ಪ್ರಿಯಾಂಕ ಉಪೇಂದ್ರ
ಪ್ರಿಯಾಂಕ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಕಮರೊ2’ ಚಿತ್ರ ಮುಂದಿನ ವಾರ(ಆ.22) ತೆರೆ ಕಾಣುತ್ತಿದೆ. ಐವತ್ತು ಸಿನಿಮಾಗಳಲ್ಲಿ ನಟಿಸಿರುವ ಖುಷಿಯಲ್ಲಿರುವ ಅವರು ತಮ್ಮ ಸಿನಿಪಯಣ, ಭವಿಷ್ಯದ ಕನಸುಗಳ ಕುರಿತು ಮಾತನಾಡಿದ್ದಾರೆ.
ಚಿತ್ರದಲ್ಲಿ ನಿಮ್ಮ ಪಾತ್ರವೇನು?
ಉ: ‘ಸಾರಾ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪ್ಯಾರಾನಾರ್ಮಲ್ ಇನ್ವೆಸ್ಟಿಗೇಟರ್ ಪಾತ್ರವಿದು. ವಸ್ತುಗಳನ್ನು ಮುಟ್ಟಿದರೆ ಹಿನ್ನೆಲೆ ಪತ್ತೆ ಮಾಡುವುದು, ಏನಾದರೂ ನೋಡಿದರೆ ಪರೀಕ್ಷಾ ದೃಷ್ಟಿಯಿಂದ ಅವಲೋಕಿಸುವುದು ಮೊದಲಾದ ಗುಣಗಳನ್ನು ಹೊಂದಿರುತ್ತೇನೆ. ನನ್ನ ಲುಕ್ ಕೂಡ ಪಾಶ್ಚಾತ್ಯ ಶೈಲಿಯಲ್ಲಿದೆ. ಪಾತ್ರಕ್ಕಾಗಿ ಕೇಶವಿನ್ಯಾಸವನ್ನು ಸ್ವಲ್ಪ ಬದಲಿಸಿಕೊಂಡಿದ್ದೇನೆ. ಪಾತ್ರ ಪೋಷಣೆಯಲ್ಲಿ ನಿರ್ದೇಶಕರು ಕೂಡ ಸಾಕಷ್ಟು ಸಹಾಯ ಮಾಡಿದ್ದಾರೆ.
ಪತ್ತೆದಾರಿ ಕಥಾವಸ್ತುವನ್ನು ಹೊಂದಿರುವ ಚಿತ್ರವೇ?
ಉ: ಪತ್ತೆದಾರಿ ಕಥಾವಸ್ತುವಿನ ಜತೆಗೆ ಭಾವನಾತ್ಮಕ ಪಯಣವೂ ಇದೆ. ಎರಡು ಮಗ್ಗಲುಗಳಲ್ಲಿ ಕಥೆ ಸಾಗುತ್ತದೆ. ನನ್ನ ತಂಗಿಯನ್ನು ಕಳೆದುಕೊಂಡಿರುತ್ತೇನೆ. ಆಕೆಯನ್ನು ಹುಡುಕುವ ಕಥೆ ಬರುತ್ತದೆ. ಅದು ಪೂರ್ತಿ ಭಾವನಾತ್ಮಕವಾಗಿದೆ. ಜತೆಗೆ ಕೌಟುಂಬಿಕ ಅಂಶಗಳು ಇವೆ. ಇನ್ನೊಂದೆಡೆ ಪತ್ತೆದಾರಿ ಘಟನೆಗಳಿವೆ. ನಿರ್ದೇಶಕರ ಹಿಂದಿನ ‘ಕಮರೊಟ್ಟು’ ಚಿತ್ರದ ಕಥೆಯ ಎಳೆಗೂ ಸ್ವಲ್ಪ ಸಂಬಂಧವಿದೆ.
ನಿಮ್ಮ ಮುಂದಿನ ಯೋಜನೆಗಳು...
ಉ: ‘ಡಿಟೆಕ್ಟೀವ್ ತೀಕ್ಷ್ಣ’ ಚಿತ್ರ ಬಿಡುಗಡೆಗೆ ಸಿದ್ಧವಿದೆ. ಇದು ನನ್ನ ವೃತ್ತಿ ಜೀವನದಲ್ಲಿ ನಟಿಯಾಗಿ 50ನೇ ಸಿನಿಮಾ. ಹೀಗಾಗಿ ತುಂಬ ಖುಷಿಯಿದೆ. ‘ದಿ ವೈರಸ್’ ಚಿತ್ರ ಕೂಡ ಬಿಡುಗಡೆಯಾಗಬೇಕಿದೆ. ‘ಮಮ್ಮಿ’ ನಿರ್ದೇಶಕ ಲೋಹಿತ್ ಜತೆ ‘ಕ್ಯಾಪ್ಚರ್’ ಚಿತ್ರ ಮಾಡಿರುವೆ. ‘ವಿಶ್ವರೂಪಿಣಿ ಹುಲಿಗೆಮ್ಮ’ ಚಿತ್ರದಲ್ಲಿ ಉತ್ತರ ಕರ್ನಾಟಕದ ಪ್ರಸಿದ್ಧ ಹುಲಿಗೆಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿರುವೆ. ಸಾಯಿಪ್ರಕಾಶ್ ನಿರ್ದೇಶನದ ಚಿತ್ರವಿದು. ಪೃಥ್ವಿ ಅಂಬಾರ್ ಜತೆ ನಟಿಸಿರುವ ‘ಲೈಫ್ ಈಸ್ ಬ್ಯೂಟಿಫುಲ್’ ಚಿತ್ರ ಈ ವರ್ಷದ ಪ್ರಾರಂಭದಲ್ಲಿಯೇ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ವಿಳಂಬವಾಗುತ್ತಿದೆ. ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಕ್ರೈಸ್ತ ಮಹಿಳೆಯಾಗಿ, ಪೃಥ್ವಿಗೆ ಮಾರ್ಗದರ್ಶಕಿಯಾಗಿ ಕಾಣಿಸಿಕೊಂಡಿದ್ದೇನೆ. ‘ಸೆಪ್ಟೆಂಬರ್ 21’ ಎಂಬ ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಆಲ್ಝೈಮರ್ ರೋಗಿ ಮತ್ತು ಆತನ ಆರೈಕೆ ಮಾಡುವ ದಾದಿಯೊಬ್ಬಳ ನಡುವಿನ ಕಥೆಯನ್ನು ಹೊಂದಿರುವ ಈ ಚಿತ್ರ ಕನ್ನಡದಲ್ಲಿಯೂ ಸಿದ್ಧಗೊಳ್ಳುತ್ತಿದೆ. ಆಲ್ಝೈಮರ್ ರೋಗಿಯನ್ನು ಆರೈಕೆ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿರುವೆ. ಒಟ್ಟಿನಲ್ಲಿ ಕೈತುಂಬ ಚಿತ್ರಗಳಿವೆ.
ಕನ್ನಡದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದೀರಿ. ಈ ಸಿನಿಪಯಣ ಹೇಗೆ ಅನ್ನಿಸುತ್ತಿದೆ?
ಉ: ಮದುವೆಗೆ ಮೊದಲು ನಾನು ಎರಡೇ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು. ಮದುವೆಯಾದ ನಂತರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಖುಷಿಯಿದೆ. ಸಾಕಷ್ಟು ಉತ್ತಮ ಪಾತ್ರಗಳು ಸಿಕ್ಕಿವೆ. ಸ್ಫೂರ್ತಿದಾಯಕ, ಜವಾಬ್ದಾರಿಯುತ ಪಾತ್ರಗಳು ಅರಸಿ ಬರುತ್ತಿವೆ. ಮಹಿಳೆಯರನ್ನು ಪ್ರತಿನಿಧಿಸುವ ಪಾತ್ರಗಳನ್ನು ಮಾಡುತ್ತೀದ್ದೇನೆ. ಈ ತಲೆಮಾರಿನ ನಿರ್ದೇಶಕರು ಕೂಡ ನನ್ನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದೇ ಖುಷಿ. ಪ್ರತಿ ಪಾತ್ರವೂ ಒಂದು ಅನುಭವ. ಆ ಪಾತ್ರ ಮಾಡಿದ ನಾಲ್ಕೈದು ತಿಂಗಳು ಅದೇ ಗುಂಗಿನಲ್ಲಿ ಇರುತ್ತೇವೆ. ಹೀಗಾಗಿ ಈ ಪಾತ್ರಗಳು ಜೀವನದ ಜತೆ ಥಳುಕು ಹಾಕಿಕೊಳ್ಳುತ್ತವೆ. ಯಾವ ಪಾತ್ರವೂ ಪುನರಾವರ್ತನೆಯಾಗುತ್ತಿಲ್ಲ. ಭಿನ್ನ ಪಾತ್ರಗಳೇ ಬರುತ್ತಿವೆ. ಈಗ ಒಳ್ಳೊಳ್ಳೆ ವಿಷಯಗಳು ಸಿನಿಮಾಗಳಾಗುತ್ತಿವೆ. ಈ ಮೂಲಕ ಒಂದಷ್ಟು ಜನಕ್ಕೆ ಸ್ಫೂರ್ತಿಯಾಗುತ್ತಿದ್ದೇನೆ.
ಭವಿಷ್ಯದ ಯೋಜನೆಗಳೇನು?
ಉ: ಪ್ರತಿ ಸಿನಿಮಾ ಹೊಸ ಜಗತ್ತನ್ನು ಪರಿಚಯಿಸಿಕೊಡುತ್ತಿದೆ. ನಟಿಯಾದೆ, ನಿರ್ಮಾಪಕಿಯಾದೆ. ನಿರ್ದೇಶನದ ಜಗತ್ತನ್ನು ಅನ್ವೇಷಿಸುವ ಆಸೆಯಿದೆ. ಕೆಲವಷ್ಟು ಕಥೆಗಳು ಸಿದ್ಧ ಇವೆ. ಆದರೆ ಕಾಲ ಕೂಡಿಬರಬೇಕು.ಕಾಯುತ್ತಿದ್ದೇನೆ. ನಮ್ಮದೇ ಪ‍್ರತಿಷ್ಠಾನ ಮಾಡಿಕೊಂಡು ಒಂದಷ್ಟು ಜನಕ್ಕೆ ನೆರವಾಗುತ್ತಿದ್ದೇನೆ. ಅದನ್ನು ಇನ್ನಷ್ಟು ಹೆಚ್ಚಿಸಬೇಕೆಂಬ ಆಲೋಚನೆಯಿದೆ.
ಈತನಕದ ಪಯಣದಲ್ಲಿ ನೀವು ಮಾಡದೆ ಬಾಕಿ ಉಳಿದ ಪಾತ್ರಗಳು?
ಉ: ನನಗೆ ಖಳನಟಿಯಾಗಿ ನಟಿಸಬೇಕೆಂಬ ಆಸೆಯಿದೆ. ಸಣ್ಣ ಪ್ರಮಾಣದಲ್ಲಿ ಖಳನಟಿಯಾಗಿ ಕಾಣಿಸಿಕೊಂಡಿರುವೆ. ಆದರೆ ಪೂರ್ಣ ಪ್ರಮಾಣದ ಪಾತ್ರಕ್ಕಾಗಿ ಎದುರು ನೋಡುತ್ತಿರುವೆ. ಜೀವನಚರಿತ್ರೆ ಆಧಾರಿತ ಪಾತ್ರಗಳಲ್ಲಿ ನಟಿಸಿಲ್ಲ. ಪೌರಾಣಿಕ ಪಾತ್ರಗಳನ್ನೂ ಮಾಡಿಲ್ಲ.
50 ಸಿನಿಮಾಗಳಿಂದ ತಾವು ಏನಾದರೂ ಕಲಿತಿರುವೆ ಅನ್ನಿಸಿದೆಯಾ?
ಉ: ಮೊದಲೆಲ್ಲ ಸಿನಿಮಾ ಯಶಸ್ಸಿನ ಬಗ್ಗೆ ತುಂಬ ತಲೆಕೆಡಿಸಿಕೊಳ್ಳುತ್ತಿದೆ. ಆಗ ಅವಕಾಶ ಬೇಕಿತ್ತು. ಹಾಗಾಗಿ ಯಶಸ್ಸು ಮಹತ್ವದ್ದಾಗಿತ್ತು. ಆಮೇಲೆ ಅನ್ನಿಸಿದ್ದು ಸಿನಿಮಾ ಹಿಟ್ ಅಥವಾ ಫ್ಲಾಪ್ ಎಂಬುದು ನಮ್ಮ ಕೈಯಲ್ಲಿ ಇಲ್ಲ. ಒಳ್ಳೆಯ ಸಿನಿಮಾಗಳನ್ನು ಮಾಡುವುದು ನಮ್ಮ ಕೆಲಸ. ಇವತ್ತು ಸಾಮಾಜಿಕ ಜಾಲತಾಣ ಪ್ರಬಲವಾಗಿದೆ. ಅಭಿಮಾನಿಗಳು ಅಲ್ಲಿಯೇ ಯಾವ ಪಾತ್ರ ಇಷ್ಟವಾಯಿತು, ಯಾವುದು ಇಷ್ಟವಾಗಿಲ್ಲ ಎಂಬುದನ್ನು ಹೇಳುತ್ತಾರೆ. ಕೆಲಸ ಮಾಡಿದ ತಂಡಗಳು, ಅಲ್ಲಿ ಪರಿಚಯವಾಗುವ ವ್ಯಕ್ತಿಗಳು, ಒಡನಾಟ ಎಲ್ಲವೂ ಬದುಕಿನ ಮುಖ್ಯ ಭಾಗ ಎಂಬುದನ್ನು ಕಲಿತೆ. ಅಂತಿಮವಾಗಿ ಮನುಷ್ಯ ಸಂಬಂಧಗಳೇ ಬದುಕು. ಆ ನೆನಪುಗಳು ಸದಾ ಜೊತೆಗೆ ಉಳಿಯುತ್ತವೆ.
ಮಗನನ್ನು ಚಿತ್ರರಂಗಕ್ಕೆ ಕರೆತಂದಿರುವಿರಿ. ಪತಿ ಕೂಡ ನಟರು. ಇಬ್ಬರಲ್ಲಿ ಯಾರಿಗೆ ನಿರ್ದೇಶನ ಮಾಡುವಿರಿ? ಅಥವಾ ಮಗಳನ್ನೂ ಚಿತ್ರರಂಗಕ್ಕೆ ಕರೆತರುವಿರಾ?
ಉ: ಪ್ರಶ್ನೆ ಚೆನ್ನಾಗಿದೆ. ನಮ್ಮದು ಒಂದು ರೀತಿ ಸಿನಿಮಾ ಕುಟುಂಬ. ನಟ, ನಟಿ, ನಿರ್ದೇಶಕ, ನಿರ್ಮಾಪಕ ಎಲ್ಲರೂ ಇದ್ದಾರೆ. ಮಗಳು ಐಶ್ವರ್ಯಾ ಓದುತ್ತಿದ್ದಾಳೆ. ಆಕೆಯ ಭವಿಷ್ಯದ ಬಗ್ಗೆ ನಿರ್ಧಾರ ಮಾಡಿಲ್ಲ. ಪತಿ, ಮಗ ಇಬ್ಬರೂ ಪ್ರತಿಭಾವಂತರು. ಅವರದ್ದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಇಬ್ಬರಿಗೂ ನಿರ್ದೇಶನ ಮಾಡಲಾರೆ. ನನ್ನದೇ ಪ್ರತ್ಯೇಕ ತಂಡ ಕಟ್ಟಿಕೊಂಡು ಸಿನಿಮಾ ಮಾಡುವೆ. ಕುಟುಂಬದವರ ಸಹಾಯ ಪಡೆಯುವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.