ADVERTISEMENT

ನಟ ಪುನೀತ್‌ ರಾಜ್‌ಕುಮಾರ್‌ ಪುಣ್ಯಸ್ಮರಣೆ; ಸಮಾಧಿಗೆ ಪೂಜೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2023, 20:56 IST
Last Updated 29 ಅಕ್ಟೋಬರ್ 2023, 20:56 IST
ಕಂಠೀರವ ಸ್ಟುಡಿಯೊದಲ್ಲಿರುವ ಪುನೀತ್‌ ರಾಜ್‌ಕುಮಾರ್‌ ಅವರ ಸಮಾಧಿ ದರ್ಶನಕ್ಕೆ ಆಗಮಿಸಿದ್ದ ಜನಸಾಗರ ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌
ಕಂಠೀರವ ಸ್ಟುಡಿಯೊದಲ್ಲಿರುವ ಪುನೀತ್‌ ರಾಜ್‌ಕುಮಾರ್‌ ಅವರ ಸಮಾಧಿ ದರ್ಶನಕ್ಕೆ ಆಗಮಿಸಿದ್ದ ಜನಸಾಗರ ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಅವರು ಅಗಲಿ ಎರಡು ವರ್ಷ ಉರುಳಿದೆ. ಸೋಮವಾರ (ಅ.29) ಪುನೀತ್‌ ಅವರ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಮಗಳು ವಂದಿತಾ, ನಟ ಶಿವರಾಜ್‌ಕುಮಾರ್‌ ದಂಪತಿ, ನಟ ರಾಘವೇಂದ್ರ ರಾಜ್‌ಕುಮಾರ್‌ ದಂಪತಿ ಸೇರಿದಂತೆ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೊದಲ್ಲಿರುವ ಪುನೀತ್‌ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. 

2021ರ ಅ.29ರಂದು ಪುನೀತ್‌ ಅವರ ಅಕಾಲಿಕ ನಿಧನ ಅಭಿಮಾನಿಗಳನ್ನು ಒಳಗೊಂಡಂತೆ ಇಡೀ ಕನ್ನಡ ಚಿತ್ರರಂಗವನ್ನು ಆಘಾತಕ್ಕೆ ದೂಡಿತ್ತು. ಇದಾಗಿ ಎರಡು ವರ್ಷ ಕಳೆದಿದ್ದು, ಅವರ ಸಮಾಧಿಗೆ ಭೇಟಿ ನೀಡುವ ಅಭಿಮಾನಿಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಪ್ರತಿನಿತ್ಯ ಐದಾರು ಸಾವಿರ ಜನರು ಸಮಾಧಿಗೆ ಭೇಟಿ ನೀಡಿದರೆ, ಸೋಮವಾರ ಈ ಸಂಖ್ಯೆ 50 ಸಾವಿರ ದಾಟಿತ್ತು. ಜನರು ತಮ್ಮ ನೆಚ್ಚಿನ ನಟನಿಗೆ ಪುಷ್ಪನಮನ ಸಲ್ಲಿಸಿದರು. ರಾಜ್‌ಕುಮಾರ್ ಅವರ ಸಮಾಧಿಯಂತೆಯೇ ಬಿಳಿ ಗ್ರಾನೈಟ್‌ನಿಂದ ಪುನೀತ್‌ ರಾಜ್‌ಕುಮಾರ್‌ ಅವರ ಸಮಾಧಿಯನ್ನು ಹೊಸದಾಗಿ ನಿರ್ಮಿಸಲಾಗಿದ್ದು, ಇದರ ಮುಂದೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹಾಗೂ ವಂದಿತಾ ಅವರು ಪುನೀತ್‌ ಅವರ ನೆಚ್ಚಿನ ತಿಂಡಿ, ಸಿಹಿ ತಿನಿಸುಗಳನ್ನು ಎಡೆ ಇಟ್ಟರು. 

ಅಶ್ವಿನಿ ಅವರು ಸಮಾಧಿ ಬಳಿ ಆಗಮಿಸುತ್ತಿದ್ದಂತೆಯೇ ಅಭಿಮಾನಿಗಳು ‘ಅಪ್ಪು..ಅಪ್ಪು..’ ಎಂದು ಜೈಕಾರ ಕೂಗಿ ತಮ್ಮ ಅಭಿಮಾನ ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ಅಭಿಮಾನಿಗಳಿಗೆ ಅಶ್ವಿನಿ ಅವರು ಅನ್ನದಾಸೋಹ ಮಾಡಿದರು.

ADVERTISEMENT

‘ಅಪ್ಪಾಜಿ ಮಗನಾಗಿ ಎಷ್ಟು ಸಾರ್ಥಕ ಜೀವನ ನಡೆಸಿದ ಎಂದರೆ, ಅಪ್ಪು ಅಪ್ಪಾಜಿಗಿಂತ ದುಪ್ಪಟ್ಟು ಹೆಸರು ಮಾಡಿದ ಎಂದರೆ ತಪ್ಪಾಗಲಾರದು. ಅಪ್ಪು ಮೇಲೆ ಜನರಿಟ್ಟಿರುವ ಪ್ರೀತಿ ನೋಡಿದರೆ ಹೆಮ್ಮೆ ಎನಿಸುತ್ತದೆ’ ಎನ್ನುತ್ತಾ ಶಿವರಾಜ್‌ಕುಮಾರ್‌ ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.