ADVERTISEMENT

ಪ್ರಿಯಾಮಣಿಗೆ ತವರೂರಿನ ಚಿಂತೆ

ಕೆ.ಎಂ.ಸಂತೋಷ್‌ ಕುಮಾರ್‌
Published 16 ಏಪ್ರಿಲ್ 2020, 20:00 IST
Last Updated 16 ಏಪ್ರಿಲ್ 2020, 20:00 IST
ಪ್ರಿಯಾಮಣಿ
ಪ್ರಿಯಾಮಣಿ   

ಬಹುಭಾಷಾ ನಟಿ ಪ್ರಿಯಾಮಣಿ ಯಾನೆ ಪ್ರಿಯಾಮಣಿ ರಾಜ್‌ ಮದುವೆಯ ನಂತರವೂ ತುಂಬಾ ಬ್ಯುಸಿ ಇರುವ ನಟಿ. ಮದುವೆಯಾದರೆ ನಾಯಕಿಯಾಗಿ ಮುಂದುವರಿಯುವ ಅವಕಾಶಗಳೇ ಕ್ಷೀಣಿಸುತ್ತವೆ ಎಂದು ಮದುವೆ ಆಲೋಚನೆಯನ್ನೇ ಮುಂದೂಡುವ ಅಥವಾ ಮದುವೆಯಾಗಿದ್ದರೂ ಗುಟ್ಟಾಗಿಟ್ಟುಕೊಳ್ಳುವ ನಟಿಯರ ನಡುವೆ ಪ್ರಿಯಾಮಣಿ ಭಿನ್ನವಾಗಿ ಕಾಣಿಸುತ್ತಾರೆ. ‘ನನ್ನ ಕೈಯಲ್ಲಿರುವ ಅವಕಾಶಗಳನ್ನು ನೋಡಿದರೆ ಮದುವೆ ಪೂರ್ವ ಮತ್ತು ಮದುವೆ ನಂತರ ಅಂತಹ ವ್ಯತ್ಯಾಸಗಳೇನು ಆಗಿಲ್ಲ’ ಎನ್ನುವುದು ಪ್ರಿಯಾಮಣಿ ಸಮರ್ಥನೆ.

ತಮ್ಮ ಬಹುಕಾಲದ ಗೆಳೆಯ, ಉದ್ಯಮಿ ಮುಸ್ತಾಫ ರಾಜ್‌ ಅವರನ್ನು ಮದುವೆಯಾದ ನಂತರ ಮುಂಬೈನಲ್ಲಿ ನೆಲೆಸಿರುವ ಪ್ರಿಯಾಮಣಿ, ಸದ್ಯ ತೆಲುಗಿನ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿಗೆ ರಿಮೇಕ್‌ ಆಗುತ್ತಿರುವ ತಮಿಳಿನ ಹಿಟ್‌ ಸಿನಿಮಾ ‘ಅಸುರನ್‌’ನಲ್ಲಿ ವೆಂಕಟೇಶ್‌ಗೆ ಪ್ರಿಯಾಮಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಣಾ ದಗ್ಗು ಭಾಟಿಯಾ ನಾಯಕನಾಗಿರುವ ಮತ್ತೊಂದು ಬಹುನಿರೀಕ್ಷಿತ ತೆಲುಗು ಚಿತ್ರದಲ್ಲೂ ಪ್ರಿಯಾಮಣಿ ಅಭಿನಯಿಸುತ್ತಿದ್ದಾರೆ. ಇದಲ್ಲದೆ, ಇನ್ನು ಹಲವು ಹೊಸ ಪ್ರಾಜೆಕ್ಟ್‌ಗಳು ಅವರ ಕೈಯಲ್ಲಿವೆಯಂತೆ.

ಅವರು ಎರಡು ರಿಯಾಲಿಟಿ ಶೋಗಳಗಳನ್ನು ಒಪ್ಪಿಕೊಂಡಿದ್ದು, ತೆಲುಗಿನಲ್ಲಿ ಈ ಟಿವಿಯ ‘ಡಿ’ ಮತ್ತು ಮಲಯಾಳದಲ್ಲಿ ಜೀ ಟಿವಿಯ ‘ಕೇರಳ ಡಾನ್ಸ್‌ ಕೇರಳ’ ರಿಯಾಲಿಟಿ ಶೋಗಳಿಗೆ ಪ್ರಿಯಾಮಣಿ ಜಡ್ಜ್‌ ಆಗಲಿದ್ದಾರೆ. ಈ ಎರಡು ಶೋಗಳ ಚಿತ್ರೀಕರಣ ಏಪ್ರಿಲ್‌ನಲ್ಲಿ ಆರಂಭವಾಗಬೇಕಿತ್ತು, ಆದರೆ, ಕೊರೊನಾದಿಂದ ಚಿತ್ರೀಕರಣ ಮುಂದಕ್ಕೆ ಹೋಗಿದೆ.

ADVERTISEMENT

ಪ್ರಿಯಾಮಣಿ ನಾಯಕಿಯಾಗಿ ನಟಿಸಿರುವ ಕನ್ನಡದ‘ಡಾಕ್ಟರ್‌ 56’ ಚಿತ್ರವು ಪೂರ್ಣಗೊಂಡಿದೆ. ಇದು ತಮಿಳಿನಲ್ಲೂ ತೆರೆಕಾಣಲಿದೆ. ಡಬ್ಬಿಂಗ್‌ ಕೆಲಸವೂ ಮುಗಿದಿದ್ದು, ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಕುಟುಂಬದತ್ತ ಮಾತು ಹೊರಳಿದಾಗ, ‘ಬೆಂಗಳೂರು ನನ್ನ ತವರು ಮನೆ. ನನಗೆ ಪ್ರಿಯವಾದ ಬೆಂಗಳೂರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಅಮ್ಮ, ಅಮ್ಮ ಇಬ್ಬರೂ ಬೆಂಗಳೂರಿನಲ್ಲೇ ಇದ್ದಾರೆ. ಬೆಂಗಳೂರಿಗೆ ಬಂದು ಮೂರುನಾಲ್ಕು ತಿಂಗಳೇ ಆಗಿ ಹೋಯಿತು. ಲಾಕ್‌ಡೌನ್‌ ಸ್ವಲ್ಪ ತೆರವಾಗಿ ಏರ್‌ಲೈನ್ಸ್‌ ಆರಂಭವಾದರೂ ಸಾಕು, ಬೆಂಗಳೂರಿಗೆ ಹಾರಿ ಬರೋಣ ಎನಿಸುತ್ತಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈಗ ಎಲ್ಲಿದ್ದೀವೋ ಅಲ್ಲಲ್ಲೇ ಇರುವುದು ಸುರಕ್ಷಿತ. ಅನಗತ್ಯ ಪ್ರಯಾಣ ಸಮಸ್ಯೆಗೆ ಕಾರಣವಾಗುತ್ತದೆ’ ಎನ್ನಲು ಅವರು ಮರೆಯಲಿಲ್ಲ.

ಹೋಂ ಕ್ವಾರಂಟೈನ್‌ ಬಗ್ಗೆಯೂ ಮಾತನಾಡಿದ ಅವರು, ‘ಮುಂಬೈನಲ್ಲಿ ನಾವಿರುವ ಪ್ರದೇಶ ಸಂಪೂರ್ಣ ಲಾಕ್‌ಡೌನ್‌ ಆಗಿದೆ. ದಿನಸಿಗಾಗಿ ಮಾತ್ರ ಅಂಗಡಿಗೆ ಹೋಗುತ್ತಿದ್ದೇವೆ. ಉಳಿದಂತೆ ಸ್ಟೇ ಹೋಂ. ಅತ್ತೆ ಅಡುಗೆ ಮಾಡಿದರೆ, ಉಳಿದ ನಾವೆಲ್ಲರೂ ಮನೆಗೆಲಸ ನಿಭಾಯಿಸುತ್ತೇವೆ. ಟಿ.ವಿ, ಸಿನಿಮಾ ಹಾಗೂ ವೆಬ್‌ ಸರಣಿಗಳ ವೀಕ್ಷಣೆಯಲ್ಲಿ ಸಮಯ ಕಳೆಯುತ್ತಿದ್ದೇ‌ವೆ’ ಎನ್ನುವ ಮಾತು ಸೇರಿಸಿದರು.

ಕುಟುಂಬ ಮತ್ತು ಅಭಿಮಾನಿಗಳಿಗೆ ಸಿಹಿ ಸುದ್ದಿ ಏನಾದರು ಇದೆಯಾ? ಎಂಬ ಪ್ರಶ್ನೆ ಮುಂದಿಟ್ಟಾಗ, ‘ಛೀ ಛೀ ಸದ್ಯಕ್ಕೆ ಅಂಥದ್ದೇನು ಇಲ್ಲ. ಆ ಬಗ್ಗೆ ಯೋಚಿಸುತ್ತಾ ಕುಳಿತರೆ ಒಪ್ಪಿಕೊಂಡಿರುವ ಪ್ರಾಜೆಕ್ಟ್‌ಗಳನ್ನು ಮುಗಿಸುವುದು ಬೇಡವೆ? ಅದಕ್ಕೆಲ್ಲ ಈಗ ಸಮಯವೂ ಇಲ್ಲ. ಅಷ್ಟಕ್ಕೂ ಈಗ ಜಗತ್ತು ತಲ್ಲಣದ ಪರಿಸ್ಥಿತಿಯಲ್ಲಿರುವುದನ್ನು ನೋಡಿದರೆ ಆ ಬಗ್ಗೆ ಯೋಚಿಸುವುದಾದರೂ ಹೇಗೆ’ ಎನ್ನುವ ಅವರು, ತಾಯ್ನತನದ ಯೋಚನೆ ಸದ್ಯಕ್ಕಂತೂ ಇಲ್ಲವೆಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.