ADVERTISEMENT

ಭಾರತದಿಂದ ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆದ ಮಲಯಾಳಂನ 'ಜಲ್ಲಿಕಟ್ಟು' ಸಿನೆಮಾ

ಏಜೆನ್ಸೀಸ್
Published 25 ನವೆಂಬರ್ 2020, 13:14 IST
Last Updated 25 ನವೆಂಬರ್ 2020, 13:14 IST
ಜಲ್ಲಿಕಟ್ಟು ಚಿತ್ರದ ದೃಶ್ಯ
ಜಲ್ಲಿಕಟ್ಟು ಚಿತ್ರದ ದೃಶ್ಯ   

ಮುಂಬೈ: ಮಲಯಾಳಂನ 'ಜಲ್ಲಿಕಟ್ಟು' ಸಿನೆಮಾ ಪ್ರತಿಷ್ಠಿತ ಆಸ್ಕರ್‌-2021 ಪ್ರಶಸ್ತಿಗೆ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದೆ.

ಭಾರತದ 27 ಸಿನೆಮಾಗಳ ಪೈಕಿ ಮಲಯಾಳಂನ 'ಜಲ್ಲಿಕಟ್ಟು' ಚಿತ್ರವನ್ನು ಆಸ್ಕರ್‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (ಎಫ್‌ಎಫ್‌ಐ) ಮಾಹಿತಿ ನೀಡಿದೆ.

ಜಲ್ಲಿಕಟ್ಟು ಚಿತ್ರವನ್ನು ಆಯ್ಕೆ ಮಾಡಿರುವ ಬಗ್ಗೆ ಮಾತನಾಡಿರುವ ಎಫ್‌ಎಫ್‌ಐ ಮುಖ್ಯಸ್ಥ ರಾಹುಲ್ ರಾವೇಲ್, 'ಪ್ರಾಣಿಗಳಿಗಿಂತ ಮನುಷ್ಯನ ಸ್ವಭಾವ ಕ್ರೂರವಾಗಿದೆ. ಮಾನವ ಪ್ರವೃತ್ತಿಗಳು ಪ್ರಾಣಿಗಳಿಗಿಂತ ಕೆಟ್ಟದ್ದಾಗಿದೆ ಎಂಬುದನ್ನು ಈ ಸಿನೆಮಾದಲ್ಲಿ ತೋರಿಸಲಾಗಿದೆ. ಇದು ನಾವೆಲ್ಲರೂ ಹೆಮ್ಮೆ ಪಡುವಂತಹ ಕಲಾಕೃತಿಯಾಗಿದೆ. ಈ ಸಿನೆಮಾದ ಚಿತ್ರೀಕರಣ ಅದ್ಭುತವಾಗಿದೆ. ಈ ಚಿತ್ರದಲ್ಲಿ ಬರುವ ಸನ್ನಿವೇಶಗಳು ನಮ್ಮೆಲ್ಲರನ್ನೂ ಭಾವೋದ್ವೇಗಗೊಳಿಸುತ್ತವೆ. ಲಿಜೊ ಅತ್ಯಂತ ಸಮರ್ಥ ನಿರ್ದೇಶಕ. ಈ ಎಲ್ಲ ಕಾರಣಗಳಿಗೊಸ್ಕರ ನಾವು ಜಲ್ಲಿಕಟ್ಟು ಸಿನೆಮಾವನ್ನು ಆಯ್ಕೆ ಮಾಡಿದ್ದೇವೆ' ಎಂದು ತಿಳಿಸಿದ್ದಾರೆ.

ADVERTISEMENT

ಲಿಜೊ ಜೋಸ್ ಪೆಲ್ಲಿಶ್ಶೇರಿ ನಿರ್ದೇಶಿಸಿರುವ ಜಲ್ಲಿಕಟ್ಟು ಸಿನೆಮಾದಲ್ಲಿ ಆ್ಯಂಟನಿ ವರ್ಗೀಸ್‌, ಚೆಂಬನ್ ವಿ ನೋದ್ ಜೋಸ್
‌, ಸಬುಮೊನ್ ಅಬ್ದುಸಮದ್, ಶಾಂತಿ ಬಾಲಚಂದ್ರನ್ ಸೇರಿದಂತೆ ಹಲವರು ನಟಿಸಿದ್ದಾರೆ. ಎಸ್‌.ಹರೀಶ್‌ ಅವರ 'ಮಾವೋಯಿಸ್ಟ್‌' ಎಂಬ ಸಣ್ಣ ಕಥೆಯನ್ನು ಆಧರಿಸಿ ಜಲ್ಲಿಕಟ್ಟು ಸಿನೆಮಾವನ್ನು ತಯಾರಿಸಲಾಗಿದೆ.

ಕಸಾಯಿಖಾನೆಯಿಂದ ತಪ್ಪಿಕೊಳ್ಳುವ ಗೂಳಿಯೊಂದನ್ನು ಇಡೀ ಊರಿನ ಪುರುಷರು ಸೇರಿ ಬೇಟೆಯಾಡುವುದರಸುತ್ತ ಕಥೆಯನ್ನು ಹೆಣೆಯಲಾಗಿದೆ. 2019 ರಲ್ಲಿ ಜಲ್ಲಿಕಟ್ಟು ಬಿಡುಗಡೆಯಾಗಿತ್ತು.

'ದಿ ಡಿಸೈಪಲ್‌', 'ಶಕುಂತಲಾ ದೇವಿ', 'ಶಿಕಾರ', 'ಛಪಾಕ್' 'ಸಿರಿಯಸ್‌ ಮೆನ್‌', 'ಚೆಕ್‌ ಪೋಸ್ಟ್‌' ಸೇರಿದಂತೆ ಹಿಂದಿ, ಮರಾಠಿ ಭಾಷೆಗಳ 27 ಚಿತ್ರಗಳು ಸ್ಪರ್ಧೆಯಲ್ಲಿದ್ದವು.

ವೀಕ್ಷಿಸಿ: 'ಜಲ್ಲಿಕಟ್ಟು' ಟ್ರೈಲರ್...



ಟ್ವೀಟರ್‌ನಲ್ಲಿ ಟ್ರೆಂಡ್‌ ಆಯ್ತು #Jallikattu

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.