ADVERTISEMENT

‘ಮಾದೇವ’ ಸಿನಿಮಾ ನಟ ವಿನೋದ್‌ ಪ್ರಭಾಕರ್‌ ಸಂದರ್ಶನ: ನಾಯಕನಿಗೆ ಸಂಭಾಷಣೆ ಕಡಿಮೆ!

ಅಭಿಲಾಷ್ ಪಿ.ಎಸ್‌.
Published 31 ಮೇ 2025, 0:40 IST
Last Updated 31 ಮೇ 2025, 0:40 IST
ಸೋನಲ್‌, ವಿನೋದ್‌ 
ಸೋನಲ್‌, ವಿನೋದ್‌    

ನಾಯಕನಿಗೆ ಪ್ರತಿ ದೃಶ್ಯಗಳಲ್ಲೊಂದು ಪಂಚಿಂಗ್‌ ಡೈಲಾಗ್ಸ್‌ ಸಿನಿಮಾದ ಸಿದ್ಧಸೂತ್ರಗಳಲ್ಲೊಂದು. ಆದರೆ ಜೂನ್‌ 6ರಂದು ತೆರೆಕಾಣಲಿರುವ ‘ಮಾದೇವ’ ಸಿನಿಮಾ ಇದಕ್ಕೆ ತದ್ವಿರುದ್ಧವಾಗಿದೆ. ಈ ಸಿನಿಮಾದಲ್ಲಿ ‘ಮಾದೇವ’ನೆಂಬ ವ್ಯಕ್ತಿಯ ಪಾತ್ರ ನಿಭಾಯಿಸುತ್ತಿರುವ ನಟ ವಿನೋದ್‌ ಪ್ರಭಾಕರ್‌ ಅವರಿಗೆ ಇಡೀ ಸಿನಿಮಾದಲ್ಲಿರುವ ಒಟ್ಟು ಸಂಭಾಷಣೆಯ ಅವಧಿ ಕೇವಲ ಮೂರ್ನಾಲ್ಕು ನಿಮಿಷವಷ್ಟೇ! ಹೌದು. ಒಂದು ಭಿನ್ನವಾದ ಪಾತ್ರದೊಂದಿಗೆ ಪ್ರೇಕ್ಷಕರೆದುರಿಗೆ ಬರಲಿರುವ ವಿನೋದ್ ಸಿನಿಮಾ ಹಾಗೂ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. 

‘ನನ್ನ ಈ ‘ಮಾದೇವ’ ಸಿನಿಮಾ ತಾಂತ್ರಿಕ ಕಾರಣಗಳಿಂದ ವಿಳಂಬವಾಯಿತು. ಮೇ 30ರಂದು ಚಿತ್ರ ಬಿಡುಗಡೆ ಮಾಡಬೇಕು ಎಂದುಕೊಂಡಿದ್ದೆವು. ಆದರೆ ಪ್ರಚಾರಕ್ಕೆ ಸಿದ್ಧರಾಗುತ್ತಿರುವ ಸಂದರ್ಭದಲ್ಲಿ ಪಹಲ್ಗಾಮ್‌ ದಾಳಿ ನಡೆಯಿತು. ದೇಶಕ್ಕಿಂತ ಮಿಗಿಲು ಬೇರೇನಿಲ್ಲ ಎಂದುಕೊಂಡು ಮುಂದೂಡಿದೆವು. ಇದಕ್ಕೆ ನಿರ್ಮಾಪಕರೂ ಬೆನ್ನೆಲುಬಾಗಿ ನಿಂತರು’ ಎಂದು ಮಾತು ಆರಂಭಿಸಿದ ವಿನೋದ್‌, ‘ನಾನು ಸಿನಿಮಾದೊಳಗೆ ನಾಯಕನಾಗಿ ಎಂದೂ ಕೆಲಸ ಮಾಡಿಲ್ಲ. ಒಬ್ಬ ತಂತ್ರಜ್ಞನಾಗಿ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಿದ್ದೇನೆ. ಇದು ರಕ್ತದಲ್ಲೇ ಬಂದಿದೆ. ‘ಇದು ನಾನು ಮಾಡಿದ ಕಥೆ, ಇದರಲ್ಲಿ ಯಾರ ಹಸ್ತಕ್ಷೇಪವೂ ಇರಬಾರದು’ ಎನ್ನುವ ಮನಃಸ್ಥಿತಿ ಎಲ್ಲಾ ನಿರ್ದೇಶಕರಿಗೂ ಇರುತ್ತದೆ. ಆದರೆ ನಮ್ಮ ಈ ಸಿನಿಮಾದ ನಿರ್ದೇಶಕರಾದ ನವೀನ್‌ ರೆಡ್ಡಿಯವರು ನಮ್ಮೆಲ್ಲರ ಸಲಹೆಗಳನ್ನು ಪಡೆದು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದರು. ನನ್ನ ಸಿನಿಪಯಣದಲ್ಲಿ ಬಹಳ ಮುಖ್ಯವಾದ ಸಿನಿಮಾ ಈ ‘ಮಾದೇವ’. ಒಬ್ಬ ನಟನಾಗಿ ಪರಿವರ್ತನೆ ಆಗುವ ಅವಕಾಶವನ್ನು ಈ ಸಿನಿಮಾ ನೀಡಿದೆ. ನನಗೆ ಆ್ಯಕ್ಷನ್‌ನಲ್ಲಿ ವಹಿವಾಟು ಇದೆ ಎಂದು ಗೊತ್ತಿತ್ತು. ಸತತವಾಗಿ ಆ್ಯಕ್ಷನ್‌ ಸಿನಿಮಾಗಳನ್ನು ಮಾಡಿದೆ. ಫೈಟ್‌ಗಾಗಿ ದೃಶ್ಯಗಳನ್ನು ಬರೆಯುತ್ತಿದ್ದರು. ಇದರಿಂದಾಗಿ ಕಥೆ ಹಾದಿ ತಪ್ಪುತ್ತಿತ್ತು. ನಟನೆಗೆ ಅವಕಾಶ ಸಿಗುತ್ತಿಲ್ಲವಲ್ಲ ಎಂಬ ಕೊರಗು ಇತ್ತು. ಅದು ಈ ಸಿನಿಮಾದಿಂದ ನೀಗಿದೆ’ ಎಂದರು. 

‘ಕೋವಿಡ್‌ ಸಂದರ್ಭದಲ್ಲಿ ನಿರ್ದೇಶಕರು ನನಗೆ ಈ ಸಿನಿಮಾದ ಕಥೆ ಹೇಳಿದ್ದರು. ನನಗೂ ಮೊದಲೇ ಒಂದಿಷ್ಟು ಹೀರೊಗಳ ಬಳಿಗೆ ಅವರು ಹೋಗಿದ್ದರು. ಜೈಲುಗಳಲ್ಲಿ ಅಪರಾಧಿಗಳಿಗೆ ನೇಣುಹಾಕುವ ವ್ಯಕ್ತಿಯ(ಹ್ಯಾಂಗ್‌ಮ್ಯಾನ್‌) ಪಾತ್ರವೇ ಎಂದು ತಿರಸ್ಕರಿಸಿದ್ದರು. ನಾನು ಮಾಡಿದ ಸಂಶೋಧನೆಯ ಪ್ರಕಾರ ನಾಯಕನೊಬ್ಬ ಇಂತಹ ಪಾತ್ರವನ್ನು ನಿಭಾಯಿಸಿರುವುದು ಕಾಣಿಸಿಲ್ಲ. ಈ ಪಾತ್ರ ಭಿನ್ನವಾಗಿದೆ ಎಂದು ನನಗೆ ಅನಿಸಿತು. 1984ರಲ್ಲಿ ತೆರೆಕಂಡ ನನ್ನ ತಂದೆಯವರ ಸಿನಿಮಾ ‘ಜಿದ್ದು’ವಿನಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಅನ್ಯಾಯವನ್ನು ತಡೆಯಲಾರದೆ ಮೃಗವಾಗಿ ಬದಲಾಗುತ್ತಾನೆ. ಈ ಘಟನೆ ನನಗೆ ಸ್ಫೂರ್ತಿಯಾಗಿತ್ತು. ಇದನ್ನು ಎಲ್ಲಿಯಾದರೂ ಬಳಸಿಕೊಳ್ಳಬೇಕು ಎನ್ನುವ ಆಸೆ ಇತ್ತು. ‘ಮಾದೇವ’ ಸಿನಿಮಾದಲ್ಲಿ ನನ್ನ ಪಾತ್ರವೂ ಇದೇ ರೀತಿಯಿದೆ. ಮೃಗವಾಗಿದ್ದ ವ್ಯಕ್ತಿ ಮನುಷ್ಯನಾಗಿ ಬದಲಾಗಿ ಬಳಿಕ ರಾಕ್ಷಸನಾಗುವ ಹಂತಗಳಿವೆ. ‘ಮಾದೇವ’ನ ಬಾಲ್ಯದಲ್ಲಿ ನಡೆದ ಘಟನೆಯೊಂದು ಆತನಿಗೆ ಆಘಾತವನ್ನು ಉಂಟು ಮಾಡಿರುತ್ತದೆ. ಇದರಿಂದ ಆತ ಮಾತು, ಭಾವನೆಗಳನ್ನು ಮರೆತುಬಿಟ್ಟಿರುತ್ತಾನೆ. ಇಡೀ ಸಿನಿಮಾದಲ್ಲಿ ನನಗೆ ಕೇವಲ ಮೂರ್ನಾಲ್ಕು ನಿಮಿಷದ ಸಂಭಾಷಣೆಯಿದೆ. ಈ ಪಾತ್ರ ಮಾತನಾಡಿದರೆ ಗತ್ತು ಕಳೆದುಕೊಳ್ಳುತ್ತದೆ. ಕಣ್ಣಿನಿಂದಲೇ ಮಾತನಾಡುವ ಪಾತ್ರವಿದು’ ಎಂದು ‘ಮಾದೇವ’ನನ್ನು ವಿವರಿಸಿ ಮಾತಿಗೆ ವಿರಾಮವಿತ್ತರು ವಿನೋದ್‌. 

ADVERTISEMENT

‘ರಾಬರ್ಟ್‌ ಸಿನಿಮಾದ ‘ರಾಘವ–ತನು’ ಆನ್‌ಸ್ಕ್ರೀನ್‌ ಜೋಡಿಯನ್ನು ಜನತೆ ಒಪ್ಪಿಕೊಂಡಿತ್ತು. ಬಳಿಕ ಹಲವು ಸ್ಕ್ರಿಪ್ಟ್‌ಗಳು ನಮಗಿಬ್ಬರಿಗೂ ಬಂದರೂ ಯಾವುದೂ ಒಪ್ಪಿಗೆಯಾಗಿರಲಿಲ್ಲ. ‘ಮಾದೇವ’ ನಾವಿಬ್ಬರೂ ಇಷ್ಟಪಟ್ಟು ಒಪ್ಪಿದ ಕಥೆ.

–ವಿನೋದ್‌ ಪ್ರಭಾಕರ್‌ ನಟ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.