ADVERTISEMENT

Short Films: ಮೈಸೂರಿನ ಹುಡುಗರ ‘ಐ‌ ಸಿ ಯು’, ‘ಮಂಡಲ’ ಕಿರುಚಿತ್ರಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 23:30 IST
Last Updated 18 ಫೆಬ್ರುವರಿ 2026, 23:30 IST
ರಿಷಿ ರಾಮನ್‌, ಮಿಂಚು ಜೋಶಿ, ವಿಷ್ಣು ರಾಮನ್‌
ರಿಷಿ ರಾಮನ್‌, ಮಿಂಚು ಜೋಶಿ, ವಿಷ್ಣು ರಾಮನ್‌   

ಚಿತ್ರರಂಗಕ್ಕೆ ಬರುವವರಿಗೆ ಮೊದಲ ಹೆಜ್ಜೆ ಕಿರುಚಿತ್ರ ನಿರ್ಮಾಣ. ಹೀಗೆ ಸ್ಯಾಂಡಲ್‌ವುಡ್‌ಗೆ ಕಾಲಿಡುವ ಕನಸಿನೊಂದಿಗೆ ಮೈಸೂರಿನ ಹುಡುಗರ ತಂಡವೊಂದು ಸಿದ್ಧಪಡಿಸಿರುವ ‘ಐ‌ ಸಿ ಯು’ ಹಾಗೂ ‘ಮಂಡಲ’ ಕಿರುಚಿತ್ರಗಳ ವಿಶೇಷ ಪ್ರದರ್ಶನ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು.

ಹುಡುಗ, ಹುಡುಗಿಯ ಪ್ರೇಮ ಸಂಬಂಧದಲ್ಲಿ ಎದುರಾಗುವ ಸಮಸ್ಯೆಗಳು, ಅದಕ್ಕೆ ಪರಿಹಾರವನ್ನು ಹೇಳುವ ‘ಐ‌ ಸಿ ಯು’ ಕಿರುಚಿತ್ರವನ್ನು ಮಿಂಚು ಜೋಶಿ ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ನಾನು ಈ ಹಿಂದೆ ಪರಂವಃ ಸಂಸ್ಥೆಯ ‘ಸಕುಟುಂಬ ಸಮೇತ’ ಹಾಗೂ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಗಳ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ್ದೆ. ಪೂರ್ಣ ಪ್ರಮಾಣದ ಸಿನಿಮಾ ಮಾಡಲು ಪೂರ್ವತಯಾರಿ ಎಂಬಂತೆ ಈ ಕಿರುಚಿತ್ರ ಮಾಡಿದ್ದೇವೆ. ಮುಂಬೈ, ಮೈಸೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈಗಿನ ಕಾಲದ ಹುಡುಗ–ಹುಡುಗಿಯರ ಮನಸ್ಥಿತಿಯನ್ನು ಪ್ರತಿಬಿಂಬಿಸುವ ಕಥೆಯಿದು. ವಿವಿಧ ಚಿತ್ರೋತ್ಸವಗಳಿಗೆ ಕಳುಹಿಸುವ ಆಲೋಚನೆಯಿದೆ’ ಎಂದರು ಮಿಂಚು.

ಈ ಕಿರುಚಿತ್ರಕ್ಕೆ ರವೀಂದ್ರ ಜೋಶಿ ನಿರ್ಮಾಣವಿದ್ದು, ವಿಷ್ಣು ರಾಮನ್, ರಿಷಿ ರಾಮನ್ ಹಾಗೂ ಸಂದೀಪ್ ಶಿವಶಂಕರ್ ನಟಿಸಿದ್ದಾರೆ.

ADVERTISEMENT

ರಿಷಿ ರಾಮನ್ ನಿರ್ದೇಶಿಸಿ, ನಟಿಸಿರುವ ‘ಮಂಡಲ’ ಮನೋವೈಜ್ಞಾನಿಕ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು, ಮತಿವಿಕಲ್ಪ, ಆನುವಂಶಿಕ ಆಘಾತ ಮತ್ತು ಭಾವನಾತ್ಮಕ ಹಿಂಸೆಯ ಸುತ್ತ ಸಾಗುತ್ತದೆ. ರಾಮನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಕಿರುಚಿತ್ರದಲ್ಲಿ ಅನಾಮಿಕ ದತ್ತ, ಪ್ರಜ್ವಲ್ ಕುಮಾರ್ ಹಾಗೂ ಮಾನಸ ರಾಜ್ ಗೌಡ ನಟಿಸಿದ್ದಾರೆ. ‘ನಾನು ಬರ್ಲಿನ್‌ನಲ್ಲಿ ಸಿನಿಮಾ ಸಂಬಂಧಿ ತರಬೇತಿ ಪಡೆಯುತ್ತಿದ್ದೇನೆ. ಅಲ್ಲಿ ಚಿತ್ರೀಕರಿಸಿದ ಕಿರುಚಿತ್ರವಿದು. ಮೈಸೂರಿನಲ್ಲಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಮುಗಿಸಿದೆವು’ ಎಂದರು ರಿಷಿ ರಾಮನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.