ADVERTISEMENT

‘ಹಳ್ಳಿಮೇಷ್ಟ್ರ’ ಹಿಂದೆ.. ಪ್ರಜಾವಾಣಿಯೊಂದಿಗೆ ನಿಶ್ವಿಕಾ ನಾಯ್ಡು ಸಂದರ್ಶನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 0:15 IST
Last Updated 23 ಸೆಪ್ಟೆಂಬರ್ 2022, 0:15 IST
ನಿಶ್ವಿಕಾ ನಾಯ್ಡು, ಶರಣ್
ನಿಶ್ವಿಕಾ ನಾಯ್ಡು, ಶರಣ್   

ಪಕ್ಕಾ ಪೇಟೆ ಹುಡ್ಗಿ ನಿಶ್ವಿಕಾ ನಾಯ್ಡು ಇದೀಗ ಹಳ್ಳಿ ಹುಡ್ಗಿಯಾಗಿ ಪಿಇಟಿ ಮೇಷ್ಟ್ರ ಹಿಂದೆ ಬಿದ್ದಿದ್ದಾರೆ. ರವಿಚಂದ್ರನ್‌ ಅಭಿಮಾನಿಯಾಗಿರೋ ಈ ‘ಸೂಜಿ’ ಆಣೆ ಮಾಡಿ ಹೇಳಿದ್ದೇನು...? ಇಲ್ಲಿದೆ ಓದಿ...

‘ಗುರು ಶಿಷ್ಯರು’ ಪ್ರೊಜೆಕ್ಟ್‌ ತೆಕ್ಕೆಗೆ ಬಿದ್ದಿದ್ದು ಹೇಗೆ?

‘ಗುರು ಶಿಷ್ಯರು’ ಸಿನಿಮಾದಲ್ಲಿ ಪಾತ್ರ ದೊರಕಿರುವುದೇ ನನ್ನ ಪುಣ್ಯ. ‘ಜಂಟಲ್‌ಮನ್‌’ ಸಿನಿಮಾದಲ್ಲಿ ನಾನು ನಿರ್ದೇಶಕ ಜಡೇಶ್‌ ಅವರ ಜೊತೆ ಕಾರ್ಯನಿರ್ವಹಿಸಿದ್ದೆ. ಅಲ್ಲಿನ ನನ್ನ ಕೆಲಸವನ್ನು ಗುರುತಿಸಿ ಇಲ್ಲಿ ಅವಕಾಶ ನೀಡಿದ್ದಾರೆ. ಒಂದೊಳ್ಳೆಯ ತಂಡವಿದು. ಸಿನಿಮಾದಲ್ಲಿ ಸಾಕಷ್ಟು ವಿಶೇಷವಿದೆ. ನಾನು ಇಲ್ಲಿಯವರೆಗಿನ ಸಿನಿಮಾಗಳಲ್ಲಿ ಮಾಡಿದ್ದ ಪಾತ್ರಕ್ಕಿಂತ ಬಹಳ ಭಿನ್ನವಾದ ಪಾತ್ರ ಈ ಸಿನಿಮಾದಲ್ಲಿದೆ. ಪಕ್ಕಾ ಹಳ್ಳಿ ಹುಡುಗಿಯ ಈ ಪಾತ್ರ ಮಾಡಲು ಸಾಕಷ್ಟು ತಯಾರಿ ಮಾಡಬೇಕು. ಇದಕ್ಕೆ ಒಪ್ಪಿಗೆ ಇದ್ದರಷ್ಟೇ ಸಿನಿಮಾ ಕಥೆ ಹೇಳುತ್ತೇನೆ ಎಂದು ಜಡೇಶ್‌ ಅವರು ಮೊದಲೇ ತಿಳಿಸಿದ್ದರು. ದೈಹಿಕ ಬದಲಾವಣೆಯಿಂದ ಹಿಡಿದು, ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಲು ಧರಿಸುವ ಧಿರಿಸು, ಸೈಕಲ್‌ ಸವಾರಿ ಹೀಗೆ ಆಮೂಲಾಗ್ರ ಬದಲಾವಣೆ, ಹೋಂವರ್ಕ್‌ ಅಗತ್ಯವಿತ್ತು. ಈ ತಯಾರಿಯ ಫಲಿತಾಂಶವನ್ನು ಪ್ರೇಕ್ಷಕರು ತೆರೆಯ ಮೇಲೆ ನೋಡಬಹುದು.

ADVERTISEMENT

ನೀವೆಸೆದ ಸವಾಲು ಭಾರಿ ಸದ್ದು ಮಾಡಿತು...

‘ಆಣೆ ಮಾಡಿ ಹೇಳುತೀನಿ’ ಹಾಡಿನ ರೀಲ್ಸ್‌ ಚಾಲೆಂಜ್‌ ಸಿನಿಮಾ ಪ್ರಚಾರದ ಭಾಗವಾಗಿತ್ತು. ಹಾಡಿನಲ್ಲಿ ನನ್ನ ಲಂಗದಾವಣಿ ಲುಕ್‌ ಮೆಚ್ಚುಗೆ ಪಡೆಯಿತು. ಹೀಗಾಗಿ ರೀಲ್ಸ್‌ ಮಾಡಿ ಹಾಕಿದೆ. ಇದಕ್ಕೆ ದೊರಕಿದ ಪ್ರತಿಕ್ರಿಯೆಯನ್ನು ನಾವು ಕೂಡಾ ಊಹಿಸಿರಲಿಲ್ಲ. ಈ ಚಾಲೆಂಜ್‌ ಹಾಕಿ ತಿಂಗಳುಗಳೇ ಉರುಳಿದ್ದರೂ, ಇಂದಿಗೂ ಹಲವರು ನನ್ನನ್ನು ಇನ್‌ಸ್ಟಾದಲ್ಲಿ ಟ್ಯಾಗ್‌ ಮಾಡಿ ರೀಲ್ಸ್‌ ಮಾಡುತ್ತಿದ್ದಾರೆ. ಹಾಡಿನಲ್ಲಿನ ಹುಕ್‌ಸ್ಟೆಪ್‌ ಎಲ್ಲರನ್ನೂ ಸೆಳೆದಿದೆ.

ಸಿನಿಮಾದಲ್ಲಿ ನೀವು ಎದುರಿಸಿದ ಸವಾಲೇನು?

ನಾನು ಕರುನಾಡಿನಲ್ಲೇ ಹುಟ್ಟಿಬೆಳೆದವಳು. ಕನ್ನಡವನ್ನು ಚೆನ್ನಾಗಿಯೇ ಮಾತನಾಡುತ್ತೇನೆ. ಆದರೆ ನಗರದಲ್ಲಿ ಬೆಳೆದ ನನಗೆ ಕಷ್ಟವಾಗಿದ್ದು, ಹಳ್ಳಿ ಕಡೆಯ ಸ್ಲ್ಯಾಂಗ್‌. ಈ ಸ್ಲ್ಯಾಂಗ್‌ ನನಗೆ ಸ್ವಾಭಾವಿಕವಾಗಿ ಬರಬೇಕಿತ್ತು. ಡಬ್ಬಿಂಗ್‌ ಮಾಡುವ ಮುಂಚೆ ಹಳ್ಳಿಯ ಕಡೆಯಿಂದ ಒಬ್ಬರು ಬಂದು ನನಗೆ ಈ ಸ್ಲ್ಯಾಂಗ್‌ ಕಲಿಸಿದ್ದರು. ಹೀಗಾಗಿ ಯಾವುದೇ ನ್ಯೂನತೆ ಇರಬಾರದು ಎಂದು ಚಿತ್ರಕ್ಕೆ ಮೂರು ಬಾರಿ ಡಬ್ಬಿಂಗ್‌ ಮಾಡಿದ್ದೆ. ನಟನೆ ಮಾಡುವುದು ಕೆಲವೊಮ್ಮೆ ಸುಲಭ, ಆದರೆ ಮುಖ ಭಾವನೆಗೆ ತಕ್ಕಂತೆ ಹಳ್ಳಿ ಭಾಷೆಯಲ್ಲಿ ಡಬ್ಬಿಂಗ್‌ ಮಾಡುವುದು ಕಷ್ಟ. ಇದಕ್ಕೂ ಸಮಯ ಹಿಡಿಯಿತು. ಜೊತೆಗೆ ಪಾತ್ರಕ್ಕಾಗಿ ನಾನು ಸೈಕಲ್‌ ಸವಾರಿ ಅಭ್ಯಾಸ ಮಾಡಿದ್ದೆ. ಗಂಡು ಮಕ್ಕಳು ಸವಾರಿ ಮಾಡುವ ಸೈಕಲ್ ಅದು. ಸಿಟಿಯಲ್ಲಿ ಹುಟ್ಟಿಬೆಳೆದ ನನಗೆ ಲಂಗದಾವಣಿ ಉಟ್ಟುಕೊಂಡು ಸೈಕಲ್‌ ಸವಾರಿ ಮಾಡುವುದು ಸವಾಲಾಗಿತ್ತು. ಇದಕ್ಕಾಗಿ ಇಲ್ಲಿಗೆ ಸೈಕಲ್‌ ತರಿಸಿಕೊಂಡು ಮನೆ ಮುಂದೆಯೇ ಅಭ್ಯಾಸ ಮಾಡಿದ್ದೆ.

ಚಿತ್ರದಲ್ಲಿನ ಪಾತ್ರದ ಕುರಿತು...

‘ಗುರು ಶಿಷ್ಯರು’ ಚಿತ್ರದಲ್ಲಿ ಹಾಲು ಮಾರುವ ಹಳ್ಳಿ ಹುಡುಗಿ ‘ಸೂಜಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸೂಜಿ ರವಿಚಂದ್ರನ್‌ ಅಭಿಮಾನಿ. ಖಂಡಿತವಾಗಿಯೂ ರವಿಚಂದ್ರನ್‌ ಅವರ ‘ಹಳ್ಳಿಮೇಷ್ಟ್ರು’ ಸಿನಿಮಾದ ಪ್ರಭಾವ ನನ್ನ ಮೇಲೆ ಬಹಳಷ್ಟಿದೆ. ನಾನು ನಿಜಜೀವನದಲ್ಲೂ ಅವರ ಅಭಿಮಾನಿ. ಸೂಜಿಯದ್ದು ಒಂದು ರೀತಿ ಫಿಲ್ಮಿ ಕ್ಯಾರೆಕ್ಟರ್‌. ಹಳ್ಳಿಮೇಷ್ಟ್ರಾಗಿ ‘ಮನೋಹರ್‌’ ಎಂಬ ಪಾತ್ರದಲ್ಲಿ ಶರಣ್‌ ಇಲ್ಲಿದ್ದಾರೆ. ಅವರನ್ನು ನೋಡಿದ ತಕ್ಷಣ ಸೂಜಿಗೆ ‘ಹಳ್ಳಿಮೇಷ್ಟ್ರು’ ಸಿನಿಮಾದ ರವಿಚಂದ್ರನ್‌ ನೆನಪಾಗುತ್ತಾರೆ. ಈ ಎರಡು ಪಾತ್ರಗಳ ನಡುವಿನ ಪ್ರೇಮಕಥೆ ಈ ಸಿನಿಮಾ.

ಸಿನಿಮಾ ಶೂಟಿಂಗ್‌ ಅನುಭವ ಹಂಚಿಕೊಳ್ಳಬಹುದೇ...

ಕೋಕೊ ಕ್ರೀಡೆಯನ್ನು ನಾವು ಗಂಭೀರ ಕ್ರೀಡೆಯಾಗಿ ಯಾವತ್ತೂ ಆಡಿರಲಿಲ್ಲ. ಹಾಗಾಗಿ ಈ ಕ್ರೀಡೆಯ ವಿಷಯಾಧಾರಿತ ಸಿನಿಮಾ ಮಾಡುತ್ತಿದ್ದಾರೆ ಎಂದರೆ ಈ ಕ್ರೀಡೆ ಎಷ್ಟು ಮುಖ್ಯವಾದುದು ಎಂದು ಕಥೆ ಕೇಳಿದ ಮೇಲೆ ತಿಳಿಯಿತು. ಒಬ್ಬ ನಟನನ್ನು ಆಟಗಾರನನ್ನಾಗಿ ಬದಲಾಯಿಸುವುದು ಬಹಳ ಕಷ್ಟ. ಆದರೆ ಸಿನಿಮಾದಲ್ಲಿ ನಟಿಸಿರುವ ಮಕ್ಕಳೆಲ್ಲರೂ ಇದೊಂದು ಸಿನಿಮಾ ಎನ್ನುವುದನ್ನೇ ಮರೆತಿದ್ದರು. ಸಂಜೆ ಚಿತ್ರೀಕರಣ ಇದೆ ಎಂದರೆ ಬೆಳಗ್ಗಿನಿಂದಲೇ ಅಭ್ಯಾಸ ಮಾಡುತ್ತಿದ್ದರು. ‘ನಾಳೆ ಶೂಟಿಂಗ್‌ ಇದೆ’ ಎನ್ನುವ ಬದಲು ‘ನಾಳೆ ಮ್ಯಾಚ್‌ ಇದೆ’ ಎನ್ನುವಷ್ಟರ ಮಟ್ಟಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇದು ನಮಗೂ ಸ್ಫೂರ್ತಿಯಾಗಿತ್ತು. ಕ್ಲೈಮ್ಯಾಕ್ಸ್‌ನಲ್ಲಿ ಶೂಟಿಂಗ್‌ ಬದಲಾಗಿ ನಿಜವಾಗಿ ನಡೆಯುತ್ತಿರೋ ಪಂದ್ಯಾವಳಿ ನೋಡುತ್ತಿದ್ದೇವೆಯೋ ಎನ್ನುವಂತೆ ಭಾಸವಾಗಿತ್ತು.

ನಿಶ್ವಿಕಾ ಮುಂದಿನ ಸಿನಿಪಯಣದ ಹೈಲೈಟ್ಸ್‌..

‘ದಿಲ್‌ಪಸಂದ್‌’ ಒಂದು ರೊಮ್ಯಾಂಟಿಕ್‌ ಕಾಮಿಡಿ ಸಿನಿಮಾ. ನ.11ಕ್ಕೆ ಇದು ಬಿಡುಗಡೆಯಾಗಲಿದೆ. ‘ಸೂಜಿ’ಗೆ ಪೂರ್ಣ ತದ್ವಿರುದ್ಧವಾದ ಪಾತ್ರ ಇಲ್ಲಿದೆ. ತುಂಬಾ ಬೋಲ್ಡ್‌ ಆಗಿ ನಾನಿಲ್ಲಿ ಕಾಣಿಸಿಕೊಂಡಿದ್ದೇನೆ. ಈ ರೀತಿ ವಿಭಿನ್ನ ಪಾತ್ರಗಳನ್ನು ಮಾಡುವುದೇ ನನ್ನ ಸಿನಿಪಯಣದ ಗುರಿ. ಯೋಗರಾಜ್‌ ಭಟ್‌ ಅವರು ನಿರ್ದೇಶಿಸುತ್ತಿರುವ ‘ಕರಟಕ ದಮನಕ’ ಸಿನಿಮಾದಲ್ಲಿ ಬಹುಭಾಷಾ ನಟ ಪ್ರಭುದೇವ ಅವರ ಜೋಡಿಯಾಗಿ ನಾನು ನಟಿಸುತ್ತಿದ್ದೇನೆ. ಈ ವರ್ಷದ ಸಿನಿಜರ್ನಿ ಅದ್ಭುತವಾಗಿದೆ. ಉಳಿದಂತೆ ಯಾವುದೇ ಸಿನಿಮಾಗಳನ್ನು ಸದ್ಯಕ್ಕೆ ಒಪ್ಪಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.