ADVERTISEMENT

ಬರ್ತಾಳೆ ಇಷ್ಟದೇವತೆ

​ಪ್ರಜಾವಾಣಿ ವಾರ್ತೆ
Published 23 ಮೇ 2019, 19:31 IST
Last Updated 23 ಮೇ 2019, 19:31 IST
ರಂಜನಿ ರಾಘವನ್‌
ರಂಜನಿ ರಾಘವನ್‌   

ಮಗಳ ಕಣ್ಣಲ್ಲಿ ನೃತ್ಯದ ಕನಸಿಟ್ಟು ತೀರಿಹೋದ ತಂದೆ, ಈ ಕನಸಿಗೆ ನೀರೆರೆದು ಪೋಷಿಸುತ್ತಿರುವ ತಾಯಿ, ಅವರಿಬ್ಬರ ಆಸೆ ನೆರವೇರಿಸಲೆಂದೇ ಭರತನಾಟ್ಯವನ್ನು ಬದುಕಾಗಿಸಿಕೊಂಡ ಮಗಳು. ಇತ್ತ ಅವಘಡದಲ್ಲಿ ತಂದೆಯನ್ನು ಕಳೆದುಕೊಂಡಿದ್ದರೂ ತುಂಬು ಕುಟುಂಬದ ಪ್ರೀತಿ ವಾತ್ಸಲ್ಯದಲ್ಲಿ ಸುಖವಾಗಿ ಬೆಳೆದ ನಾಯಕ. ತಂದೆ ಕಟ್ಟಿ ಬೆಳೆಸಿದ ಫುಡ್ ಇಂಡಸ್ಟ್ರಿ ಮುನ್ನಡೆಸುವ ಜವಾಬ್ದಾರಿ ಅವನ ಮೇಲಿದೆ. ಸಮಾನಾಂತರ ಬದುಕಲ್ಲಿ ಸಾಗುವ ನಾಯಕ – ನಾಯಕಿ ವಿಚಿತ್ರ ಸನ್ನಿವೇಶಗಳಲ್ಲಿ ಭೇಟಿಯಾಗುತ್ತಾರೆ.

ವಾಸ್ತವವಾದಿ ನಾಯಕಿ ವೈದೇಹಿ, ಪರಮ ದೈವಭಕ್ತ ನಾಯಕ ಶ್ರೀರಾಮ್. ನಾಯಕ ಶ್ರೀರಾಮ್‌ನ ಕಂಪನಿಯಲ್ಲಿ ಕೋಟಿಗಟ್ಟಲೆ ಲಾಭಕ್ಕಾಗಿ ತಯರಾಗುವ ಫುಡ್ ಪ್ರಾಡಕ್ಟ್ಸ್ ಅನ್ನೇ ಬದುಕು ನಡೆಸುವುದಕ್ಕಾಗಿ ರೂಪಾಯಿಗಳ ಲಾಭದಲ್ಲಿ ಮಾರುವ ಹುಡುಗಿ ವೈದೇಹಿ. ಉತ್ತರ ದ್ರುವ ದಕ್ಷಿಣದ್ರುವದಂತಿರುವ ಈ ಎರಡು ಜೀವಗಳನ್ನು ವಿಧಿ ಹೇಗೆ ಬೆಸೆಯುತ್ತೆ? ವೈದೇಹಿ ಹೇಗೆ ಶ್ರೀರಾಮ್‌ ಇಷ್ಟದೇವತೆ ಆಗ್ತಾಳೆ? ವೈದೇಹಿಯ ನೃತ್ಯದ ಕನಸಿನ ದಾರಿ ಎಲ್ಲಿ ಮುಟ್ಟುತ್ತೆ? ರಾಮ-ಸೀತೆಯಂತೆ, ಶ್ರೀರಾಮ್ ವೈದೇಹಿಯ ಜೀವನದಲ್ಲೂ ರಾಮಾಯಣ ನಡೆಯುತ್ತಾ?‌

ಇದು ‘ಇಷ್ಟದೇವತೆ’ ಧಾರಾವಾಹಿಯ ಕತೆ. ಕಲರ್ಸ್‌ ಕನ್ನಡದಲ್ಲಿ ಇದು ಮೇ 27ರಿಂದ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಒಂದು ದೊಡ್ಡ ಗ್ಯಾಪ್ ನಂತರ ರಾಜೇಶ್ ಕೃಷ್ಣನ್ ಈ ಧಾರಾವಾಹಿಗೆ ಶೀರ್ಷಿಕೆ ಗೀತೆ ಹಾಡಿದ್ದಾರೆ. ಹಿರಿಯ ನಟಿ ಭವ್ಯಾ ನಾಯಕಿಯ ತಾಯಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿಕ್ಕಮಗಳೂರಿನ ಸುಂದರ ತಾಣದಲ್ಲಿ ಶೂಟಿಂಗ್ ನಡೆದಿದೆ.

ADVERTISEMENT

‘ಪುಟ್ಟಗೌರಿ ಮದುವೆ’ ಧಾರಾವಾಹಿ ನಟಿ ರಂಜನಿ ರಾಘವನ್ ಈ ಧಾರಾವಾಹಿಗೆ ಕಥೆ – ಚಿತ್ರಕಥೆ ಬರೆದು, ತಮ್ಮ ಪ್ರತಿಭೆಯ ಮತ್ತೊಂದು ಮುಖ ಅನಾವರಣಗೊಳಿಸಿದ್ದಾರೆ. ಜೊತೆಗೆ ಕ್ರಿಯೇಟಿವ್ ಡೈರೆಕ್ಟರ್ ಮತ್ತು ಸಹ ನಿರ್ಮಾಪಕಿಯೂ ಆಗಿದ್ದಾರೆ. ‘ಲೈಮ್ ಲೈಟ್’ ಹಾಗೂ ‘ಕತೆ ಸ್ಟುಡಿಯೋ’ದ ಸಹಯೋಗದಲ್ಲಿ ಈ ಧಾರಾವಾಹಿ ಮೂಡಿಬರುತ್ತಿದೆ. ‘ಕತೆ ಸ್ಟುಡಿಯೋ’ ಕೂಡಾ ರಂಜನಿ ರಾಘವನ್ ಅವರದ್ದು. ಪೃಥ್ವಿರಾಜ್ ಮ.ಕುಲಕರ್ಣಿ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.

‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಮತ್ತು ‘ಇರುವುದೆಲ್ಲವ ಬಿಟ್ಟು’ ಸಿನೆಮಾದಿಂದ ಜನಪ್ರಿಯರಾಗಿದ್ದ ಶ್ರೀಮಹಾದೇವ್ ಎರಡು ವರ್ಷಗಳ ನಂತರ ಕಿರುತೆರೆಗಾಗಿ ಬಣ್ಣ ಹಚ್ಚಿದ್ದಾರೆ. ಇವರು ಇಷ್ಟದೇವತೆಯ ನಾಯಕ. ವೈದೇಹಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ರಾಶಿಗೆ ಇದು ಮೊದಲ ಧಾರಾವಾಹಿ. ‘ರಾಂಧವ’ ಸಿನಿಮಾದಲ್ಲಿ ಬಿಗ್‌ಬಾಸ್‌ ಸರ್ಧಿ ಭುವನ್‌ ಪೊನ್ನಪ್ಪ ಜತೆಗೆ ನಟಿಸಿರುವ ಇಬ್ಬರು ನಾಯಕಿಯರಲ್ಲಿ ರಾಶಿ ಕೂಡ ಒಬ್ಬರು. ರಾಶಿಯ ಊರು ಮಂಗಳೂರು.

ಪಾತ್ರಗಳು, ಕಥೆ, ನಿರೂಪಣೆ ಎಲ್ಲವೂ ತಾಜಾತನದಿಂದ ಕೂಡಿದ್ದು, ನವಿರು ಪ್ರೇಮಕಥೆ ಹೊಂದಿರುವ ‘ಇಷ್ಟದೇವತೆ’ ಯುವ ಮನಸ್ಸುಗಳನ್ನು ಕೂಡಾ ಸೆಳೆಯಲಿದೆ ಎನ್ನುತ್ತಾರೆ ರಂಜನಿ ರಾಘವನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.