ADVERTISEMENT

ಭಟ್ಟರ ಪಂಚ್‌ ತಂತ್ರ!

ಪ್ರಜಾವಾಣಿ ಕಚೇರಿಯಲ್ಲಿ ಪಂಚತಂತ್ರ ತಂಡ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 19:48 IST
Last Updated 28 ಮಾರ್ಚ್ 2019, 19:48 IST
ಸೋನಲ್‌ ಪ್ರಜಾವಾಣಿ ಚಿತ್ರ/ ಎಸ್‌.ಕೆ.ದಿನೇಶ್‌
ಸೋನಲ್‌ ಪ್ರಜಾವಾಣಿ ಚಿತ್ರ/ ಎಸ್‌.ಕೆ.ದಿನೇಶ್‌    

ಸುಡುಸುಡು ಬಿಸಿಲು, ನೆಲದ ಎದೆಗುದ್ದಿ ಸೆಖೆಯನ್ನು ಹೊರಕಕ್ಕುತ್ತಿತ್ತು. ಹಬೆಕೊಳವೆಯಿಂದ ಹೊರಬಿಟ್ಟಂತೆ ಬಿಸಿಬಿಸಿ ಗಾಳಿ ಹರಿದಾಡುತ್ತಿರುವ ಹೊತ್ತಿನಲ್ಲಿಯೇ ನಿರ್ದೇಶಕ ಯೋಗರಾಜ ಭಟ್‌ ಅವರು ತಮ್ಮ ಹೊಸ ಸಿನಿಮಾ ‘ಪಂಚತಂತ್ರ’ದ ತಂಡದೊಂದಿಗೆ ‘ಪ್ರಜಾವಾಣಿ’ ಕಚೇರಿಗೆ ದಾಳಿ ಮಾಡಿದರು.

‘ಪಂಚತಂತ್ರ’ ಆಮೆ–ಮೊಲದ ರೇಸ್‌ ಕಥೆಯ ಆಧುನಿಕ ರೂಪವಂತೆ. ಆ ರೇಸ್‌ನ ಕ್ಯುರೇಟರ್‌ನಂತೆ ಕಾಣಿಸುತ್ತಿದ್ದ ಭಟ್ಟರ ಜತೆಗೆ ‘ಮೊಲ’ ಪಕ್ಷದವರು ಮಾತ್ರ ಇದ್ದರು. ಬಹುಶಃ ‘ಆಮೆ’ಗಳಿಗೆ ವಿಶ್ರಾಂತಿ ನೀಡಿರಬೇಕು. ನಾಳೆ ಚಿತ್ರರಂಗದಲ್ಲಿ ಓಟ ಶುರುಮಾಡಬೇಕಲ್ಲ!

ಈ ವಾರದ ‘ಸುಧಾ’ ವಾರಪತ್ರಿಕೆಯ ಹಾಸ್ಯಸಂಚಿಕೆಯಲ್ಲಿ ಬಂದ ತಮ್ಮದೇ ವ್ಯಂಗ್ಯಚಿತ್ರವನ್ನು ನೋಡಿ ‘ಮನಸಾರೆ’ ನಗುತ್ತಾ ಮಾತಿಗೆ ಕೂತ ಅವರು ಮೊದಲು ‘ನಂಗೆ ರಾಜಕೀಯಕ್ಕೆ ಆಗಿಬರೂದಿಲ್ಲ. ನಂಗೆ ಯಾವ ಪಕ್ಷ ಗಿಕ್ಷದ ಬಗ್ಗೆಯೂ ಆಸಕ್ತಿ ಇಲ್ಲ. ಎಲ್ರನ್ನೂ ಒಟ್ಟೊಟ್ಟಿಗೇ ಕಾಲೆಳೆಯೂದು ಅಂದ್ರೆ ಸಿಕ್ಕಾಪಟ್ಟೆ ಖುಷಿ’ ಎಂಬ ಸ್ಪಷ್ಟೀಕರಣ ಕೊಟ್ಟುಕೊಂಡೇ ಮುಂದುವರಿದರು.

ADVERTISEMENT

‘ನೀವು ಪ್ರಪಂಚದ ಯಾವುದೇ ಮೂಲೆಗೆ ಹೋಗಿ ಸುಮಾರು ಮೂವತ್ತು ವರ್ಷ ಗ್ಯಾಪ್‌ ಇರುವ ಎರಡು ಪೀಳಿಗೆಯವರ ಮಧ್ಯೆ ಅಸಾಧಾರಣ ತಿಕ್ಕಾಟ ಇರ್ತದೆ. ಅವರು ಹೇಳಿದ್ದು ಇವರಿಗಾಗುವುದಿಲ್ಲ; ಇವರು ಹೇಳಿದ್ದು ಅವರಿಗೆ ಆಗುವುದಿಲ್ಲ. ಒಬ್ಬರನ್ನೊಬ್ಬರು ಹಳಿಯುತ್ತಲೇ ಇರ್ತಾರೆ. ಈ ಎರಡು ಪೀಳಿಗೆಯ ನಡುವಿನ ತಿಕ್ಕಾಟದ ಕಥೆಯೇ ಪಂಚತಂತ್ರ’ ಎಂದು ಕಥೆಯ ಎಳೆಯನ್ನು ಇಷ್ಟಿಷ್ಟೇ ಬಿಚ್ಚಿಟ್ಟ ಅವರು ಸಿನಿಮಾದಲ್ಲಿನ ರೇಸ್‌ ಭಾಗದ ಕಡೆಗೆ ಮಾತು ಹೊರಳಿಸಿದರು.

‘ಕ್ರೀಡೆಯನ್ನು ಆಧರಿಸಿದ ಸಿನಿಮಾಗಳು ಯಾವತ್ತೂ ಸೋಲುವುದಿಲ್ಲ’ ಎಂಬ ಅಚಲ ವಿಶ್ವಾಸ ಅವರಿಗಿದೆ. ಹಾಗಾಗಿಯೇ ‘ಪಂಚತಂತ್ರ’ವನ್ನೂ ಜನರು ಎತ್ತಿ ಮುದ್ದಾಡುತ್ತಾರೆ ಎಂಬ ನಂಬಿಕೆ.

‘ಸಿನಿಮಾದ ಕೊನೆಯ 20 ನಿಮಿಷಗಳಲ್ಲಿ ರೇಸ್‌ ಇದೆ. ಇಂದು ನಾವು ಬದುಕಿನಲ್ಲಿಯೂ ನೂರಾರು ಬಗೆಯ ರೇಸ್‌ಗಳಲ್ಲಿ ಓಡುತ್ತಿದ್ದೇವೆ. ಎಲ್ಲರಿಗೂ ಮೊದಲು ಮುಟ್ಟುವ ದಾವಂತ. ಈ ದಾವಂತಕ್ಕೆ ವಿರುದ್ಧವಾದ ಒಂದು ನಿಧಾನಗತಿಯೂ ಇರುತ್ತದೆ. ಪಂಚತಂತ್ರದಲ್ಲಿ ಈ ಎರಡೂ ಇದೆ. ಈ ಎರಡರಿಂದ ಹೊರಹೊಮ್ಮಿದ ಒಂದು ಜೀವನದರ್ಶನ ಇದೆ. ಹಾಗಾಗಿ ಕ್ಲೈಮ್ಯಾಕ್ಸ್‌ನಲ್ಲಿ ಎಲ್ಲರಿಗೂ ಕಣ್ತುಂಬಿ ಬರುತ್ತದೆ. ಅದೇ ಈ ಸಿನಿಮಾದ ಸಾರ್ಥಕತೆ’ ಎನ್ನುತ್ತಾರೆ ಅವರು.

ಹೊಸ ಪೀಳಿಗೆಯ ಮನಸೊಳಗೆ ಪತ್ತೆದಾರಿ ಕೆಲಸ ಮಾಡುವ ವಿದ್ಯೆ ನಿಮಗೆ ಸಿದ್ದಿಸಿದ್ದೆಲ್ಲಿ? ಎಂಬ ಪ್ರಶ್ನೆಗೆ ತಮ್ಮ ಹರೆಯವನ್ನೇ ಮರುಕಳಿಸಿಕೊಂಡಂತೆ ನಕ್ಕುಬಿಟ್ಟ ಭಟ್ಟರು ‘ನಂಗೆ ಕಾಲೇಜುಗಳ ಸಹವಾಸ ಜಾಸ್ತಿ. ಬೆಳಬೆಳಿಗ್ಗೆ ಎದ್ದು ಕಾಲೇಜುಗಳಿಗೆ ಹೊರಟುಬಿಡುತ್ತೇನೆ. ಹೊಸ ಪೀಳಿಗೆ ಮೊಬೈಲ್‌ ಇದ್ದ ಹಾಗೆ. ಪಟಪಟನೇ ಅಪ್‌ಡೇಟ್‌ ಆಗಿರುತ್ತವೆ. ಅವರ ಜತೆ ದಿನವಿಡೀ ಮಾತನಾಡುತ್ತಲೇ ಇರಬಲ್ಲೆ ಅಥವಾ ಮಾತೇ ಇಲ್ಲದೆಯೂ ಇರಬಲ್ಲೆ. ಅದೇನೋ ಗೊತ್ತಿಲ್ಲ, ಹೊಸ ಹುಡುಗರ ಸಾವಾಸದಿಂದ ತಲೆಗೆ ಪೆಟ್ಟುಬಿದ್ದು ಇಪ್ಪತ್ತರ ಆಸುಪಾಸಿನಲ್ಲಿಯೇ ಸ್ಟ್ರಕ್‌ ಆಗಿಬಿಟ್ಟಿದ್ದೇನೆ. ಈ ಜಾಗವೇ ಕಂಪರ್ಟ್‌ ಆಗಿಯೂ ಇದೆ’ ಎಂದು ಪಕ್ಕ ನಿಂತಿದ್ದ ಎಳೆಯರಾದ ಸೋನಲ್, ಅಕ್ಷರಾ ಮತ್ತು ವಿಹಾನ್‌ ಕಡೆಗೆ ದೃಷ್ಟಿ ಹಾಯಿಸಿದರು. ಅವರ ಮುಖದಲ್ಲಿ ಮೂಡಿದ ನಸುನಗು ಭಟ್ಟರ ನಂಬಿಕೆಯನ್ನು ಪುಷ್ಟೀಕರಿಸುವಂತಿತ್ತು.


ನಾಳೆ ಓಟ ಶುರು!
‘ನೀವು ಪ್ರಪಂಚದ ಯಾವುದೇ ಮೂಲೆಗೆ ಹೋಗಿ ಸುಮಾರು ಮೂವತ್ತು ವರ್ಷ ಗ್ಯಾಪ್‌ ಇರುವ ಎರಡು ಪೀಳಿಗೆಯವರ ಮಧ್ಯೆ ಅಸಾಧಾರಣ ತಿಕ್ಕಾಟ ಇರ್ತದೆ. ಅವರು ಹೇಳಿದ್ದು ಇವರಿಗಾಗುವುದಿಲ್ಲ; ಇವರು ಹೇಳಿದ್ದು ಅವರಿಗೆ ಆಗುವುದಿಲ್ಲ. ಒಬ್ಬರನ್ನೊಬ್ಬರು ಹಳಿಯುತ್ತಲೇ ಇರ್ತಾರೆ. ಈ ಎರಡು ಪೀಳಿಗೆಯ ನಡುವಿನ ತಿಕ್ಕಾಟದ ಕಥೆಯೇ ಪಂಚತಂತ್ರ’.
–ಯೋಗರಾಜ್ ಭಟ್‌,ನಿರ್ದೇಶಕ ‌

***
ಇದುವರೆಗೆ ಭಟ್ಟರು ಎಂದರೆ ಪ್ರೇಮ, ವಿರಹ, ಸಕಲೇಶಪುರ ಅಂತೆಲ್ಲ ಒಂದು ಇಮೇಜ್‌ ಇತ್ತು. ಅವೆಲ್ಲವೂ ಪಂಚತಂತ್ರ ಸಿನಿಮಾದಲ್ಲಿ ಬ್ರೇಕ್‌ ಆಗಿದೆ. ಒಬ್ಬ ಕಥೆಗಾರನಾಗಿ ನನಗೂ ತುಂಬ ಇಷ್ಟವಾಗಿರುವ ಮತ್ತು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಇದು.
–ಮಾಸ್ತಿ, ಪಂಚತಂತ್ರ ಕಥೆಗಾರ

***
ಈ ಮೊದಲೂ ಎರಡು ಮೂರು ಕನ್ನಡ ಸಿನಿಮಾ ಮಾಡಿದ್ದೆ. ಆದರೆ ನನ್ನನ್ನುಕನ್ನಡದ ಜನರು ಗುರ್ತಿಸಲು ಶುರುಮಾಡಿದ್ದು ಈ ಸಿನಿಮಾದ ಶೃಂಗಾರದ ಹೊಂಗೆಮರ ಹಾಡಿನ ನಂತರ. ಸಾಹಿತ್ಯ ಎಂಬುದು ನನ್ನ ಪಾತ್ರದ ಹೆಸರು. ತುಂಬ ಚೂಟಿಯಾದ ತುಂಟ ಹುಡುಗಿಯಾಗಿ ಕಾಣಿಸಿಕೊಂಡಿದ್ದೀನಿ. ಅಷ್ಟೇ ಭಾವುಕ ಆಯಾಮವೂ ಪಾತ್ರಕ್ಕಿದೆ. ರೇಸ್‌ ಅನ್ನು ಆಧರಿಸಿದ ಮೊದಲ ಕನ್ನಡ ಸಿನಿಮಾ ಇದು. ಈ ಸಿನಿಮಾ ಭಾಗವಾಗಿರುವುದಕ್ಕೆ ತುಂಬ ಖುಷಿಯಿದೆ.
– ಸೋನಲ್ ಮೊಂತೆರೊ, ನಾಯಕಿ

***
ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಕಾರ್ತಿಕ್‌. ‘‘ಆರಂಭದಲ್ಲಿ ನೀನು ಹಿರಿಯರಿಗೆಲ್ಲ ಸಖತ್‌ ಇರಿಟೇಟ್‌ ಮಾಡಬೇಕು. ನಿನ್ನ ನೋಡಿದ ತಕ್ಷಣ ‘ನಾನಂತೂ ನನ್ನ ಮಗಳನ್ನು ಇಂಥವನಿಗೆ ಕೊಡಲ್ಲ’ ಅಂದುಕೊಳ್ಳಬೇಕು. ನಂತರ ನಿನ್ನ ಪಾತ್ರಕ್ಕೊಂದು ಗಾಂಭೀರ್ಯ ಸಿಗುತ್ತದೆ’’ ಎಂದು ಭಟ್ಟರು ಹೇಳಿದ್ದರು. ಅವರ ಮಾರ್ಗದರ್ಶನದಂತೆಯೇ ನಟಿಸಿದ್ದೇನೆ. ಈ ಸಿನಿಮಾದಲ್ಲಿ ಮನರಂಜನೆ ಇದೆ. ಒಂದು ಕ್ಷಣವೂ ಬೋರಾಗದೇ ನೋಡಿಸಿಕೊಂಡು ಹೋಗುತ್ತದೆ. ಒಳ್ಳೆಯ ಹಾಡುಗಳಿವೆ. ಕೊನೆಯ ಇಪ್ಪತ್ತುನಿಮಿಷದ ರೇಸ್‌ ಅಂತೂ ನೀವು ತೆರೆಯ ಮೇಲೆಯೇ ನೋಡಬೇಕು.
– ವಿಹಾನ್‌, ನಟ

ಮಾಸ್ತಿ ಹಾಗೂ ವಿಹಾನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.