ADVERTISEMENT

ಒಂದಲ್ಲಾ ಎರಡಲ್ಲಾ ಟ್ರೇಲರ್ ಬಂತಲ್ಲಾ

ಒಂದೂರಲ್ಲಿ ಹೀಗೆ ಒಂದೂರ ಕಥೆಯಿದು...

​ಪ್ರಜಾವಾಣಿ ವಾರ್ತೆ
Published 12 ಜುಲೈ 2018, 9:47 IST
Last Updated 12 ಜುಲೈ 2018, 9:47 IST
‘ಒಂದಲ್ಲಾ ಎರಡಲ್ಲಾ’ ಚಿತ್ರದ ದೃಶ್ಯ.
‘ಒಂದಲ್ಲಾ ಎರಡಲ್ಲಾ’ ಚಿತ್ರದ ದೃಶ್ಯ.   

‘ರಾಮಾ ರಾಮಾ ರೇ’ ಚಿತ್ರದಿಂದ ಜನಪ್ರಿಯರಾಗಿದ್ದ ನಿರ್ದೇಶಕ ಡಿ. ಸತ್ಯಪ್ರಕಾಶ್‌ ತಮ್ಮ ಎರಡನೇ ಚಿತ್ರ ‘ಒಂದಲ್ಲಾ ಎರಡಲ್ಲಾ’ ಮಾಡಿ ಮುಗಿಸಿದ್ದಾರೆ. ಇತ್ತೀಚೆಗೆ ಸಿನಿಮಾದ ಪೋಸ್ಟರ್‌ ಬಿಡುಗಡೆ ಮಾಡಿದ್ದ ಅವರು ‘ಇದು ಮಗುವಿನ ಮುಗ್ಧತೆ ಮತ್ತು ದೊಡ್ಡವರ ಜಗತ್ತಿನ ಮಾನವೀಯತೆ ಎರಡನ್ನೂ ಸೇರಿಸಿ ಹೆಣೆದ ಚಿತ್ರ’ ಎಂದು ಹೇಳಿದ್ದರು.

ಇದೀಗ ‘ಒಂದಲ್ಲಾ ಎರಡಲ್ಲಾ’ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿದೆ. ಈ ಟ್ರೇಲರ್‌ನಲ್ಲಿ ಕಾಣೆಯಾಗಿರುವ ಪುಟ್ಟ ಬಾಲಕನ ಸುತ್ತ ಈ ಚಿತ್ರ ಹೆಣೆದಿದೆ, ಆ ಬಾಲಕನ ಹೆಸರು ಸಮೀರ ಎಂಬ ಸುಳಿವನ್ನು ನೀಡಲಾಗಿದೆ.

ಗಲಭೆಯ ಪ್ರಕ್ಷುಬ್ದ ಚಿತ್ರಿಕೆಗಳು, ಪುಟಾಣಿ ಸಮೀರನ ಓಟದ ಆಟ, ಓಡಿಹೋದ ಭಾನುವಿನ ಕುರಿತ ಆತಂಕ ಹೀಗೆ ಹಲವು ಕುತೂಹಲದ ಬೀಜಗಳನ್ನು ಟ್ರೇಲರ್‌ ಮೂಲಕ ಬಿತ್ತಿದ್ದಾರೆ. ಜತೆಗೆ ಪುಟಾಣಿ ಹುಡುಗಿಯ ಧ್ವನಿಯಲ್ಲಿ ಬಂದಿರುವ ‘ಒಂದೂರಲ್ಲಿ ಹೀಗೆ ಒಂದೂರ ಕಥೆಯಿದು...’ ಎಂಬ ಹಾಡೂ ಮನಸೆಳೆಯುವಂತಿದೆ. ಈ ಧ್ವನಿಯಲ್ಲಿನ ಮುಗ್ಧತೆಗೆ ಪೂರ್ತಿ ವಿರುದ್ಧವಾದ ಇನ್ನೊಂದು ಧ್ವನಿ ‘ಕಾಡು ನುಂಗಿದ ಕಳ್ಳ ಊರಲಿ ಬಂದು ನಿಂತನು ಸಮೀರ’ ಎಂದು ಹೇಳುವುದೂ ಮುಗ್ಧತೆ ಮತ್ತು ದುರುಳತನದ ಮುಖಾಮುಖಿಯ ಕಥೆ ಇದು ಎಂಬ ಸುಳಿವು ನೀಡುವಂತಿದೆ. ವಿಶೇಷವಾಗಿ ಹಿನ್ನೆಲೆ ಸಂಗೀತ ಗಮನ ಸೆಳೆಯುವಂತಿದೆ.

ADVERTISEMENT

‘ರಾಮಾ ರಾಮಾ ರೇ’ ನಂತರ ಸತ್ಯಪ್ರಕಾಶ್‌ ಮಾಡಿರುವ ಈ ಚಿತ್ರದ ಕುರಿತು ಸಾಕಷ್ಟು ನಿರೀಕ್ಷೆಗಳಿವೆ. ಆ ನಿರೀಕ್ಷೆಯನ್ನು ತಣಿಸುವ ಲಕ್ಷಣಗಳೂ 2.18 ನಿಮಿಷ ಅವಧಿಯ ಟ್ರೇಲರ್‌ನಲ್ಲಿಯೇ ಗೋಚರಿಸುತ್ತವೆ. ಹಳ್ಳಿಯ ವಾತಾವರಣ, ಮುಸ್ಲಿಂ ಮಧ್ಯಮವರ್ಗದ ಕುಟುಂಬದ ಕಥೆಯೊಂದನ್ನು ಇಟ್ಟುಕೊಂಡು ಸತ್ಯ ಏನು ಹೇಳಹೊರಟಿದ್ದಾರೆ ಎನ್ನುವುದನ್ನು ತಿಳಿಯಬೇಕು ಎಂದರೆ ಆಗಸ್ಟ್‌ವರೆಗೆ ಕಾಯಲೇ ಬೇಕು.

ಲವಿತ್ ಛಾಯಾಗ್ರಹಣ, ವಾಸುಕಿ ವೈಭವ್ ಸಂಗೀತ, ನೋಬಿನ್‌ ಪೌಲ್ ಧ್ವನಿ ವಿನ್ಯಾಸವಿದೆ. ಬಹುತೇಕ ಹೊಸ ಕಲಾವಿದರೇ ಈ ಚಿತ್ರದಲ್ಲಿ ನಟಿಸಿದ್ದಾರೆ. ಹೆಬ್ಬುಲಿ ಚಿತ್ರದ ನಿರ್ಮಾಪಕ ಉಮಾಪತಿ ಈ ಚಿತ್ರಕ್ಕೆ ಹಣ ಹೂಡಿದ್ದಾರೆ.

ಒಂದಲ್ಲಾ ಎರಡಲ್ಲಾ ಚಿತ್ರ ಟ್ರೇಲರ್‌ ಲಿಂಕ್‌:https://goo.gl/EuMZYS

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.