ADVERTISEMENT

ಬಹುನಿರೀಕ್ಷಿತ ಮಾಸ್ಟರ್‌ ಸಿನಿಮಾ ಸೋರಿಕೆ? ಟ್ವಿಟರಲ್ಲಿ #masterleaked ಟ್ರೆಂಡ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2021, 4:55 IST
Last Updated 12 ಜನವರಿ 2021, 4:55 IST
ಮಾಸ್ಟರ್‌ ಚಿತ್ರದ ಪೋಸ್ಟರ್‌
ಮಾಸ್ಟರ್‌ ಚಿತ್ರದ ಪೋಸ್ಟರ್‌   

ಬೆಂಗಳೂರು: ತಮಿಳುನಾಡಿನ ಖ್ಯಾತ ನಟರಾದ ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ಮಾಸ್ಟರ್ ಜನವರಿ 13 ರಂದು ಭರ್ಜರಿ ಬಿಡುಗಡೆಗೆ ಸಜ್ಜಾಗಿದೆ. ಆದರೆ, ಬಿಡುಗಡೆಗೆ ಎರಡು ದಿನಗಳಿರುವಾಗಲೇ ಚಿತ್ರ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎನ್ನಲಾಗಿದೆ.

ಇದೇ ಹಿನ್ನೆಲೆಯಲ್ಲಿ ಸೋಮವಾರ ಟ್ವೀಟ್‌ ಮಾಡಿರುವ ಮಾಸ್ಟರ್ ನಿರ್ದೇಶಕ ಲೋಕೇಶ್ ಕನಗರಾಜ್, 'ಚಿತ್ರದ ದೃಶ್ಯಗಳು ಸಿಕ್ಕರೆ ದಯವಿಟ್ಟು ಯಾರಿಗೂ ಶೇರ್‌ ಮಾಡಬೇಡಿ,' ಎಂದು ಮನವಿ ಮಾಡಿದ್ದಾರೆ.

'ನಿಮಗಾಗಿ 'ಮಾಸ್ಟರ್‌' ಅನ್ನು ನಿರ್ಮಿಸಲು ಒಂದೂವರೆ ವರ್ಷ ಕಷ್ಟಪಟ್ಟಿದ್ದೇವೆ. ಚಿತ್ರವನ್ನು ನೀವು ಥಿಯೇಟರ್‌ಗಳಲ್ಲಿಯೇ ನೋಡಿ ಸಂಭ್ರಮಿಸುತ್ತೀರಿ ಎಂಬ ನಿರೀಕ್ಷೆ ಹೊಂದಿದ್ದೇವೆ. ಸಿನಿಮಾದ ಸೋರಿಕೆಯಾದ ದೃಶ್ಯಗಳು ನಿಮಗೇನಾದರೂ ಸಿಕ್ಕರೆ ದಯವಿಟ್ಟು ಅದನ್ನು ಯಾರಿಗೂ ಹಂಚಬೇಡಿ,' ಎಂದು ಕನಗರಾಜ್‌ ಕೋರಿದ್ದಾರೆ.

ADVERTISEMENT

'ಮಾಸ್ಟರ್' ಅನ್ನು ನಿರ್ಮಾಣ ಮಾಡಿರುವ 'ಎಕ್ಸ್‌ಬಿ ಫಿಲ್ಮ್' ಕೂಡ ಟ್ವೀಟ್‌ ಮಾಡಿದ್ದು, 'ಸೋರಿಕೆಯಾದ ಯಾವುದೇ ಕಂಟೆಂಟ್‌ ಅನ್ನು ಹಂಚಿಕೊಳ್ಳಬಾರದು ಎಂದು 'ಮಾಸ್ಟರ್‌' ತಂಡ ವಿನಂತಿಸುತ್ತದೆ. ಆ ರೀತಿಯ ಏನನ್ನಾದರೂ ನೀವು ಗಮನಿಸಿದರೆ ದಯವಿಟ್ಟು ಅದನ್ನು ನಮ್ಮೊಂದಿಗೆ report@blockxpiracy.com ನಲ್ಲಿ ಹಂಚಿಕೊಳ್ಳಿ,' ಎಂದು ಹೇಳಿದೆ.

ಚಿತ್ರರಂಗದ ಹಲವರು 'ಮಾಸ್ಟರ್‌'ಗೆ ಬೆಂಬಲವಾಗಿ ನಿಂತಿದ್ದಾರೆ. ಸೋರಿಕೆಯಾದ ದೃಶ್ಯಗಳನ್ನು ಹಂಚಿಕೊಳ್ಳದಂತೆ ಪ್ರೇಕ್ಷಕರಲ್ಲಿ ಅವರು ಮನವಿ ಮಾಡಿದ್ದಾರೆ.

ಮಾಸ್ಟರ್ ಚಿತ್ರವನ್ನು ಲೋಕೇಶ್ ಕನಗರಾಜ್ ನಿರ್ದೇಶಿಸುತ್ತಿದ್ದು ವಿಜಯ್‌ಗೆ ಎದುರಾಳಿಯಾಗಿ ವಿಜಯ್ ಸೇತುಪತಿ ನಟಿಸಲಿದ್ದಾರೆ. ಮಾಳವಿಕಾ ಮೋಹನನ್‌ ಹಾಗೂ ಅರ್ಜುನ್ ದಾಸ್ ಮುಖ್ಯಭೂಮಿಕೆಯಲ್ಲಿದ್ದಾರೆ.

‘ಮಾಸ್ಟರ್‌’ ಸಿನಿಮಾವನ್ನು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಗಾಳಿಸುದ್ದಿ ಕೆಲ ದಿನಗಳಿಂದ ಹರಡಿತ್ತು. ಆದರೆ ಈ ವಿಷಯಕ್ಕೆ ಪೂರ್ಣವಿರಾಮ ಹಾಕಿದ್ದ ನಿರ್ಮಾಪಕರು ಸಿನಿಮಾವನ್ನು ಥಿಯೇಟರ್‌ನಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು.

ಟ್ವಿಟರ್‌ನಲ್ಲಿ ಟ್ರೆಂಡ್‌

ಮಾಸ್ಟರ್‌ ಚಿತ್ರದ ದೃಶ್ಯಗಳನ್ನು ಶೇರ್‌ ಮಾಡದಂತೆ ನಿರ್ದೇಶಕಲೋಕೇಶ್ ಕನಗರಾಜ್ ಮನವಿ ಮಾಡುತ್ತಲೇ#masterleaked ಹ್ಯಾಷ್‌ ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ. ಹಲವರು ಹಲವು ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.