದನ್ನು ಈಗಲೇ ಹೇಳಲಾರೆ. ನಾನು ಮತ್ತು ವಿನೋದ್‌ ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದೇವೆ. ಇದು ಮಾಸ್ ಸಿನಿಮಾ ಆಗಿರಲಿದೆ’ ಎಂದು ಯೋಗಿ ತಿಳಿಸಿದರು.

ಈ ಚಿತ್ರದ ಶೀರ್ಷಿಕೆ ಇನ್ನೂ ಅಂತಿಮ ಆಗಿಲ್ಲವಂತೆ. ಇದರ ಚಿತ್ರೀಕರಣವು ಮೈಸೂರಿನಲ್ಲಿ ನಡೆಯಲಿದೆಯಂತೆ. ‘ನಾನು ನನ್ನದೇ ಆದ ಸಿನಿಮಾ ನಿರ್ಮಾಣ ಕಂಪನಿ ಶುರು ಮಾಡಿದ್ದೇನೆ. ಇದರ ಅಡಿ ಕಂಸ ಎಂಬ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ನಾನೇ ಇದರ ಹೀರೊ. ನಾಯಕಿ ಯಾರಾಗಬೇಕು ಎಂಬ ಬಗ್ಗೆ ಮಾತುಕತೆ ನಡೆದಿದೆ. ರಂಜಿತ್ ಗೌಡ ಅವರು ಇದರ ನಿರ್ದೇಶನದ ಹೊಣೆ ಹೊರಲಿದ್ದಾರೆ. ಇದರ ಕೆಲಸಗಳು ಜುಲೈನಲ್ಲಿ ಶುರುವಾಗಬೇಕಿತ್ತು. ಆದರೆ, ಈಗ ಅದು ಕೂಡ ತುಸು ಮುಂದಕ್ಕೆ ಹೋಗಬಹುದು’ ಎಂದು ತಿಳಿಸಿದರು.

ಇವಲ್ಲದೆ, ಬೇರೆ ಹೊಸ ಸಿನಿಮಾಗಳ ಬಗ್ಗೆ ಕೂಡ ಲಾಕ್‌ಡೌನ್‌ ಅವಧಿಯಲ್ಲಿ ಒಂದಿಷ್ಟು ಮಾತುಕತೆಗಳು ನಡೆದಿವೆಯಂತೆ. ಲಾಕ್‌ಡೌನ್‌ ತೆರವಾದ ನಂತರ ನಿರ್ಮಾಪಕರನ್ನು ಭೇಟಿಯಾಗಿ ಮಾತನಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.