ADVERTISEMENT

ಯಶ್‌–19ನಲ್ಲಿ ಮೃಣಾಲ್‌ ಠಾಕೂರ್‌, ಸಾಯಿ ಪಲ್ಲವಿ?

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 11:39 IST
Last Updated 5 ಡಿಸೆಂಬರ್ 2023, 11:39 IST
<div class="paragraphs"><p> ಸಾಯಿ ಪಲ್ಲವಿ, ಯಶ್‌ ಹಾಗೂ&nbsp;ಮೃಣಾಲ್‌ ಠಾಕೂರ್‌</p></div>

ಸಾಯಿ ಪಲ್ಲವಿ, ಯಶ್‌ ಹಾಗೂ ಮೃಣಾಲ್‌ ಠಾಕೂರ್‌

   

ಇನ್‌ಸ್ಟಾಗ್ರಾಂ ಚಿತ್ರಗಳು

‘ಕೆ.ಜಿ.ಎಫ್‌. ಚಾಪ್ಟರ್‌–2’ ರಿಲೀಸ್‌ ಬಳಿಕ ನಟ ಯಶ್‌ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ‘ಕೆ.ಜಿ.ಎಫ್‌. ಚಾಪ್ಟರ್‌–3’ ಚಿತ್ರವನ್ನು ಈಗಾಗಲೇ ಹೊಂಬಾಳೆ ಫಿಲ್ಮ್ಸ್‌ ಘೋಷಿಸಿದೆ. ತಮ್ಮ ಮುಂದಿನ ಪ್ರಾಜೆಕ್ಟ್‌ ಯಾವುದು ಎನ್ನುವ ಸಣ್ಣ ಸುಳಿವನ್ನೂ ಬಿಟ್ಟುಕೊಡದ ಯಶ್‌ ಇದೀಗ, ಕೆವಿಎನ್‌ ಪ್ರೊಡಕ್ಷನ್ಸ್‌ನ ಹೊಸ ಪ್ರಾಜೆಕ್ಟ್‌ ತಮ್ಮ 19ನೇ ಸಿನಿಮಾ ಎನ್ನುವುದನ್ನು ಘೋಷಿಸಿದ್ದಾರೆ. ಡಿ.8ರಂದು ಬೆಳಿಗ್ಗೆ 9.55ಕ್ಕೆ ಈ ಸಿನಿಮಾದ ಶೀರ್ಷಿಕೆ ಅನಾವರಣಗೊಳ್ಳಲಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಯಶ್‌ ತಿಳಿಸಿದ್ದಾರೆ. 

ADVERTISEMENT

ಈ ಸಿನಿಮಾದಲ್ಲಿ ‘ಸೀತಾರಾಮಂ’ ಖ್ಯಾತಿಯ ನಟಿ ಮೃಣಾಲ್‌ ಠಾಕೂರ್‌, ಯಶ್‌ಗೆ ಜೋಡಿಯಾಗಲಿದ್ದಾರೆ ಎಂಬ ಮಾಹಿತಿ ಇದೆ. ಸೀತಾ ಮಹಾಲಕ್ಷ್ಮಿಯಾಗಿ ಪ್ರೇಕ್ಷಕರ ಮನ ಗೆದ್ದಿದ್ದ ಮೃಣಾಲ್‌ ‘ಕುಂಕುಮ ಭಾಗ್ಯ’ ಧಾರಾವಾಹಿಯಿಂದಾಗಿ ಬಾಲಿವುಡ್‌ ಪ್ರವೇಶಿಸಿದ್ದರು. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಸಾಯಿ ಪಲ್ಲವಿ ಕೂಡ ಮುಖ್ಯ ಪಾತ್ರದಲ್ಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಜಗತ್ತಿನಾದ್ಯಂತ ಸುಮಾರು ₹1,200 ಕೋಟಿ ಬಾಚಿದ್ದ ‘ಕೆ.ಜಿ.ಎಫ್‌ ಚಾಪ್ಟರ್‌–2’ ಯಶ್‌ ಅವರ ಸಿನಿಗ್ರಾಫ್‌ಗೆ ಅತಿ ದೊಡ್ಡ ತಿರುವು ನೀಡಿತ್ತು. ಹೀಗಾಗಿ ಅವರ ಮುಂದಿನ ಪ್ರಾಜೆಕ್ಟ್‌ ಬಗ್ಗೆ ಅಭಿಮಾನಿಗಳಿಗೆ, ಜನರಿಗೆ ನಿರೀಕ್ಷೆ, ಕುತೂಹಲ ಹೆಚ್ಚಿದೆ. 

‘ಕೆ.ಜಿ.ಎಫ್‌’ ಸರಣಿಗೇ ಆರೇಳು ವರ್ಷಗಳನ್ನು ಮೀಸಲಿಟ್ಟಿದ್ದ ಯಶ್‌, ಇದೀಗ ಹೊಸ ಪ್ರಾಜೆಕ್ಟ್‌ ಕೈಗೆತ್ತಿಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ತಮ್ಮ 19ನೇ ಸಿನಿಮಾದ ತಯಾರಿಯಲ್ಲೇ ಯಶ್‌ ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ಶ್ರೀಲಂಕಾ, ಲಂಡನ್‌ಗೂ ಅವರು ತೆರಳಿದ್ದರು. ಮಲಯಾಳದ ಗೀತು ಮೋಹನ್‌ದಾಸ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುವುದು ಬಹುತೇಕ ಖಚಿತ. ಈಗಾಗಲೇ ಟೆಸ್ಟ್‌ ಶೂಟ್‌ ಕೂಡ ನಡೆದಿದೆ ಎನ್ನುತ್ತಿವೆ ಮೂಲಗಳು. 

ಹೊಂಬಾಳೆ ಫಿಲ್ಮ್ಸ್‌ ಜೊತೆ ಗುರುತಿಸಿಕೊಂಡಿದ್ದ ಯಶ್‌ ಅವರನ್ನು ತನ್ನತ್ತ ಸೆಳೆಯಲು ಕೆವಿಎನ್‌ ಪ್ರೊಡಕ್ಷನ್ಸ್‌ ದೊಡ್ಡ ಮೊತ್ತವನ್ನೇ ಮೀಸಲಿಟ್ಟಿದೆ. ಈ ಸಿನಿಮಾ ₹1000 ಕೋಟಿ ಬಂಡವಾಳದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಬಿಗ್‌ಬಜೆಟ್‌ ಸಿನಿಮಾ ಎನ್ನುತ್ತಿವೆ ಮೂಲಗಳು. 

‘ಆರ್‌.ಆರ್‌.ಆರ್‌’, ‘ಸಪ್ತ ಸಾಗರದಾಚೆ ಎಲ್ಲೋ’, ‘ಟೋಬಿ’, ‘ಕೌಸಲ್ಯಾ ಸುಪ್ರಜಾ ರಾಮ’, ‘ಅನಿಮಲ್‌’ ಸಿನಿಮಾಗಳನ್ನು ‘ಕೆವಿಎನ್‌’ ವಿತರಣೆ ಮಾಡಿ ಹೆಸರು ಪಡೆದಿದೆ. ‘ಸಖತ್‌’ ಸಿನಿಮಾ ಮೂಲಕ ನಿರ್ಮಾಣ ಕ್ಷೇತ್ರಕ್ಕೆ ಇಳಿದಿದ್ದ ‘ಕೆವಿಎನ್‌’, ‘ಬೈ2ಲವ್‌’, ಜೋಗಿ ಖ್ಯಾತಿಯ ಪ್ರೇಮ್‌ ನಿರ್ದೇಶನದ ‘KD’, ನಟ ದರ್ಶನ್‌ ಜೊತೆಗೂ ಸಿನಿಮಾವೊಂದನ್ನು ಮಾಡುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.