ADVERTISEMENT

ಸಂಗೀತ ಎಂಬುದು ಅಂತರ್ಧ್ವನಿ ಶಕ್ತಿ!

ಉಮಾ ಅನಂತ್
Published 25 ಸೆಪ್ಟೆಂಬರ್ 2020, 19:30 IST
Last Updated 25 ಸೆಪ್ಟೆಂಬರ್ 2020, 19:30 IST
ಎಸ್‌.ಪಿ. ಬಾಲಸುಬ್ರಹ್ಮಣ್ಯಂ
ಎಸ್‌.ಪಿ. ಬಾಲಸುಬ್ರಹ್ಮಣ್ಯಂ   

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಧೀರ ಶಂಕರಾಭರಣ 29ನೇ ಮೇಳಕರ್ತ ರಾಗ. ಸಂಪೂರ್ಣ ಸ್ವರಸಮೂಹಗಳನ್ನು ಹೊಂದಿರುವ ಈ ರಾಗ ಹಾಡಲು ಪ್ರೌಢಿಮೆ, ಸ್ವರ, ಲಯ, ತಾಳ, ಸ್ಥಾಯಿ, ನಡೆ ಮುಂತಾದ ಸಂಗೀತದ ಎಲ್ಲ ಜ್ಞಾನವೂ ಬೇಕು. ಈ ರಾಗವನ್ನು ಶಾಸ್ತ್ರೀಯ ಸಂಗೀತ ಕಲಿಯದೇ ಇದ್ದರೂ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು 80ರ ದಶಕದಲ್ಲಿ ಹಾಡಿದ್ದರು. ರಾಗದ ಛಾಯೆ ಹಾಗೂ ಲಕ್ಷಣಕ್ಕೆ ಕೊಂಚವೂ ಧಕ್ಕೆಯಾಗದಂತೆ ಹಾಡಿ ಒಬ್ಬ ಅಪ್ರತಿಮ ‘ಶಾಸ್ತ್ರೀಯ ಗಾಯಕ’ ಎಂಬುದನ್ನೂ ಸಾಬೀತುಪಡಿಸಿದರು.

ಇದು ಎಸ್‌ಪಿಬಿ ಅವರ ಮನೋಧರ್ಮ ಸಂಗೀತ ಎಷ್ಟು ಪರಿಪೂರ್ಣತೆ ಪಡೆದಿತ್ತು ಎಂದರೆ ಈ ರಾಗವನ್ನು ಕೇಳಿದವರು ಶಂಕರಾಭರಣ ರಾಗವನ್ನು ಬಾಲಮುರಳಿ ಅವರು ಹಾಡಿದ್ದು ಎಂದೇ ಭಾವಿಸಿದ್ದರು!

ಆದರೆ ಈ ರಾಗವನ್ನು ಆಲಿಸಿದ ಸಂಗೀತ ದಿಗ್ಗಜರೊಬ್ಬರು ಈ ಗಾಯನ ಅಪ್ಪಟ ಶಾಸ್ತ್ರೀಯತೆಗೆ ತಕ್ಕಂತಿಲ್ಲ ಎಂದರು. ಈ ಪ್ರತಿಕ್ರಿಯೆಯಿಂದ ಕೊಂಚವೂ ವಿಚಲಿತರಾಗದ ಎಸ್‌ಪಿಬಿ, ‘ನನ್ನ ಬದುಕಿನಲ್ಲಿ ಒಂದೇ ಒಂದು ಆಸೆಯಿದೆ. ಅದೇನೆಂದರೆ ಶಾಸ್ತ್ರೀಯ ಸಂಗೀತ ಕಛೇರಿ ನೀಡಬೇಕು, ಅದಕ್ಕೆ ಬಾಲಮುರಳಿಕೃಷ್ಣ ಅವರ ಮಾರ್ಗದರ್ಶನ ಬೇಕು’ ಎಂದಿದ್ದರು. ಇದು ಒಬ್ಬ ಗಾಯಕನ ಹೆಚ್ಚುಗಾರಿಕೆ ಜೊತೆಗೆ ವಿನಯವನ್ನು ಎತ್ತಿತೋರಿಸುತ್ತದೆ.

ADVERTISEMENT

ಬಾಲಸುಬ್ರಹ್ಮಣಂ ಅವರು ಸಂಗೀತವನ್ನು ಶಾಸ್ತ್ರೀಯವಾಗಿ ಕಲಿಯಲಿಲ್ಲ. ಮನೆಯಲ್ಲಿ ಸಾಂಪ್ರದಾಯಿಕ ವಾತಾವರಣವಿತ್ತು. ತಂದೆ ಎಸ್.ಪಿ.ಸಾಂಬಮೂರ್ತಿ ಅವರು ಹರಿಕಥೆ ಹೇಳುತ್ತಿದ್ದರು. ಎಸ್‌ಪಿಬಿ ಅವರ ಗಾಯನಕ್ಕೆ ತಂದೆಯೇ ಪ್ರೇರಣೆ. ಬಾಲ್ಯದಲ್ಲಿ ಹಾಡುವುದು, ಹಾರ್ಮೋನಿಯಂ ನುಡಿಸುವುದು, ಕೊಳಲಿನಲ್ಲಿ ನಾದ ಹೊಮ್ಮಿಸುವುದು... ಹೀಗೆ ಸಂಗೀತ ಪ್ರಧಾನವಾಗಿ ತಮ್ಮಷ್ಟಕ್ಕೆ ತಾವೇ ಸಂಗೀತ ಕಲಿತವರು. ಶಾಸ್ತ್ರೀಯ ಸಂಗೀತದ ಮಟ್ಟಿಗೆ ಎಸ್‌ಪಿಬಿ ಅವರದು ಒಂದು ರೀತಿಯಲ್ಲಿ ‘ಏಕಲವ್ಯ ವಿದ್ಯೆ’. ಮುಂದೆ ಸಂಗೀತದ ಮೇರು ಪರ್ವತವೇ ಆದರು. ಸಂಗೀತದಲ್ಲಿ ಮನೆಮಾತಾದ ಮೇಲೆ ಶಾಸ್ತ್ರೀಯ ಸಂಗೀತ ಕಲಿಯಬೇಕು ಎಂಬ ಅಪರಿಮಿತ ಆಸೆಯನ್ನೂ ಇಟ್ಟುಕೊಂಡಿದ್ದರು.

ತ್ಯಾಗರಾಜರ ಪರಂಪರೆ: ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಂತ ತ್ಯಾಗರಾಜರು ‘ಸಂಗೀತ ತ್ರಿಮೂರ್ತಿ’ಗಳಲ್ಲಿ ಒಬ್ಬರೆಂದು ಹೆಸರಾದವರು. ಎಸ್‌‍ಪಿಬಿ ಅವರ ತಂದೆ ಸಾಂಬಮೂರ್ತಿ ಹರಿಕಥೆ ವಿದ್ವಾಂಸರಾಗಿ ನೆಲ್ಲೂರಿನಲ್ಲಿ ಹೆಸರುವಾಸಿಯಾಗಿದ್ದರು. ಅಲ್ಲದೆ ತ್ಯಾಗರಾಜರ ಅನುಯಾಯಿಯೂ ಆಗಿದ್ದರು. ಹೀಗಾಗಿ ಇವರನ್ನು ಜನರು ‘ತ್ಯಾಗರಾಜರ ಭಿಕ್ಷುವು’ ಎಂದು ಕರೆಯುತ್ತಿದ್ದರು. ಮನೆಯಲ್ಲಿ ತ್ಯಾಗರಾಜರ ಆರಾಧನೆಯನ್ನು ತಪ್ಪದೇ ನಡೆಸುತ್ತಿದ್ದರು. ಕರ್ನಾಟಕ ಸಂಗೀತ ದಿಗ್ಗಜರೆಲ್ಲ ಮನೆಗೆ ಭೇಟಿ ನೀಡುತ್ತಿದ್ದರು. ಶಾಸ್ತ್ರೀಯ ಸಂಗೀತದೊಂದಿಗೆ ಎಸ್‌ಪಿಬಿ ಅವರಿಗೆ ಅನನ್ಯ ನಂಟು ಬೆಳೆಯಲು ಇದೂ ಒಂದು ಕಾರಣ.

ಎಸ್‌ಪಿಬಿ ಹಾಡಿದ್ದು ಶಂಕರಾಭರಣ ಒಂದೇ ರಾಗವಲ್ಲ. ಶಾಸ್ತ್ರೀಯ ಸಂಗೀತ ಪ್ರಧಾನ ಸಿನಿಮಾಗಳಲ್ಲಿರುವ ಅನೇಕ ಗೀತೆಗಳನ್ನು ಶಾಸ್ತ್ರಬದ್ಧವಾಗಿ ಹಾಡಿದ್ದಾರೆ. ‘ಪಂಚಾಕ್ಷರಿ ಗವಾಯಿ’, ‘ಸಾಗರ ಸಂಗಮಂ’, ‘ಸ್ವಾತಿ ಮುತ್ಯಂ’, ‘ರುದ್ರವೀಣ’ ಮುಂತಾದ ಸಿನಿಮಾಗಳಲ್ಲಿ ಶಾಸ್ತ್ರೀಯ ಹಾಡುಗಳನ್ನು ಹಾಡಿ ಈ ಪ್ರಕಾರದಲ್ಲಿಯೂ ಸೈ ಎನಿಸಿಕೊಂಡವರು. ಹಿಂದೂಸ್ತಾನಿ ಸಂಗೀತದ ‘ಮಿಯಾ ಮಲ್ಹಾರ್‌’ ರಾಗದಲ್ಲೂ ಎಸ್‌‍ಪಿಬಿ ಹಾಡಿದ ಹಾಡು ಜನಪ್ರಿಯವಾಗಿತ್ತು.

ಗಾಯನದ ಜೊತೆಗೆ ಸಂಗೀತ ಸಂಯೋಜನೆ, ನಿರ್ದೇಶನವನ್ನೂ ಮಾಡಿದ ಹೆಗ್ಗಳಿಕೆ ಅವರದು.

ಎಸ್‌ಪಿಬಿ ಕಿರುತೆರೆಯಲ್ಲಿ ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡಿದೆನು’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶಾಸ್ತ್ರೀಯ ರಾಗಗಳ ಬಗ್ಗೆ, ರಾಗದ ಆರೋಹಣ ಅವರೋಹಣ ಸೇರಿದಂತೆ ರಾಗದ ಮನೋಧರ್ಮದ ಬಗ್ಗೆ ಹೇಳಿಕೊಡುವ ಮೂಲಕ ಸಂಗೀತ ಪಾಠ ಮಾಡುತ್ತಿದ್ದರು. ಪುಟ್ಟ ಮಕ್ಕಳಿಂದ ಹಿಡಿದು ಸಂಗೀತದ ದಿಗ್ಗಜಗಳವರೆಗೆ ಇವರನ್ನು ಗೌರವಪೂರ್ಣವಾಗಿ ನೋಡುವುದಕ್ಕೆ ಇವರಲ್ಲಿರುವ ಸಂಗೀತದ‘ಅಂತರ್ಧ್ವನಿ ಶಕ್ತಿ’ಯೇ ಕಾರಣ.

ಸಂಗೀತ ಎಂಬುದು ಮನೋಭಾವಗಳ ಭಾಷೆ. ಸುಶ್ರಾವ್ಯ ಗಾಯನ ಮನಸ್ಸಿಗೆ ಆತ್ಮಾನಂದ ನೀಡುತ್ತದೆ. ಎಸ್‌ಪಿಬಿ ಇಡೀ ಜಗತ್ತಿನ ಸಂಗೀತ– ಸಾಂಸ್ಕೃತಿಕ ರಾಯಭಾರಿ ಎನಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.