ADVERTISEMENT

ಪೃಥ್ವಿ ನಿರ್ದೇಶನದಲ್ಲಿ ಬಾಲಿವುಡ್‌ ಚಿತ್ರ?

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 19:45 IST
Last Updated 23 ಜನವರಿ 2019, 19:45 IST
ಪೃಥ್ವಿರಾಜ್‌ ಸುಕುಮಾರನ್‌
ಪೃಥ್ವಿರಾಜ್‌ ಸುಕುಮಾರನ್‌   

ಪೃಥ್ವಿರಾಜ್‌ ಸುಕುಮಾರನ್‌, ಮಲಯಾಳಂ ಚಿತ್ರರಂಗದಲ್ಲಿ ನಿರ್ಮಾಣ, ನಿರ್ದೇಶನ, ನಟನೆ, ಹಿನ್ನೆಲೆ ಗಾಯನದಲ್ಲಿ ಸೈ ಎನಿಸಿಕೊಂಡ ನಟ. ನಟನೆಯ ಜೊತೆ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದಲ್ಲಿ ತೊಡಗಿಸಿಕೊಳ್ಳುತ್ತಲೇ ಇರುವ ಪೃಥ್ವಿ ಈಗ ಕೊಟ್ಟಿರುವ ಸುದ್ದಿಯಲ್ಲಿ ಸ್ವಲ್ಪ ಥ್ರಿಲ್‌ ಇದೆ.

ಪೃಥ್ವಿ, ಬಾಲಿವುಡ್‌ನ ಚಿತ್ರವೊಂದಕ್ಕಾಗಿ ನಿರ್ದೇಶಕರ ಟೋಪಿ ಧರಿಸಲಿದ್ದಾರಂತೆ. ಅಂತಹುದೊಂದು ಯೋಚನೆ ಹೊಸದೇನಲ್ಲ. ಆದರೆ ಈ ವರ್ಷ ಅದು ಕಾರ್ಯರೂಪಕ್ಕೆ ಬರಲಿದೆ ಎಂದು ಸ್ವತಃ ಪೃಥ್ವಿಯೇ ಹೇಳಿದ್ದಾರೆ.

ಹಿಂದಿ ಚಿತ್ರರಂಗಕ್ಕೆ ಪೃಥ್ವಿ ಹೊಸಬರೇನಲ್ಲ. ‘ಅಯ್ಯ’, ‘ಔರಂಗಜೇಬ್‌’ ಮತ್ತು ‘ನಾಮ್‌ ಶಬಾನಾ’ ಎಂಬ ಸಿನಿಮಾಗಳಲ್ಲಿ ನಟಿಸಿ ಈಗಾಗಲೇ ಬಿ ಟೌನ್‌ನ ಗಮನ ಸೆಳೆದಿದ್ದಾರೆ. ಆದರೆ ಈಗಿನ ಹೊಸ ಪರಿಕ್ರಮ ಮಾತ್ರ ಅವರ ಅದೃಷ್ಟ ಪರೀಕ್ಷೆ ಮಾಡಲಿದೆ ಎಂಬುದು ಸುಳ್ಳಲ್ಲ.

ADVERTISEMENT

‘ಹಿಂದಿಯಲ್ಲಿ ಚಿತ್ರ ನಿರ್ದೇಶಿಸುವ ಚಿಂತನೆ ಮಾಡಿದ್ದೇನೆ. ಈಗಾಗಲೇ ಕೆಲವು ಚಿತ್ರಕತೆಗಳನ್ನು ಓದಿಯೂ ಆಗಿದೆ. ಆದರೆ ಹೆಚ್ಚಿನ ಥ್ರಿಲ್‌ ಮತ್ತು ಹೊಸತನವಿರುವ ಕತೆಯನ್ನು ತೆರೆ ಮೇಲೆ ತರುವ ಯೋಚನೆ ನನ್ನದು. ಜೊತೆಗೆ ದಕ್ಷಿಣದ ಚಿತ್ರರಂಗದಲ್ಲಿ ನನ್ನ ತೊಡಗಿಸಿಕೊಳ್ಳುವಿಕೆಗೆ ಧಕ್ಕೆಯಾಗದಂತೆ ಪ್ರಾಜೆಕ್ಟ್‌ ಕೈಗೆತ್ತಿಕೊಳ್ಳಲಿದ್ದೇನೆ’ ಎಂದು ಪೃಥ್ವಿ ತಮ್ಮ ಜಾಣ ನಡೆಯನ್ನು ಬಿಚ್ಚಿಟ್ಟಿದ್ದಾರೆ.

ಮಾಲಿವುಡ್‌ನ ದಿಗ್ಗಜ ನಟ ಮೋಹನ್‌ಲಾಲ್‌ ನಾಯಕನಟರಾಗಿರುವ ‘ಲೂಸಿಫರ್‌’, ಪೃಥ್ವಿ ನಿರ್ದೇಶಿಸಿರುವ ಮಹತ್ವಾಕಾಂಕ್ಷೆಯ ಚಿತ್ರ. ಇಷ್ಟರಲ್ಲೇ ಚಿತ್ರೀಕರಣ ಮುಗಿಸಿ ಮಾರ್ಚ್‌ನಲ್ಲಿ ಈ ಚಿತ್ರವನ್ನು ತೆರೆಗೆ ತರುವ ಲೆಕ್ಕಾಚಾರ ಪೃಥ್ವಿ ಮತ್ತು ನಿರ್ಮಾಪಕರದ್ದು.

ಮಲಯಾಳಂ ಚಿತ್ರರಂಗದ ಮೊದಲಸೈನ್ಸ್‌ ಫಿಕ್ಷನ್‌ ಹಾರರ್‌ ಥ್ರಿಲ್ಲರ್‌ ಎನ್ನಲಾಗಿರುವ ‘ನೈನ್‌’ನಲ್ಲಿ ಪೃಥ್ವಿ ವಿ‌ಜ್ಞಾನಿಯ ಪಾತ್ರ ಮಾಡಿದ್ದಾರೆ. ಪೃಥ್ವಿಯ ಹೆಂಡತಿ ಸುಪ್ರಿಯಾ ಮೆನನ್‌ ನಿರ್ಮಾಣದ ಈ ಚಿತ್ರ ಫೆಬ್ರುವರಿ ಏಳರಂದು ಬಿಡುಗಡೆಯಾಗಲಿದೆ. ಅಲ್ಲದೆ, ಈ ದಂಪತಿಯ ಸ್ವತಂತ್ರ ನಿರ್ಮಾಣ ಸಂಸ್ಥೆ ‘ಪೃಥ್ವಿರಾಜ್‌ ಪ್ರೊಡಕ್ಷನ್ಸ್‌’ನ ಮೊದಲ ಚಿತ್ರ ಇದಾಗಿದ್ದು, ಸೋನಿ ಪಿಕ್ಚರ್ಸ್‌ ಇಂಡಿಯಾ ಕೂಡಾ ಬಂಡವಾಳ ಹೂಡಿದೆ.

ಪೃಥ್ವಿರಾಜ್‌, 2010ರಲ್ಲಿ ಆಗಸ್ಟ್‌ ಸಿನೆಮಾಸ್‌ ಎಂಬ ನಿರ್ಮಾಣ ಸಂಸ್ಥೆಯೊಂದಿಗೆ ಹಲವು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. 2017ರಲ್ಲಿ ಸಂಸ್ಥೆಯೊಂದಿಗಿನ ಒಪ್ಪಂದ ಅಂತ್ಯಗೊಂಡ ಕಾರಣ ಕಳೆದ ವರ್ಷ ‘ಪೃಥ್ವಿರಾಜ್‌ ಪ್ರೊಡಕ್ಷನ್ಸ್‌’ ಆರಂಭಿಸಿದರು.

ಮಾಲಿವುಡ್‌ನಲ್ಲಿ ಯಶಸ್ವಿ ಚಿತ್ರಗಳ ನಾಯಕ ನಟ ಮತ್ತು ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪೃಥ್ವಿ ಬಿ ಟೌನ್‌ನಲ್ಲಿ ನಿರ್ದೇಶಕರಾಗಿ ಯಶಸ್ವಿಯಾಗುತ್ತಾರಾ? ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.