ADVERTISEMENT

ತಮಿಳು ನಟ ವಿಜಯಕಾಂತ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಆರೋಗ್ಯದಲ್ಲಿ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 6:02 IST
Last Updated 23 ಜೂನ್ 2022, 6:02 IST
 ವಿಜಯಕಾಂತ್
ವಿಜಯಕಾಂತ್   

ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ಡಿಎಂಡಿಕೆ ಪಕ್ಷದ ನಾಯಕ ವಿಜಯಕಾಂತ್ (Vijayakanth) ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಕಳೆದ ಸೋಮವಾರ ವಿಜಯಕಾಂತ್‌ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಧುಮೇಹದಿಂದ ಬಳಲುತ್ತಿರುವ ಅವರಿಗೆ ವೈದ್ಯರು ಕಾಲಿನ ಮೂರು ಬೆರಳುಗಳನ್ನು ಕತ್ತರಿಸಿದ್ದಾರೆ.

ವಿಜಯಕಾಂತ್‌ ಆರೋಗ್ಯವಾಗಿದ್ದು ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಎರಡು ಮೂರು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು‘ದೇಸಿಯ ಮೂರ್ಪೊಕ್ಕು ದ್ರಾವಿಡ ಕಳಗಂ’ (ಡಿಎಂಡಿಕೆ) ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.

ಆಗಸ್ಟ್ 25, 1952 ರಂದು ವಿಜಯಕಾಂತ್‌ ಜನಿಸಿದರು. ನಟ, ರಾಜಕಾರಣಿಯಾಗಿ ವಿಜಯಕಾಂತ್ ಗುರುತಿಸಿಕೊಂಡಿದ್ದಾರೆ. ರಾಜಕಾರಣಕ್ಕೆ ಬರುವ ಮುನ್ನ ಅವರು ನಟ, ನಿರ್ಮಾಪಕ ಹಾಗೂ ನಿರ್ದೇಶಕರಾಗಿದ್ದರು. ‘ಪೂನ್‌ತೋಟ ಕಾವಲ್‌ಕಾರನ್’, ‘ಸೇಂತೂರ ಪೂವೆ’, ‘ಪುಲನ್ ವಿಸಾರಣೈ’, ‘ಹಾನೆಸ್ಟ್ ರಾಜ್’, ‘ತ್ಯಾಗಂ’, ‘ವಾನತೈಪ್ಪೊಲಾ’ ಸೇರಿದಂತೆ ಹಲವಾರು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಡಿಎಂಡಿಕೆ ಎಂಬ ರಾಜಕೀಯ ಪಕ್ಷದ ಸ್ಥಾಪಕ ಮತ್ತು ಅಧ್ಯಕ್ಷರೂ ಆಗಿದ್ದಾರೆ.2011 ರಿಂದ 2016 ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.