ADVERTISEMENT

ನವಾಜುದ್ದಿನ್ ಸಿದ್ದಿಕಿಗೆ ಹಳೆಯ ದಿನಗಳ ನೆನಪು

​ಪ್ರಜಾವಾಣಿ ವಾರ್ತೆ
Published 22 ಮೇ 2020, 19:30 IST
Last Updated 22 ಮೇ 2020, 19:30 IST
ನವಾಜುದ್ದಿನ್ ಸಿದ್ದಿಕಿ
ನವಾಜುದ್ದಿನ್ ಸಿದ್ದಿಕಿ   

ನವಾಜುದ್ದಿನ್ ಸಿದ್ದಿಕಿ ಅವರ ಅಭಿನಯ, ಪಾತ್ರವನ್ನು ಹೊಕ್ಕು, ಪಾತ್ರವನ್ನೇ ಜೀವಿಸುವ ಅವರ ಸಾಮರ್ಥ್ಯವನ್ನು ಇಷ್ಟಪಡುವವರು, ಅವರ ಸಿನಿಮಾಗಳನ್ನು ತಪ್ಪಿಸಿಕೊಳ್ಳಲು ಬಯಸುವುದಿಲ್ಲ. ಅಂದಹಾಗೆ, ನವಾಜುದ್ದಿನ್ ಅಭಿನಯದ ಹೊಸ ಸಿನಿಮಾ ‘ಘೂಮ್‌ಕೇತು’ ಶುಕ್ರವಾರ ತೆರೆಗೆ ಬಂದಿದೆ.

ಈ ಸಿನಿಮಾದಲ್ಲಿನ ಪಾತ್ರವು, ತಾವು ಸಿನಿಮಾ ನಟನಾಗಬೇಕು ಎಂಬ ಆಸೆ ಹೊಂದಿದ್ದ ದಿನಗಳ ನೆನಪುಗಳನ್ನು ತಂದುಕೊಟ್ಟಿತು ಎಂದು ಅವರು ಹೇಳಿಕೊಂಡಿದ್ದಾರೆ. ನವಾಜುದ್ದೀನ್ ಅವರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ನಟನೆಯ ಪಾಠ ಹೇಳಿಸಿಕೊಂಡವರು.

‘ಕಹಾನಿ’, ‘ಗ್ಯಾಂಗ್ಸ್‌ ಆಫ್‌ ವಸೈಪುರ್‌’ ಸಿನಿಮಾಗಳ ಮೂಲಕ ಖ್ಯಾತಿ ಗಳಸಿಕೊಂಡವರು ಇವರು. ‘ನಾನು ಒಂದು ಸಣ್ಣ ಪಟ್ಟಣದಿಂದ ಮುಂಬೈಗೆ ಬಂದವ. ಇಲ್ಲಿನ ಜನ ವ್ಯವಹಾರಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಮಾತನಾಡುವವರು. ನನಗೆ ಇಲ್ಲಿನ ಜೀವನಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಯಿತು’ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ADVERTISEMENT

ನವಾಜುದ್ದೀನ್ ಅವರಿಗೆ ಆರಂಭದಲ್ಲಿ ಮುಂಬೈ ಜೀವನಕ್ಕೆ ಹೊಂದಿಕೊಳ್ಳಲು ಆಗುತ್ತಿರಲಿಲ್ಲವಂತೆ. ‘ಘೂಮ್‌ಕೇತು ಸಿನಿಮಾದಲ್ಲಿ ನನ್ನ ಪಾತ್ರವು (ಬರಹಗಾರ) ಎದುರಿಸಿದ ಸವಾಲುಗಳನ್ನು ನಾನು ನಟನಾಗಿ ಸಿನಿಮಾ ಉದ್ಯಮದಲ್ಲಿ ಎದುರಿಸಿದ್ದೇನೆ. ಈ ಪಾತ್ರಕ್ಕೂ ನನ್ನ ಜೀವನಕ್ಕೂ ಒಂದಿಷ್ಟು ಸಾಮ್ಯತೆಗಳು ಇವೆ’ ಎಂದು ನವಾಜುದ್ದೀನ್ ಹೇಳಿದ್ದಾರೆ.

ಒಳ್ಳೆಯ ಜೀವನ ಅರಸಿ ದೊಡ್ಡ ನಗರಕ್ಕೆ ವಲಸೆ ಹೋಗುವುದು ತಪ್ಪಲ್ಲ. ಆದರೆ, ಮನುಷ್ಯ ತನ್ನ ಬೇರುಗಳನ್ನು ಮರೆಯಬಾರದು ಎನ್ನುವುದು ‘ಘೂಮ್‌ಕೇತು’ ಸಿನಿಮಾ ನೀಡುವ ಸಂದೇಶ. ‘ನೀವು ನಿಮ್ಮ ಮೂಲ ನೆಲೆಗೆ ಮರಳಿದಾಗ ನಿಮಗೆ ಮೌಲ್ಯಗಳು, ಭಾವನೆಗಳು, ಕುಟುಂಬದ ಬೆಲೆ ಗೊತ್ತಾಗುತ್ತದೆ’ ಎನ್ನುವುದು ಅವರ ಮಾತು.

ಕೊರೊನಾ ಲಾಕ್‌ಡೌನ್‌ ಕಾರಣದಿಂದಾಗಿ ಸಿನಿಮಾ ಮಂದಿರಗಳು ಬಾಗಿಲು ಮುಚ್ಚಿರುವ ಪರಿಣಾಮ, ಚಿತ್ರವು ಈಗ ಜೀ5 ನಲ್ಲಿ ಬಿಡುಗಡೆ ಆಗಿದೆ. ‘ಕಲಾವಿದನ ಪಾತ್ರ ನಟಿಸುವುದು. ಸಿನಿಮಾ ಬಿಡುಗಡೆ ಆಗುವ ಮಾಧ್ಯಮ ಯಾವುದು ಎಂಬುದು ಅವನಿಗೆ ಮುಖ್ಯವಲ್ಲ’ ಎಂದು ನವಾಜುದ್ದೀನ್ ಹೇಳಿದ್ದಾರೆ.

ಅನುರಾಗ್ ಕಶ್ಯಪ್, ರಘುವೀರ್ ಯಾದವ್ ಸೇರಿದಂತೆ ಹಲವರು ಈ ಚಿತ್ರದ ತಾರಾಗಣದಲ್ಲಿ ಇದ್ದಾರೆ. ಅಮಿತಾಭ್ ಬಚ್ಚನ್, ರಣವೀರ್ ಸಿಂಗ್, ಸೋನಾಕ್ಷಿ ಸಿನ್ಹಾ, ನಿಖಿಲ್ ಅಡ್ವಾಣಿ ಅವರು ಇದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.