ADVERTISEMENT

ಮುಂದಿನ ವಾರದಿಂದ ‘ನರಗುಂದ ಬಂಡಾಯ’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 19:30 IST
Last Updated 2 ಮಾರ್ಚ್ 2020, 19:30 IST
ನಾಗೇಂದ್ರ ಮಾಗಡಿ - ಶುಭಾ ಪೂಂಜ
ನಾಗೇಂದ್ರ ಮಾಗಡಿ - ಶುಭಾ ಪೂಂಜ   

ರಾಜ್ಯದ ರೈತ ಹೋರಾಟದ ಕಥನಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ನರಗುಂದ ಬಂಡಾಯದ ಕಥೆಯು ಮಾರ್ಚ್‌ 12ರಿಂದ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ.

ನಾಗೇಂದ್ರ ಮಾಗಡಿ ನಿರ್ದೇಶನದ ಈ ಚಿತ್ರದ ಹಾಡುಗಳನ್ನು ನಟ ಶಿವ ರಾಜ್‌ಕುಮಾರ್ ಅವರು ಬಿಡುಗಡೆ ಮಾಡಿದರು. ‘ಚಿತ್ರದ ಟ್ರೇಲರ್ ಮತ್ತು ಹಾಡುಗಳು ಬಹಳ ಇಂ‍ಪ್ರೆಸ್ಸಿವ್ ಆಗಿವೆ. ಇಂತಹ ಸಿನಿಮಾಗಳು ಚೆನ್ನಾಗಿ ಪ್ರದರ್ಶನ ಕಾಣಬೇಕು. ನಾನೂ ಈ ಸಿನಿಮಾ ನೋಡುವೆ’ ಎಂದರು ಶಿವಣ್ಣ.

ಎಂಬತ್ತರ ದಶಕದಲ್ಲಿ ನರಗುಂದ ಭಾಗದಲ್ಲಿ ಒಂದು ಎಕರೆ ಒಣ ಜಮೀನಿನ ಬೆಲೆ ಇದ್ದಿದ್ದು ಅಂದಾಜು ₹ 2,500 ಮಾತ್ರ. ಇಂತಹ ಪ್ರದೇಶದಲ್ಲಿ ಅಭಿವೃದ್ಧಿ ಕರ ಎಂದು ರಾಜ್ಯ ಸರ್ಕಾರ ಪ್ರತಿ ಎಕರೆಗೆ ₹ 2,500 ನಿಗದಿ ಮಾಡಿತು. ಇದನ್ನು ವಿರೋಧಿಸಿ ಮಣ್ಣಿನ ಮಕ್ಕಳು ಹೋರಾಟದ ಹಾದಿ ಹಿಡಿದರು. ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರು ರೈತರು ಬಲಿಯಾದರು. ಇದು ಈ ಚಿತ್ರದ ಕಥೆ.

ADVERTISEMENT

‘ರೈತ ಮನಸ್ಸು ಮಾಡಿದರೆ ಸರ್ಕಾರಗಳನ್ನು ಬದಲಿಸಬಲ್ಲ. ರೈತನ ತಾಳ್ಮೆ ಪರೀಕ್ಷಿಸುವ ಕೆಲಸವನ್ನು ಯಾರೂ ಮಾಡಬಾರದು’ ಎನ್ನುತ್ತ ತಮ್ಮ ಸಿನಿಮಾ ಬಗ್ಗೆ ಮಾತು ಆರಂಭಿಸಿದ ನಾಗೇಂದ್ರ, ‘ಎಂಬತ್ತರ ದಶಕದಲ್ಲಿ ನಡೆದ ಹೋರಾಟವನ್ನು ಆಧರಿಸಿದ ಸಿನಿಮಾ ಇದು’ ಎಂದರು.

‘ನಾಯಕಿ ಶುಭಾ ಪೂಂಜ ಅವರದ್ದು ಗಟ್ಟಿಗಿತ್ತಿ ಹೆಣ್ಣುಮಗಳ ‍ಪಾತ್ರ. ನಾಯಕ ರಕ್ಷ್‌ ಕೂಡ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಅವರು ವೀರಬ್ಬ ಬಸಪ್ಪ ಕಡ್ಲಿಕೊಪ್ಪ ಅವರ ಪಾತ್ರವನ್ನು ನಿಭಾಯಿಸಿದ್ದು, ಆ ಪಾತ್ರಕ್ಕಾಗಿ ಬಹಳ ತಯಾರಿ ನಡೆಸಿದ್ದರು’ ಎಂದು ಮೆಚ್ಚುಗೆ ಸೂಚಿಸಿದರು.

ವೀರಪ್ಪ ಅವರು ಹೇಗೆ ಮಾತನಾಡುತ್ತಿದ್ದರು, ಅವರು ಗರಡಿಮನೆಯಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದರು ಎಂಬುದನ್ನೆಲ್ಲ ರಕ್ಷ್ ಅವರು ತಿಳಿದುಕೊಂಡು ಈ ಪಾತ್ರ ನಿಭಾಯಿಸಿದ್ದಾರಂತೆ. ‘ರೈತರಲ್ಲದವರು ಕೂಡ ಈ ಸಿನಿಮಾ ನೋಡಬೇಕು. ಕಥೆಯ ಹೊರತಾಗಿ ಈ ಚಿತ್ರದಲ್ಲಿ ಮತ್ತೇನೂ ಇಲ್ಲ. ಇದು ಪಕ್ಕಾ ಕಮರ್ಷಿಯಲ್ ಸಿನಿಮಾ’ ಎಂದು ಹೇಳಿದರು ರಕ್ಷ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.