ಫುಲೆ ಚಿತ್ರದ ಪೋಸ್ಟರ್
ಎಕ್ಸ್ ಚಿತ್ರ
ಮುಂಬೈ: 'ವಿವಾದದ ಕಾರಣದಿಂದ ಫುಲೆ ಚಿತ್ರ ಬಿಡುಗಡೆ ವಿಳಂಬವಾಗಿರುವುದು ನಿಜಕ್ಕೂ ಬೇಸರ ತರಿಸಿದೆ. ಈ ಮೊದಲೇ ಘೋಷಣೆಯಾದಂತೆ ಏ. 11ಕ್ಕೆ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕೆಲವೊಂದು ಸಂಗತಿಗಳು ನಮ್ಮ ಕೈಯಲ್ಲಿರುವುದಿಲ್ಲ’ ಎಂದು ನಟ ಪ್ರತೀಕ್ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಮಾಜ ಸುಧಾರಕ ಮಹಾತ್ಮ ಜ್ಯೋತಿಭಾ ಫುಲೆ ಅವರ 197ನೇ ಜನ್ಮವರ್ಷಾಚರಣೆ ನಡೆಯುತ್ತಿರುವ ಸಂದರ್ಭದಲ್ಲೇ ಅವರ ಜೀನವಾಧಾರಿತ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಈ ಚಿತ್ರಕ್ಕೆ ಕೇಂದ್ರ ಸೆನ್ಸಾರ್ ಮಂಡಳಿಯು ‘ಯು’ ಪ್ರಮಾಣಪತ್ರವನ್ನು ಏ. 7ರಂದು ನೀಡಿತ್ತು. ನಂತರದಲ್ಲಿ ಒಂದಷ್ಟು ಪದಗಳಿಗೆ ಕತ್ತರಿ ಹಾಕುವಂತೆ ಸೂಚಿಸಿತ್ತು.
ಅನಂತ್ ಮಹಾದೇವನ್ ನಿರ್ದೇಶನದ ಈ ಚಿತ್ರದಲ್ಲಿನ ಕೆಲ ದೃಶ್ಯಗಳಲ್ಲಿ ತಮ್ಮ ಸಮುದಾಯದ ಜನರನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಬ್ರಾಹ್ಮಣ ಸಮುದಾಯದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಜತೆಗೆ ‘ಮಾಂಗ್, ಮಹರ್, ಪೇಶ್ವೆ, ಮೂರು ಸಾವಿರ ವರ್ಷಗಳ ಗುಲಾಮಿ ಎಂಬ ವಾಕ್ಯವನ್ನು ಹಲವು ವರ್ಷಗಳ ಹಿಂದಿನ ಗುಲಾಮಿ ಎಂದು ಬದಲಿಸಲು ಮಂಡಳಿ ಸೂಚಿಸಿತ್ತು. ಈ ಬದಲಾವಣೆಗಳೊಂದಿಗೆ ಏ. 25ರಂದು ಚಿತ್ರ ತೆರೆಕಾಣಲಿದೆ ಎಂದು ನಿರ್ಮಾಣ ಸಂಸ್ಥೆ ಹೇಳಿದೆ.
ಜ್ಯೋತಿರಾವ್ ಗೋವಿಂದರಾವ್ ಫುಲೆ ಪಾತ್ರದಲ್ಲಿ ಪ್ರತೀಕ್ ಗಾಂಧಿ ನಟಿಸಿದ್ದಾರೆ. ‘ಫುಲೆ ಅವರ ಜನ್ಮದಿನದಂದೇ (ಏ. 11) ಚಿತ್ರ ಬಿಡುಗಡೆಯಾಗಿದ್ದರೆ ಹೆಚ್ಚು ಅರ್ಥಗರ್ಭಿತವಾಗಿರುತ್ತಿತ್ತು. ಚಿತ್ರಕ್ಕೆ ತಡೆ ನೀಡಿರುವ ವಿಷಯ ತಿಳಿದು ನಿರ್ಮಾಪಕರಿಗೆ ಕರೆ ಮಾಡಿ ಕಾರಣ ಕೇಳಿದೆ. ಅವರಿಂದ ಮಾಹಿತಿ ಲಭ್ಯವಾಯಿತು. ಇಂಥ ಕೆಲ ಕಾರಣಗಳ ಮೇಲೆ ನಮಗೆ ನಿಯಂತ್ರಣವೇ ಇರುವುದಿಲ್ಲ. ಆದರೆ ಏನೆಲ್ಲಾ ಆಗಿದೆಯೋ ಅವೆಲ್ಲವೂ ಒಳ್ಳೆಯದಕ್ಕೇ ಎಂದುಕೊಳ್ಳೋಣ’ ಎಂದಿದ್ದಾರೆ.
‘ಸಿನಿಮಾದಲ್ಲಿ ಶೀರ್ಷಿಕೆ ಸಹಿತ ಕೆಲವೊಂದು ಬದಲಾವಣೆಗೆ ಆಗ್ರಹಿಸಲಾಯಿತು. ಚಿತ್ರವು ತಮ್ಮ ಹಾಗೂ ತಾವು ನಂಬಿರುವ ಸಿದ್ಧಾಂತದ ವಿರುದ್ಧವಾದದ್ದು ಎಂದು ಕೆಲ ವರ್ಗದ ಜನರು ಭಾವಿಸಿದರು. ಸದ್ಯಕ್ಕೆ ಚಿತ್ರ ಬಿಡುಗಡೆಗೆ ಏ. 25ರ ದಿನಾಂಕವನ್ನು ನಿಗದಿಪಡಿಸಲಾಗಿದೆ. ಟ್ರೈಲರ್ ನೋಡಿ ಚಿತ್ರವನ್ನು ಊಹಿಸಬೇಡಿ. ನೀವು ನೋಡಿದ ಸನ್ನಿವೇಶಗಳು ಈಗ ಚಿತ್ರದಲ್ಲಿ ಇಲ್ಲ‘ ಎಂದು ಬ್ರಾಹ್ಮಣ ಸಮುದಾಯವನ್ನು ಪ್ರತೀಕ್ ಕೋರಿದ್ದಾರೆ.
‘ಸ್ಕ್ಯಾಮ್ 1992: ದಿ ಹರ್ಷದ್ ಮೆಹ್ತಾ ಸ್ಟೋರಿ’, ‘ದೋ ಔರ್ ದೋ ಪ್ಯಾರ್’ ಮತ್ತು ‘ಮಡ್‌ಗಾಂವ್ ಎಕ್ಸ್‌ಪ್ರೆಸ್’ ಚಿತ್ರ ಹಾಗೂ ವೆಬ್ ಸರಣಿಗಳ ಮೂಲಕ ಪ್ರತೀಕ್ ಗಾಂಧಿ ಚಿರಪರಿಚಿತರು. ಸಾವಿತ್ರಿಬಾಯಿ ಫುಲೆ ಪಾತ್ರದಲ್ಲಿ ಪತ್ರಲೇಖಾ ಅಭಿನಯಿಸಿದ್ದಾರೆ. ಡ್ಯಾನ್ಸಿಂಗ್ ಶಿವ ಮತ್ತು ಕಿಂಗ್ಸ್‌ಮೆನ್ ಸಂಸ್ಥೆಗಳು ನಿರ್ಮಾಣ ಮಾಡಿವೆ. ಝೀ ಸ್ಟುಡಿಯೊಸ್ ಮೂಲಕ ಚಿತ್ರ ಬಿಡುಗಡೆಯಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.