ಬೆಂಗಳೂರಿನಲ್ಲಿ ಜೂನ್27ರಂದು ನಡೆದ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ಮೂರನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಅತ್ಯುತ್ತಮ ಗೀತ ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ್
ಅತ್ಯುತ್ತಮ ಗೀತಸಾಹಿತ್ಯ:ವಿ. ನಾಗೇಂದ್ರ ಪ್ರಸಾದ್,
ಚಿತ್ರ: ಕೃಷ್ಣಂ ಪ್ರಣಯ ಸಖಿ– ದ್ವಾಪರ
ಹೊಸ ಧಾಟಿಯ ಹಾಡುಗಳಿಂದ ಜನಪ್ರಿಯತೆ ಗಳಿಸಿರುವ ಕನ್ನಡ ಸಿನಿಮಾರಂಗದ ಗೀತರಚನೆಕಾರ ವಿ. ನಾಗೇಂದ್ರ ಪ್ರಸಾದ್ ಅವರಿಗೆ ಈ ಬಾರಿ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ‘ದ್ವಾಪರ ದಾಟುತ’ ಹಾಡಿಗೆ ‘ಅತ್ಯುತ್ತಮ ಗೀತಸಾಹಿತ್ಯ’ ಪ್ರಶಸ್ತಿ ಸಂದಿದೆ.
ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಹಾಗೂ ಟಿಪಿಎಂಎಲ್ ನಿರ್ದೇಶಕಿ ಸೌಭಾಗ್ಯಲಕ್ಷ್ಮಿ, ನಟಿ ಮಾಲಾಶ್ರೀ ಅವರು ಪ್ರಶಸ್ತಿ ಪ್ರದಾನ ಮಾಡಿದರು.
‘ಪ್ರಶಸ್ತಿ ಎಂಬುದು ಕಲಾವಿದರಿಗೆ ಎಷ್ಟು ಮುಖ್ಯವೋ, ಪ್ರಶಸ್ತಿ ನೀಡುತ್ತಿರುವ ಮಾಧ್ಯಮ ಕೂಡ ಅಷ್ಟೇ ಮುಖ್ಯ. ಪ್ರಜಾವಾಣಿ ಸಿನಿಮಾ ಕ್ಷೇತ್ರದಲ್ಲಿನ ಕಲಾವಿದರನ್ನು ಉತ್ತೇಜಿಸಿ ಸಿನಿಮಾ ಗೆಲ್ಲೋಕೆ ಬೆಂಬಲ ನೀಡುತ್ತಿದೆ’ ಎಂದರು ನಟಿ ಮಾಲಾಶ್ರೀ.
ಪ್ರಶಸ್ತಿ ಪಡೆದ ವಿ. ನಾಗೇಂದ್ರ ಪ್ರಸಾದ್ ಅವರು ಮಾತನಾಡಿ, ‘ಪ್ರಜಾವಾಣಿ ಸಿನಿ ಸಮ್ಮಾನದ ಎರಡನೇ ಪ್ರಶಸ್ತಿ ಇದು. ಈ ಹಾಡಿಗೆ ದೊರೆಯುತ್ತಿರುವ ಐದನೇ ಪ್ರಶಸ್ತಿ. ‘ದ್ವಾಪರ...’ ಹಾಡಿನ ಸಾಹಿತ್ಯದ ಬಗ್ಗೆ ಜನ ಮಾತನಾಡಿದರು, ಚರ್ಚೆ ಮಾಡಿದರು, ರೀಲ್ಸ್ ಮಾಡಿದರು. ಅದೇ ಈ ಹಾಡಿನ ಬಹಳ ದೊಡ್ಡ ಯಶಸ್ಸು ಹಾಗೂ ಶಕ್ತಿ. ಈ ಹಾಡನ್ನು ದೊಡ್ಡ ಹಿಟ್ ಮಾಡಿದವರು ಕನ್ನಡಿಗರು. ಈ ಹಾಡಿನ ಮಾಲೀಕರು–ನಿರ್ದೇಶಕ, ಹಾಡುಗಾರ, ಸಂಗೀತ ನಿರ್ದೇಶಕ’ ಎಂದರು.
ಈ ಪ್ರಶಸ್ತಿಯನ್ನು ‘ಆಪರೇಷನ್ ಸಿಂದೂರ’ನ ಸೈನಿಕರಿಗೆ ಅರ್ಪಿಸಿ ಮಾತನಾಡಿ, ‘ನನ್ನ ನೆಚ್ಚಿನ ಕವಿ ಬಿ.ಆರ್. ಲಕ್ಷ್ಮಣ್‌ರಾವ್ ಅವರ ಸಮ್ಮುಖದಲ್ಲಿ ಈ ಪ್ರಶಸ್ತಿ ಪಡೆಯುತ್ತಿರುವುದು ಸಂತೋಷವಾಗುತ್ತಿದೆ. ಪ್ರಜಾವಾಣಿ ನಮಗೆ ಮೇಷ್ಟ್ರ ಹಾಗೆ. ಬಾಲ್ಯದ ದಿನಗಳಲ್ಲಿ ಕನ್ನಡವನ್ನು ಕಲಿಸಿದ ಪತ್ರಿಕೆ. ಪದಬಂಧವನ್ನು ಬಿಡಿಸುತ್ತಿದ್ದೆ. ಪ್ರಜಾವಾಣಿ ಕನ್ನಡವಾಗಿ ನಮ್ಮ ಬದುಕಿನ ಜೊತೆ ಸೇರಿದೆ’ ಎಂದು ಪತ್ರಿಕೆಯೊಂದಿಗಿನ ತಮ್ಮ ಅವಿನಾಭಾವ ಸಂಬಂಧದ ಕುರಿತು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.