ಅಖಿಲ್ ಅಕ್ಕಿನೇನಿ ಹಾಗೂ ಝೈನಾಬ್ ರವ್ದೀ
ಹೈದರಾಬಾದ್: ತೆಲುಗು ಸೂಪರ್‌ಸ್ಟಾರ್ ನಾಗಾರ್ಜುನ ಅವರ ಪುತ್ರ ಅಖಿಲ್ ಅಕ್ಕಿನೇನಿ ಅವರ ನಿಶ್ಚಿತಾರ್ಥಕ್ಕೆ ಮುಹೂರ್ತ ನಿಶ್ಚಯವಾಗಿದ್ದು, ಈ ವಿಷಯವನ್ನು ಸ್ವತಃ ನಾಗಾರ್ಜುನ ಅವರೇ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಕಲಾವಿದೆ ಝೈನಾಬ್ ರವ್ದೀ ಅವರನ್ನು ತಮ್ಮ 2ನೇ ಪುತ್ರ ವರಿಸುತ್ತಿರುವುದಾಗಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ನಾಗಾರ್ಜುನ ಅವರು ಹಿರಿಯ ಪುತ್ರ ನಾಗ ಚೈತನ್ಯ ಅವರು ನಟಿ ಸಮಂತಾ ಅವರಿಂದ ವಿಚ್ಛೇಧನ ಪಡೆದ ನಂತರ, ನಟಿ ಶೋಭಿತಾ ಧೂಲಿಪಾಲ ಅವರನ್ನು ಡಿ. 4ರಂದು ವರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಅಖಿಲ್ ಅವರ ಮದುವೆ ನಿಶ್ಚಯವಾದ ಸುದ್ದಿಯನ್ನೂ ನಾಗಾರ್ಜುನ ಹಂಚಿಕೊಂಡಿದ್ದಾರೆ.
‘ನಮ್ಮ ಪುತ್ರ ಅಖಿಲ್ ಅಕ್ಕಿನೇನಿ ಅವರ ನಿಶ್ಚಿತಾರ್ಥ ನೆರವೇರುತ್ತಿರುವ ಸುದ್ದಿಯನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ. ನಮ್ಮ ಭಾವಿ ಸೊಸೆ ಝೈನಾಬ್ ರವ್ದೀ ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ಖುಷಿಯಾಗುತ್ತಿದೆ. ಈ ಯುವ ಜೋಡಿಯ ಬಾಳ ಪಯಣದಲ್ಲಿ ಪ್ರೀತಿ, ಸಂಭ್ರಮ ಹಾಗೂ ಅಪರಿಮಿತ ಆಶೀರ್ವಾದ ಸಿಗಲಿ ಎಂದು ಅಭಿನಂದಿಸಲು ನಮ್ಮೊಂದಿಗೆ ನೀವೂ ಜತೆಗೂಡಿ’ ಎಂದು ನಾಗಾರ್ಜುನ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ನಿಶ್ಚಿತಾರ್ಥವು ನಾಗಾರ್ಜುನ ಅವರ ಮನೆಯಲ್ಲೇ ನೆರವೇರಲಿದೆ. ಇದಕ್ಕೆ ಎರಡೂ ಕುಟುಂಬಗಳ ಅತ್ಯಂತ ಹತ್ತಿರದ ಸಂಬಂಧಿಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಝೈನಾಬ್ ಅವರು ಝುಲ್ವಿ ರವ್ದೀ ಅವರ ಪುತ್ರಿ. ಕಲಾವಿದೆಯಾಗಿರುವ ಝೈನಾಬ್ ಭಾರತ, ದುಬೈ ಮತ್ತು ಲಂಡನ್ ನಡುವೆ ಓಡಾಡುತ್ತಿದ್ದಾರೆ.
ತಮ್ಮ ಸಂಗಾತಿಯೊಂದಿಗಿನ ಚಿತ್ರವನ್ನು ಅಖಿಲ್ ಕೂಡಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಶಾಶ್ವತವನ್ನು ಕಂಡುಕೊಂಡಿದ್ದೇನೆ. ಝೈನಾಬ್ ರವ್ದೀ ಅವರೊಂದಿಗೆ ನಿಶ್ಚಿತಾರ್ಥವಾಗುತ್ತಿರುವುದು ಅತ್ಯಂತ ಸಂತಸ ತಂದಿದೆ’ ಎಂದಿದ್ದಾರೆ.
ಮದುವೆ ಸಮಾರಂಭವು 2025ರಲ್ಲಿ ನಡೆಯಲಿದೆ ಎಂದೆನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.