ADVERTISEMENT

ಮುಂಬೈ: ನಗ್ನ ಚಿತ್ರ ಪ್ರಕಟಿಸಿದ ರಣವೀರ್ ಸಿಂಗ್ ವಿರುದ್ಧ ಎಫ್ಐಆರ್

ಪಿಟಿಐ
Published 26 ಜುಲೈ 2022, 10:40 IST
Last Updated 26 ಜುಲೈ 2022, 10:40 IST
ರಣವೀರ್ ಸಿಂಗ್ - ಪಿಟಿಐ ಚಿತ್ರ
ರಣವೀರ್ ಸಿಂಗ್ - ಪಿಟಿಐ ಚಿತ್ರ   

ಮುಂಬೈ: ಸಾಮಾಜಿಕ ಮಾಧ್ಯಮದಲ್ಲಿ ತಮ್ಮದೇ ನಗ್ನ ಚಿತ್ರಗಳನ್ನು ಪ್ರಕಟಿಸಿದ್ದಕ್ಕಾಗಿ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಮುಂಬೈ ಪೊಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೂರ್ವ ಮುಂಬೈ ಉಪನಗರ ಮೂಲದ ಸ್ವಯಂಸೇವಾ ಸಂಸ್ಥೆಯೊಂದರ (ಎನ್‌ಜಿಒ) ಕಾರ್ಯಕರ್ತರೊಬ್ಬರು ರಣವೀರ್ ವಿರುದ್ಧ ಸೋಮವಾರ ಮುಂಬೈಯ ಚೆಂಬೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಇದರ ಆಧಾರದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಭಾರತೀಯ ದಂಡಸಂಹಿತೆಯ ಸೆಕ್ಷನ್ 292 (ಅಶ್ಲೀಲ ಪುಸ್ತಕ ಮಾರಾಟ, ಇತ್ಯಾದಿ), 293 (ಯುವ ಜನತೆಗೆ ಅಶ್ಲೀಲ ವಸ್ತುಗಳ ಮಾರಾಟ), 509 (ಮಹಿಳೆಯರ ಘನತೆಗೆ ಧಕ್ಕೆ ತರುವಂಥ ಉದ್ದೇಶದ ಪದ ಅಥವಾ ಸಂಜ್ಞೆ ಬಳಕೆ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ತಮ್ಮ ನಗ್ನ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ರಣವೀರ್ ಸಿಂಗ್ ಮಹಿಳೆಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವುದಲ್ಲದೆ, ಅವರ ಘನತೆಗೆ ಕುಂದು ಉಂಟು ಮಾಡಿದ್ದಾರೆ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತು ಎಂದು ಪೊಲೀಸರು ಸೋಮವಾರ ತಿಳಿಸಿದ್ದರು.

ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ನಟನ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ದೂರುದಾರರು ಒತ್ತಾಯಿಸಿದ್ದರು.

ರಣವೀರ್ ಸಿಂಗ್ ಇತ್ತೀಚೆಗೆ ನಿಯತಕಾಲಿಕೆಯೊಂದರ ಫೋಟೊಶೂಟ್‌ಗೆ ಬೆತ್ತಲೆಯಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ತಮ್ಮ ನಗ್ನ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿಯೂ ಪ್ರಕಟಿಸಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.