ADVERTISEMENT

ಸಲ್ಮಾನ್ ತಂದೆಗೆ ಬೆದರಿಕೆ ಪತ್ರ ತಲುಪಿಸಿದ್ದೇ ಬಿಷ್ಣೋಯಿ ಗ್ಯಾಂಗ್‌: ಪೊಲೀಸ್

ಪಿಟಿಐ
Published 9 ಜೂನ್ 2022, 16:54 IST
Last Updated 9 ಜೂನ್ 2022, 16:54 IST
ಸಲ್ಮಾನ್ ಖಾನ್
ಸಲ್ಮಾನ್ ಖಾನ್   

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಪ್ರಕರಣದಲ್ಲಿ ಮುಂಬೈ ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.

ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಮೂವರು ಸದಸ್ಯರು ಬೆದರಿಕೆ ಪತ್ರವನ್ನು ಸಲ್ಮಾನ್ ಖಾನ್ ಅವರ ತಂದೆ ಸಲೀಮ್ ಖಾನ್ ಅವರಿಗೆ ತಲುಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಬಿಷ್ಣೋಯಿ ಗ್ಯಾಂಗ್ ಸದಸ್ಯ ಎನ್ನಲಾಗುತ್ತಿರುವ ಮಹಾಕಾಳ ಅಲಿಯಾಸ್ ಸಿದ್ದೇಶ್ ಅಲಿಯಾಸ್ ಸೌರಭ್ ಕಾಂಬ್ಳೆ(20) ವಿಚಾರಣೆ ವೇಳೆ ಬೆದರಿಕೆ ಪತ್ರ ರವಾನೆ ಕುರಿತಂತೆ ಮಾಹಿತಿ ನೀಡಿದ್ದಾನೆ.

ಮುಂಬೈನ ಅಪರಾಧ ವಿಭಾಗದ ಪೊಲೀಸರು ಸೋಮವಾರ ಕಾಂಬ್ಳೆಯನ್ನು ಪುಣೆಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ಬೆನ್ನಲ್ಲೇ, ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸಹ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಮಧ್ಯೆ, ಇದೇ ಪ್ರಕರಣದಲ್ಲಿ ಕಾಂಬ್ಳೆಯನ್ನು ಪ್ರಶ್ನಿಸಲು ಪಂಜಾಬ್ ಪೊಲೀಸರ ತಂಡವೂ ಪುಣೆಗೆ ಬಂದಿಳಿದಿದೆ.

ADVERTISEMENT

ಈ ವಾರದ ಆರಂಭದಲ್ಲಿ ಪುಣೆ ಪೊಲೀಸರು ಮಹಾಕಾಳನನ್ನು ಬಂಧಿಸಿದ್ದರು. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ರಾಜಸ್ಥಾನದ ಜಲೌರ್‌ ಮೂಲದ ಮೂವರು ಸದಸ್ಯರಲ್ಲಿ ಒಬ್ಬರು ಬೆದರಿಕೆ ಪತ್ರವನ್ನು ಸಲೀಮ್ ಖಾನ್ ಪಕ್ಕದಲ್ಲಿ ಇರಿಸಿದ್ದಾರೆ ಎಂದು ಮಹಾಕಾಳ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಪತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಮ್ ಖಾನ್ ಸದ್ಯದಲ್ಲೇ ಮೂಸೆವಾಲಾ ರೀತಿ ಹತ್ಯೆಯಾಗಲಿದ್ದಾರೆ ಎಂದು ಬರೆಯಲಾಗಿತ್ತು.

ಡಿಸಿಪಿ ಸಂಗ್ರಾಮ್ ಸಿಂಗ್ ನಿಶಾಂದರ್ ಅವರ ನೇತೃತ್ವದ ಮುಂಬೈ ಪೊಲೀಸ್‌ನ ಅಪರಾಧ ದಳವು ಕಾಂಬ್ಳೆಯನ್ನು ವಿಚಾರಣೆಗೆ ಒಳಪಡಿಸಿದೆ.

ಸದ್ಯ, ತಮ್ಮ ಕಸ್ಟಡಿಯಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್, ಕಳೆದ ತಿಂಗಳು ನಡೆದ ಗಾಯಕ ಮೂಸೆವಾಲಾ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಎಂದು ದೆಹಲಿ ಪೊಲೀಸರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.