
ಚಿತ್ರ: ನಾನು ಕುಸುಮಾ
ನಿರ್ಮಾಣ: ಸಪ್ತಗಿರಿ ಕ್ರಿಯೇಷನ್ಸ್
ನಿರ್ದೇಶನ: ಕೃಷ್ಣೇ ಗೌಡ
ತಾರಾಗಣ: ಗ್ರೀಷ್ಮಾ ಶ್ರೀಧರ್, ಕೃಷ್ಣೇ ಗೌಡ, ಸನಾತನಿ ಜೋಶಿ ಮುಂತಾದವರು
ಪೋಸ್ಟ್ ಮಾರ್ಟಮ್ ವಿಭಾಗದಲ್ಲಿ ಕೆಲಸ ಮಾಡುವ ಸಾಮಾನ್ಯ ನೌಕರನ ಮಗಳು ಚಿತ್ರದ ನಾಯಕಿ ಕುಸುಮಾ. ಮಗಳನ್ನು ದೊಡ್ಡ ವೈದ್ಯೆಯನ್ನಾಗಿ ಮಾಡಬೇಕು ಎಂಬುದು ಅಪ್ಪನ ಕನಸು. ಅದಕ್ಕೆ ತಕ್ಕಂತೆ ಚೆನ್ನಾಗಿ ಓದುತ್ತಿದ್ದ ಕುಸುಮಾ, ಒಂದು ಹಂತದಲ್ಲಿ ಅಪ್ಪನನ್ನು ಕಳೆದುಕೊಳ್ಳುತ್ತಾಳೆ. ಈ ಸಂಕಟದಿಂದ ವೈದ್ಯೆಯಾಗಲು ಸಾಧ್ಯವಾಗದೆ, ನರ್ಸ್ ಆಗುವ ಕುಸುಮಾ ಬದುಕಿನಲ್ಲಿ ಎದುರಿಸುವ ಸವಾಲುಗಳೇ ಚಿತ್ರದ ಒಟ್ಟಾರೆ ಕಥೆ.
ಸಾಕಷ್ಟು ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿರುವ ‘ನಾನು ಕುಸುಮಾ’ ಚಿತ್ರ ಸಮಾಜದಲ್ಲಿ ವಯಸ್ಸಿಗೆ ಬಂದ ಅನಾಥ ಹೆಣ್ಣುಮಗಳೊಬ್ಬಳು ಎದುರಿಸಬಹುದಾದ ಸಮಸ್ಯೆಗಳ ಸುತ್ತ ಸುತ್ತಿ ಒಂದು ಉತ್ತಮ ಸಂದೇಶ ನೀಡುತ್ತದೆ. ಬಹುತೇಕ ದೃಶ್ಯಗಳು ಸಿನಿಮೀಯವಾಗಿರದೆ ನಮ್ಮ ಸತ್ತಲೂ ನಿತ್ಯ ಕಾಣುವ ಸಂಗತಿಗಳೇ ಆಗಿವೆ. ಎಲ್ಲಿಯೂ ಅನವಶ್ಯಕ ಹಾಸ್ಯ, ಟ್ವಿಸ್ಟ್ ರೀತಿಯ ತಂತ್ರಗಳಿಲ್ಲದೇ ಒಂದು ಪರಿಶುದ್ಧ ಕಲಾತ್ಮಕ ಚಿತ್ರದ ಭಾವನೆ ಮೂಡಿಸುತ್ತದೆ.
‘ಮಾಲ್ಗುಡಿ ಡೇಸ್’ ಚಿತ್ರದಲ್ಲಿ ಬಹಳ ಸಹಜವಾಗಿ ನಟಿಸಿ ಭರವಸೆ ಮೂಡಿಸಿದ್ದ ನಟಿ ಗ್ರೀಷ್ಮಾ ಶ್ರೀಧರ್ ಕುಸುಮಾ ಆಗಿ ಕಾಣಿಸಿಕೊಂಡಿದ್ದಾರೆ. ಇವರ ಸಹಜ ಅಭಿನಯದ ಕೌಶಲ್ಯವನ್ನು ಇನ್ನಷ್ಟು ಉತ್ತಮವಾಗಿ ಬಳಸಿಕೊಳ್ಳುವ ಅವಕಾಶ ನಿರ್ದೇಶಕರಿಗಿತ್ತು. ಆದರೆ ಕಣ್ಣಲ್ಲಿ ಒಂದು ಹನಿ ನೀರೂ ಜಿನುಗದೆ ಅಳುವ ಧ್ವನಿ ಜೋರಾಗಿ ಕೇಳುವಂತಹ ಕೆಲ ದೃಶ್ಯಗಳಲ್ಲಿ ಇವರ ನಟನೆ ತುಸು ನಾಟಕೀಯವಾಗಿ ಭಾಸವಾಗುತ್ತದೆ. ಅಪ್ಪನಾಗಿ ನಿರ್ದೇಶಕ ಕೃಷ್ಣೇ ಗೌಡರು ನಟಿಸಿದ್ದು, ಅಪ್ಪ–ಮಗಳ ನಡುವಿನ ಹಲವು ದೃಶ್ಯಗಳು ಸಹಜ ಅನ್ನಿಸುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.