ADVERTISEMENT

ನಿಖಿಲ್‌ ಮದುವೆ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಆಹ್ವಾನ ಪತ್ರಿಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 14:47 IST
Last Updated 24 ಫೆಬ್ರುವರಿ 2020, 14:47 IST
ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ
ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ   
""

ರಾಮನಗರ: ಏಪ್ರಿಲ್‌ 17ರಂದು ಜಾನಪದ ಲೋಕದ ಬಳಿ ನಿಖಿಲ್‌ ಕುಮಾರಸ್ವಾಮಿ–ರೇವತಿ ವಿವಾಹ ನಡೆಯಲಿದೆ. ಇವರಿಬ್ಬರ ವಿವಾಹದ್ದೆನ್ನಲಾದ ಆಮಂತ್ರಣ ಪತ್ರಿಕೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರೊಟ್ಟಿಗೆ ಎಚ್‌.ಡಿ. ಕುಮಾರಸ್ವಾಮಿ ಬರೆದಿದ್ದಾರೆ ಎನ್ನಲಾದ ಪತ್ರವೂ ಇದೆ.

ಎಚ್‌.ಡಿ. ದೇವೇಗೌಡರ ಕುಟುಂಬದವರ ಶುಭ ವಿವಾಹ ಎಂದು ಪತ್ರಿಕೆಯ ಮುಂಭಾಗದಲ್ಲಿದ್ದು, ಜೊತೆಗೆ ಅನಿತಾ ಹಾಗೂ ಕುಮಾರಸ್ವಾಮಿ ಅವರ ಹೆಸರುಗಳಿವೆ. ಪತ್ರಿಕೆಯ ಇನ್ನೊಂದು ಭಾಗದಲ್ಲಿ ಕುಮಾರಸ್ವಾಮಿ ಅವರ ಕೈಬರಹದ್ದು ಎನ್ನಲಾದ ಪತ್ರವಿದೆ. ಆದರೆ ಇದು ಅಧಿಕೃತ ಆಹ್ವಾನ ಪತ್ರವೇ ಎಂಬುದನ್ನು ಜೆಡಿಎಸ್ ಮುಖಂಡರು ಖಚಿತಪಡಿಸಿಲ್ಲ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಮಂತ್ರಣ ಪತ್ರ

‘ನಿಖಿಲ್‌ ಮದುವೆ ಆಹ್ವಾನ ಪತ್ರಿಕೆಯನ್ನು ಇನ್ನೂ ದೇವರ ಪೂಜೆಗೆ ಇಟ್ಟಿಲ್ಲ. ಅಲ್ಲದೆ ಹಂಚಲು ನಮಗ್ಯಾರಿಗೂ ಕೊಟ್ಟಿಲ್ಲ. ಪತ್ರದಲ್ಲಿ ಇರುವ ಎಚ್‌ಡಿಕೆ ಸಹಿಯೂ ಅವರದ್ದು ಎಂಬಂತೆ ಇಲ್ಲ’ ಎಂದು ರಾಮನಗರದ ಜೆಡಿಎಸ್ ಮುಖಂಡರೊಬ್ಬರು ತಿಳಿಸಿದರು.

ADVERTISEMENT

ಏನಿದೆ ಪತ್ರದಲ್ಲಿ?: ‘ನನ್ನ ಪ್ರೀತಿಯ ಎಲ್ಲರಿಗೂ ಸ್ವಪ್ರೇಮ ನಮಸ್ತೆ, ನಿಮಗೊಂದು ಪ್ರೀತಿಯ ಕರೆಯೋಲೆ’ ಎಂಬ ಒಕ್ಕಣೆಯೊಂದಿಗೆ ಪತ್ರ ಆರಂಭವಾಗುತ್ತದೆ.

‘ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ. ರಾಜಕೀಯವಾಗಿ ಆಶೀರ್ವದಿಸಿ, ಪುನರ್ ಜನ್ಮ ನೀಡಿದ್ದು ನಾಡಿನ ಜನತೆ. ವಿಶೇಷವಾಗಿ ರಾಮನಗರ ಜಿಲ್ಲೆಯ ತಂದೆ-ತಾಯಂದಿರು. ರಾಜಕೀಯ ನನಗೊಂದು ಆಕಸ್ಮಿಕವಾಗಿ ಸಿಕ್ಕ ಬದುಕು. ಅದನ್ನು ಸಲಹುತ್ತಾ ಬಂದಿರುವ ನಿಮ್ಮ ಪ್ರೀತಿಗೆ ನಾನು ಸದಾ ಋಣಿ’ ಎಂದು ಎಚ್‌ಡಿಕೆ ನೆನೆದಿದ್ದಾರೆ.

ಬಳಿಕ ರಾಜಕೀಯ ಸ್ಥಿತ್ಯಂತರದಲ್ಲಿ ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದನ್ನು ನೆನೆದಿದ್ದಾರೆ. ಜನರೊಂದಿಗಿನ ತಮ್ಮ ಒಡನಾಟವನ್ನು ಸುದೀರ್ಘವಾಗಿ ಸ್ಮರಿಸಿದ್ದಾರೆ. ‘ಏ.17ರಂದು ಮಗನ ಮದುವೆ. ತಪ್ಪದೇ ಬನ್ನಿ. ಮಗ–ಸೊಸೆಯನ್ನು ಹರಸಿ’ ಎನ್ನುವುದರೊಂದಿಗೆ ಪತ್ರ ಮುಗಿದಿದೆ. ಕೆಳಗೆ ಕುಮಾರಸ್ವಾಮಿ ಅವರದ್ದು ಎನ್ನಲಾದ ಸಹಿಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.