
ಮಹಿಮಾ ನಂಬಿಯಾರ್
ಮಲಯಾಳದ ಖ್ಯಾತ ನಟಿ ಮಹಿಮಾ ನಂಬಿಯಾರ್ ಚಂದನವನಕ್ಕೆ ಲಗ್ಗೆ ಇಡುತ್ತಿದ್ದಾರೆ. ಈ ಬಗ್ಗೆ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿರುವ ಮಹಿಮಾ, ಸಣ್ಣ ಸುಳಿವು ಕೊಟ್ಟಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಇತ್ತೀಚೆಗೆ 'ಮನಸಾರೆ' ಚಿತ್ರದ, 'ನಾ ನಗುವ ಮೊದಲೇನೆ ಮಿನುಗುತಿದೆ ಯಾಕೊ ಹೊಸ ಮುಗುಳುನಗೆ' ಹಾಡಿನೊಂದಿಗೆ ತಮ್ಮ ಭಾವಚಿತ್ರವನ್ನು ಮಹಿಮಾ ಪೋಸ್ಟ್ ಮಾಡಿದ್ದರು. ಅದಕ್ಕೆ ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿ, 'ನೀವು ಯಾವಾಗ ಕನ್ನಡ ಚಿತ್ರರಂಗಕ್ಕೆ ಬರುತ್ತೀರಿ' ಎಂದು ಪ್ರಶ್ನಿಸಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿರುವ ಮಹಿಮಾ, 'ಸದ್ಯದಲ್ಲೇ ಬರುವೆ. ಸಿನಿಮಾ ಚಿತ್ರೀಕರಣ ಹಂತದಲ್ಲಿದೆ' ಎಂದಿದ್ದಾರೆ. ಅವರ ಪ್ರತಿಕ್ರಿಯೆ ಸದ್ಯ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಮಹಿಮಾ ನಂಬಿಯಾರ್ ಕಾಸರಗೋಡು ಮೂಲದ ನಟಿ. 2019ರಲ್ಲಿ 'ಕಾರ್ಯಸ್ಥನ್' ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ನಂತರ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಆರ್‌ಡಿಎಕ್ಸ್ , ಲಿಟಲ್ ಹಾರ್ಟ್ಸ್ ಅವರ ಈಚಿನ ಚಿತ್ರಗಳು. ಕಾಸರಗೋಡು ಭಾಗದ ಮಲಯಾಳ ಮಾತನಾಡುವ ಅವರು, ತಮ್ಮ ಮಾತಿನ ಶೈಲಿ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಮುಗ್ದ ಮಾತು, ಲುಕ್ ಮೂಲಕ ಅಭಿಮಾನಿಗಳ ಪ್ರೀತಿ ಪಡೆದಿರುವ ಮಹಿಮಾ ಅವರ ಅದೃಷ್ಟ ಕನ್ನಡ ಚಿತ್ರರಂಗದಲ್ಲಿ ಖುಲಾಯಿಸುವುದೇ ಎಂಬ ಕುತೂಹಲ ಸಿನಿಪ್ರಿಯರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.