ADVERTISEMENT

ಮಾಲ್ಗುಡಿಯ ಆ ದಿನಗಳು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 19:45 IST
Last Updated 24 ಅಕ್ಟೋಬರ್ 2019, 19:45 IST
ವಿಜಯ್‌ ರಾಘವೇಂದ್ರ
ವಿಜಯ್‌ ರಾಘವೇಂದ್ರ   

ಇಂಗ್ಲಿಷ್‌ ಸಾಹಿತಿ ಆರ್‌.ಕೆ. ನಾರಾಯಣ್‌ ಅವರ ಸಣ್ಣಕಥೆಗಳ ಗುಚ್ಛವೇ ‘ಮಾಲ್ಗುಡಿ ಡೇಸ್’. ಮಾಲ್ಗುಡಿ ಎಂಬುದು ಕಾಲ್ಪನಿಕ ಊರು. ಕಥೆಗಳು ಜರುಗುವುದು ಈ ಹಳ್ಳಿಯಲ್ಲಿಯೇ. ನಟ ಶಂಕರ್‌ನಾಗ್‌ ನಿರ್ಮಿಸಿದ್ದ ‘ಮಾಲ್ಗುಡಿ ಡೇಸ್‌’ ಧಾರಾವಾಹಿಯ ಸರಣಿ ಎಲ್ಲರ ಮನ ಗೆದ್ದಿತ್ತು. ಈಗ ಗಾಂಧಿನಗರದಲ್ಲಿ ಇದೇ ಹೆಸರಿನ ಸಿನಿಮಾವೊಂದು ತೆರೆಗೆ ಬರುತ್ತಿದೆ.

ಹಳೆಯ ‘ಮಾಲ್ಗುಡಿ ಡೇಸ್’ಗೂ ಮತ್ತು ಈ ಸಿನಿಮಾಕ್ಕೂ ಯಾವುದೇ ಸಾಮ್ಯತೆ ಇಲ್ಲ. ಚಿತ್ರಕ್ಕೆ ಶೀರ್ಷಿಕೆಯನ್ನಷ್ಟೇ ಬಳಸಿಕೊಳ್ಳಲಾಗಿದೆ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ. ಈ ಚಿತ್ರ ನಿರ್ದೇಶಿಸುತ್ತಿರುವುದು ಕಿಶೋರ್‌ ಮೂಡಬಿದ್ರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ನೊಗವನ್ನು ಅವರೇ ಹೊತ್ತಿದ್ದಾರೆ. ನಟ ವಿಜಯ್‌ ರಾಘವೇಂದ್ರ ನಾಯಕನಾಗಿರುವ ಈ ಸಿನಿಮಾದ ಪೋಸ್ಟರ್‌ ಬಿಡುಗಡೆಗೆ ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.

‘ಎಲ್ಲರ ಜೀವನದಲ್ಲೂ ನೆನಪುಗಳಿರುತ್ತವೆ. ಅದರಲ್ಲಿ ಸ್ಥಳ, ಗುರಿಯು ಬಹುಮುಖ್ಯ ಪಾತ್ರವಹಿಸುತ್ತದೆ. ನೆನಪುಗಳು ಪರ ಊರಿಗೆ ಕರೆದೊಯ್ಯುತ್ತವೆ. ಹಾಗೆಂದು ಅವೆಲ್ಲವೂ ಹಳತಾಗಿರುವುದಿಲ್ಲ. ಎಲ್ಲವೂ ಹೊಸ ನೆನಪುಗಳಾಗಿರುತ್ತವೆ. ನೋಡುಗರಿಗೆ ನಮ್ಮವೇ ಆಗಿರುವಂತೆ ಕಾಡುತ್ತವೆ’ ಎಂದು ನೆನಪಿಗೆ ಜಾರಿದರು ಕಿಶೋರ್.

ADVERTISEMENT

ವಿಜಯ್ ರಾಘವೇಂದ್ರ ಅವರು ಯುವ ಸಾಹಿತಿ ಹಾಗೂ 75 ವರ್ಷದ ಮುತ್ಸದ್ಧಿಯಾಗಿ ಬಣ್ಣ ಹಚ್ಚಿದ್ದಾರೆ. ಅವರಿಗೆ ಮೇಕಪ್‌ ಮಾಡಿರುವುದು ಕೇರಳ ಮೂಲದ ಎನ್‌.ಜಿ. ರೋಷನ್‌. ‘ಇದಕ್ಕಾಗಿ ಐದು ಗಂಟೆ ಹಿಡಿಯಿತು. ಮೇಕಪ್‌ ತೆಗೆಯಲು ಒಂದು ಗಂಟೆ ಆಗುತ್ತಿತ್ತು’ ಎಂದು ಹೇಳಿಕೊಂಡರು.

ಸಾಫ್ಟ್‌ವೇರ್‌ ಉದ್ಯೋಗಿ ಗ್ರೀಷ್ಮಾ ಶ್ರೀಧರ್ ಈ ಚಿತ್ರದ ನಾಯಕಿ. ಹೆಣ್ಣುಮಕ್ಕಳ ಪ್ರತಿನಿಧಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಗಗನ್‌ ಬಡೇರಿಯಾ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಉದಯ್‌ ಲೀಲಾ ಅವರದು. ಕೆ. ರತ್ನಾಕರ್‌ ಕಾಮತ್ ಬಂಡವಾಳ ಹೂಡಿದ್ದಾರೆ. ನಟ ಜಗ್ಗೇಶ್‌ ಪೋಸ್ಟರ್‌ ಅನ್ನು ಬಿಡುಗಡೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.