ಬೆಂಗಳೂರು: ನಟ ಎಂ.ಪ್ರಥಮ್ ಅವರಿಗೆ ಬೆದರಿಕೆ ಹಾಕಿದ್ದ ಆರೋಪದಡಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೇಕರಿ ರಘು ಹಾಗೂ ಯಶಸ್ವಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ನಟ ದರ್ಶನ್ ಅವರ ಅಭಿಮಾನಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪ್ರಥಮ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‌ಪಿಗೆ ಮಂಗಳವಾರ ಲಿಖಿತ ದೂರು ನೀಡಿದ್ದರು. ಆ ದೂರು ಆಧರಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
‘ಸಿನಿಮಾ ತಂಡವೊಂದರ ಆಹ್ವಾನದ ಮೇರೆಗೆ ಜುಲೈ 22ರಂದು ದೊಡ್ಡಬಳ್ಳಾಪುರದ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿದ್ದೆ. ಪೂಜೆ ಮುಗಿಸಿಕೊಂಡು ವಾಪಸ್ ಬರುವಾಗ ಯಶಸ್ವಿ, ಬೇಕರಿ ರಘು ಮತ್ತಿತರರು ನನ್ನ ಕಾರನ್ನು ಸುತ್ತುವರಿದು, ಅಜ್ಞಾತ ಸ್ಥಳಕ್ಕೆ ಕರೆದೊಯ್ದರು. ನಮ್ಮ ಬಾಸ್ ಬಗ್ಗೆ ಮಾತನಾಡುತ್ತೀಯಾ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಡ್ರ್ಯಾಗರ್ ಹಾಗೂ ಚಾಕು ತೋರಿಸಿ ಚುಚ್ಚಲು ಯತ್ನಿಸಿದ್ದರು. ಬಹಳ ಉಪಾಯದಿಂದ ನಾನು ಪ್ರಾಣ ಉಳಿಸಿಕೊಂಡು ಬಂದೆ’ ಎಂದು ಪ್ರಥಮ್ ನೀಡಿರುವ ದೂರು ಆಧರಿಸಿ ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
‘ದರ್ಶನ್ ಅವರ ಅಧಿಕೃತ ಫ್ಯಾನ್ ಪೇಜ್‌ಗಳಾದ ಡಿ ಡೈನಾಸ್ಟಿ, ಡಿ ಕಿಂಗ್‌ಡಮ್, ಡಿ ಯೂನಿವರ್ಸ್ ಹಾಗೂ ಡೆವಿಲ್ ಕಿಂಗ್‌ಡಮ್ ಜತೆಗೆ 500ಕ್ಕೂ ಹೆಚ್ಚು ಪೇಜ್‌ಗಳಿಂದ ತೇಜೋವಧೆ ಮಾಡಲಾಗುತ್ತಿದೆ’ ಎಂದು ದೂರಿನ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.
ಎಸ್‌ಪಿ ಕಚೇರಿ ಎದುರು ಪ್ರತಿಭಟನೆ:
ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರಥಮ್ ಅವರು ಗ್ರಾಮಾಂತರ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಾಧ್ಯಮಗಳ ಜತೆಗೆ ಪ್ರಥಮ್ ಮಾತನಾಡುತ್ತಿದ್ದ ವೇಳೆ ಅದರ ವಿಡಿಯೊ ಚಿತ್ರೀಕರಣಕ್ಕೆ ಮುಂದಾದ ಪೊಲೀಸರನ್ನು ಪ್ರಥಮ್ ತರಾಟೆಗೆ ತೆಗೆದುಕೊಂಡರು.
‘ಕೊಲೆ ಮಾಡಲು ಬಂದ ಆರೋಪಿಗಳನ್ನು ಮೊದಲು ಬಂಧಿಸಿ. ನಾನು ಡಿಸಿಪಿ ಬಳಿ ಮಾತನಾಡುತ್ತೇನೆ’ ಎಂದು ಆಕ್ರೋಶ ಹೊರಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.