ADVERTISEMENT

ಶ್ರುತಿಗೆ ಫೈರ್ ಸಂಸ್ಥೆ ಬೆಂಬಲ: ಚಿತ್ರರಂಗದ ಮೌನದ ವಿರುದ್ಧ ನಟ ಚೇತನ್ ಕಿಡಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 15:27 IST
Last Updated 20 ಅಕ್ಟೋಬರ್ 2018, 15:27 IST
   

ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಶ್ರುತಿ ಹರಿಹರನ್ ಅವರಿಗೆ ‘ಫೈರ್’ಸಂಘಟನೆ (ಫಿಲಂ ಇಂಡಸ್ಟ್ರಿ ಫಾರ್ ಇಕ್ವಾಲಿಟಿ ಆ್ಯಂಡ್ ರೈಟ್ಸ್‌) ಬೆಂಬಲ ಸೂಚಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಬೆಂಬಲ ಸೂಚಿಸುವುದಾಗಿಯೂ ಅದು ಹೇಳಿಕೊಂಡಿದೆ.

ಫೈರ್ ಸಂಘಟನೆಯ ಸದಸ್ಯೆ ಕವಿತಾ ಲಂಕೇಶ್‌ಈ ವಿಷಯಕ್ಕೆ ಸಂಬಂಧಿಸಿಂದಂತೆ ನಾನಿನ್ನೂ ಶ್ರುತಿ ಅವರ ಜತೆ ಮಾತನಾಡಿಲ್ಲ. ನಾಳೆ ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ. ಅದೇನೇ ಇದ್ದರೂ ಇಂಥ ಲೈಂಗಿಕ ಕಿರುಕುಳದ ಅನುಭವಗಳನ್ನು ಹಂಚಿಕೊಳ್ಳುವುದು ತುಂಬ ಮುಖ್ಯ. ಯಾಕೆಂದರೆ ಮತ್ಯಾರೂ ಅಂಥ ಕೆಲಸಕ್ಕೆ ಕೈ ಹಾಕಲು ಹಿಂಜರಿಯುತ್ತಾರೆ. ಅರ್ಜುನ್ ಸರ್ಜಾ ನಾನು ಕಿರುಕುಳ ನೀಡಿಲ್ಲ ಎಂದು ಹೇಳುತ್ತಿದ್ದಾರಂತೆ. ಇಬ್ಬರ ಮಾತುಗಳನ್ನೂ ಕೇಳಿಸಿಕೊಂಡು ಕಾನೂನಿಕ ಕ್ರಮ ಕೈಗೊಳ್ಳುವ ಕುರಿತು ಚಿಂತಸಲಾಗುವುದು’ ಎಂದು ಹೇಳಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಫೈರ್ ಸಂಘಟನೆಯ ಸಂಸ್ಥಾಪಕ ನಟ ಚೇತನ್ ಶ್ರುತಿಗೆ ಬೆಂಬಲ ಸೂಚಿಸಿರುವುದಷ್ಟೇ ಅಲ್ಲದೆ, ‘ಮೀ ಟೂ’ ವಿರುದ್ಧ ಮಾತನಾಡುತ್ತಿರುವವರ ಬಗ್ಗೆ ಅಸಮಧಾನವನ್ನೂ ವ್ಯಕ್ತಪಡಿಸಿದ್ದಾರೆ.

ADVERTISEMENT

ಅವರು ಮಾತುಗಳ ಅಕ್ಷರರೂಪ ಇಲ್ಲಿದೆ

‘ಶ್ರುತಿ ನಮ್ಮ ಫೈರ್ ಸಂಘಟನೆಯ ಸದಸ್ಯೆ. ನಮ್ಮ ಸಂಘಟನೆಯ ‘ಆಂತರಿಕ ದೂರು ಸಮಿತಿ’ (ಐಸಿಸಿ)ಯ ಹನ್ನೊಂದು ಸದಸ್ಯರಲ್ಲಿ ಶ್ರುತಿ ಕೂಡ ಒಬ್ಬರು. ಶ್ರುತಿ ಮಹಿಳೆಯರ ಪರವಾಗಿ ಸಮಾನತೆಯ ಪರವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಲೈಂಗಿಕ ಕಿರುಕುಳದ ವಿರುದ್ಧ ಬಹಳ ವರ್ಷದಿಂದ ಧ್ವನಿ ಎತ್ತುತ್ತಿದ್ದಾರೆ. ಅವರಿಗಾಗಿರುವ ಕಹಿ ಘಟನೆಯನ್ನು ಈ ಸಂದರ್ಭದಲ್ಲಿ ಬಹಿರಂಗ ಮಾಡಿರುವುದು ಅವರ ಧೈರ್ಯವನ್ನು ತೋರಿಸುತ್ತದೆ. ಇಡೀ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಮತ್ತು ಲೈಂಗಿಕ ಕಿರುಕುಳ ಮಾಡಿ ವ್ಯಕ್ತಿಯ ವಿರುದ್ಧ ಆರೋಪಿಸುವುದಕ್ಕೆ ಎದೆಗಾರಿಕೆ ಬೇಕು.

‘ಮೀ ಟೂ’ ಅಭಿಯಾನ ಕನ್ನಡ ಚಿತ್ರರಂಗಕ್ಕೆ ತಗುಲಿರುವ ಲೈಂಗಿಕ ಕಿರುಕುಳ ಎಂಬ ಕಾಯಿಲೆಯನ್ನು ತೆಗೆದುಹಾಕಲು ಇರುವ ಒಂದು ಮಾರ್ಗ. ಇದು ಬಹಳ ದೊಡ್ಡ ಹೆಜ್ಜೆ. ಶ್ರುತಿ ಅವರು ಇದುವರೆಗೆ ಬಹಳ ತೂಕವಾದ ಮಾತುಗಳನ್ನು ಆಡಿಕೊಂಡು ಬಂದಿದ್ದಾರೆ. ತಮಗೆ ಲೈಂಗಿಕ ಕಿರುಕುಳ ನೀಡಿರುವುದಕ್ಕೆ ತಮ್ಮ ಬಳಿ ಪುರಾವೆಗಳೂ ಇವೆ ಎಂದು ಅವರು ಹೇಳುತ್ತಿದ್ದಾರೆ. ಆ ನಿಟ್ಟಿನಲ್ಲಿ ಈ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡು ಪರಿಶೀಲನೆ ಮಾಡಬೇಕು.

ಚಿತ್ರರಂಗದ ಯಾರೂ ಶ್ರುತಿಗೆ ಬೆಂಬಲ ಕೊಟ್ಟು ಮಾತಾಡುತ್ತಿಲ್ಲ. ಫೈರ್ ಸಂಸ್ಥೆಯ ಮೂಲಕ ನಾಳೆ ಒಂದು ಪತ್ರಿಕಾಗೋಷ್ಠಿ ಮಾಡುತ್ತಿದ್ದೇವೆ. ಹಲವು ಪುರುಷ–ಮಹಿಳೆಯರು ಶ್ರುತಿ ಪರವಾಗಿ ಮತ್ತು ಈ ಮೀ ಟೂ ಅಭಿಯಾನದ ಪರವಾಗಿ, ಸಮಾನತೆಯ ಪರವಾಗಿ ಧ್ವನಿ ಎತ್ತಲಿದ್ದೇವೆ. ಲೈಂಗಿಕ ಕಿರುಕುಳ ಎನ್ನುವುದು ಎಷ್ಟೋ ತಲಮಾರುಗಳಿಂದ ಬಂದ ಕಾಯಿಲೆ. ಅದನ್ನು ತೆಗೆದುಹಾಕುವುದು ನಮ್ಮೆಲ್ಲರ ಕರ್ತವ್ಯ.

ಶ್ರುತಿ ಅಷ್ಟೇ ಅಲ್ಲ, ಯಾರು ಈ ರೀತಿಯ ಲೈಂಗಿಕ ಕಿರುಕುಳದ ವಿರುದ್ಧ ಧ್ವನಿ ಎತ್ತುತ್ತಾರೋ ಅವರು ನಿಜವಾಗಲೂ ಈ ಚಿತ್ರರಂಗವನ್ನು ಪ್ರೀತಿಸುವವರು, ಉತ್ತಮ ಚಿತ್ರರಂಗದ ಕನಸು ಕಟ್ಟುತ್ತಿರುವವರು. ಇಂಥವರಿಂದಲೇ ಚಿತ್ರರಂಗದಲ್ಲಿ ಒಳ್ಳೆಯ ಬೆಳವಣಿಗೆ ಆಗಲು ಸಾಧ್ಯ. ಆದರೆ ಯಾರು ಈ ವಿಷಯದಲ್ಲಿ ಮೌನವಾಗಿ ಇರುತ್ತಾರೋ ಅವರ ಮೌನವನ್ನು ಎರಡು ಬಗೆಯಲ್ಲಿ ಅರ್ಥೈಸಿಕೊಳ್ಳಬೇಕು. ಒಂದು ಅವರಿಗೆ ಚಿತ್ರರಂಗದ ಅಭಿರುಚಿಯ ಕುರಿತು ಕಾಳಜಿ ಇಲ್ಲ ಎಂದಾಗುತ್ತದೆ. ಅಲ್ಲದೇ ಅವರೂ ಈ ವಿಷಯದಲ್ಲಿ ಶಾಮೀಲಾಗಿದ್ದಾರಾ? ಆರೋಪಿಗಳ ಜತೆಯಲ್ಲಿ ಕೈಜೋಡಿಸುತ್ತಿದ್ದಾರಾ ಎಂಬ ಅನುಮಾನವೂ ಹುಟ್ಟಿಕೊಳ್ಳುತ್ತದೆ.

ಮುನಿರತ್ನ ಅಂಥವರು ಮಾತನಾಡಿದ್ದಾರೆ. ಅವರ ಮೇಲೆ ಅವರ ಪಕ್ಷದಿಂದಲೇ ಹಲವು ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ ಉದಾಹರಣೆಗಳಿವೆ. ಸಾ.ರಾ.ಗೋವಿಂದು ಅವರೂ ಮಾತನಾಡಿದ್ದಾರೆ. ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದಾರೆ ಮಹಿಳೆಯರ ಸಮಸ್ಯೆಯ ಕುರಿತು ಎಷ್ಟರಮಟ್ಟಿಗೆ ಧ್ವನಿ ಎತ್ತಿದ್ದಾರೆ? ಮಹಿಳೆಯರಿಗೆ ನ್ಯಾಯ ಒದಗಿಸಿ ಕೊಟ್ಟಿದ್ದಾರೆ?

ಹಿಂದೊಮ್ಮೆ ನಾನು ಲೈಂಗಿಕ ಕಿರುಕುಳದ ಸಮಸ್ಯೆಯ ವಿರುದ್ಧ ಒಂದು ಲೇಖನ ಬರೆದು ಅನೇಕ ಚಿತ್ರರಂಗದ ಗಣ್ಯರನ್ನು ಭೇಟಿಯಾಗಿದ್ದೆ. ಅವರೆಲ್ಲ ‘ನಮ್ಮ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಸಮಸ್ಯೆ ಇಲ್ಲವೇ ಇಲ್ಲ’ ಎಂದು ಮಾತನಾಡಿದ್ದರು. ಈ ಸಮಸ್ಯೆಯನ್ನು ಗುರ್ತಿಸದೇ ಇದ್ದರೆ ಹೇಗೆ ಬದಲಾವಣೆ ಮಾಡಲು ಸಾಧ್ಯ?

ಇತ್ತೀಚೆಗೆ ಸಂಗೀತಾ ಭಟ್ ಎನ್ನುವವರು ಆರೇಳು ಕೇಸ್ ಆಗುವಷ್ಟು ಲೈಂಗಿಕ ಕಿರುಕುಳದ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಅಂಥದ್ದರಲ್ಲಿ ಸಮಸ್ಯೆ ಇಲ್ಲವೇ ಇಲ್ಲ ಎಂದು ಹೇಳುವುದು ಎಷ್ಟು ಸತ್ಯ?

ಪುರುಷರ ವರ್ತನೆಯನ್ನು ಪ್ರಶ್ನಿಸುವುದಕ್ಕೆ ಮತ್ತು ಅಳೆಯುವುದಕ್ಕೆ ಇದು ಬಹಳ ಒಳ್ಳೆಯ ವೇದಿಕೆ. ಮಹಿಳೆಯರ ಕಾನೂನಾತ್ಮಕ ಹಕ್ಕುಗಳ ಕುರಿತು ತಿಳಿವಳಿಕೆ ಬರಲಿಕ್ಕೆ ಮೀ ಟೂ ಅಭಿಯಾನ ಬಹಳ ಒಳ್ಳೆಯ ವೇದಿಕೆ. ಎಷ್ಟೇ ದೊಡ್ಡ ನಟ, ನಿರ್ದೇಶಕ, ನಿರ್ಮಾಪಕ, ವ್ಯಕ್ತಿ ಯಾರೇ ಇರಲಿ. ಕಾನೂನಿನ ಮುಂದೆ ಎಲ್ಲರೂ ಸಣ್ಣವರೇ. ಯಾರೂ ಲೈಂಗಿಕ ಶೋಷಣೆ ಮಾಡುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.