ADVERTISEMENT

ಮುನಿರತ್ನ ಜನ್ಮದಿನಕ್ಕೆ ನಟನಾಗಿ ಶುಭಕೋರಿರುವೆ: ನಿಖಿಲ್‌ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 4:03 IST
Last Updated 25 ಜುಲೈ 2020, 4:03 IST
ಮುನಿರತ್ನ, ನಿಖಿಲ್‌
ಮುನಿರತ್ನ, ನಿಖಿಲ್‌   

ಬೆಂಗಳೂರು: ನಿರ್ಮಾಪಕ ಮುನಿರತ್ನ ಅವರಿಗೆ ಒಬ್ಬ ನಟನಾಗಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದೇನೇ ಹೊರತು ಯುವ ಜನತಾದಳ ನಾಯಕನಾಗಿ ಅಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

ನಿಖಿಲ್‌ ಕುಮಾರಸ್ವಾಮಿ ಅವರು ಮುನಿರತ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದರು. ಇದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಕುಮಾರಸ್ವಾಮಿ ಅವರಿಗೆ ದ್ರೋಹ ಬಗೆದವರಿಗೆ ನೀವು ಶುಭಕೋರಬಾರದಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಕುರಿತು ನಿಖಿಲ್‌ ಫೇಸ್‌ಬುಕ್‌ ನಲ್ಲಿ ಸ್ಟೇಟಸ್‌ ಹಾಕಿ ನಿರ್ಮಾಪಕನಿಗೆ ಒಬ್ಬ ನಟನಾಗಿ ಶುಭಕೋರಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

‘ಮುನಿರತ್ನ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಕ್ಕೆ ಹಲವರು ಆಕ್ಷೇಪಿಸಿರುವುದು ನನ್ನ ಗಮನಕ್ಕೆ ಬಂತು. ಕುಮಾರಸ್ವಾಮಿ ಅವರಿಗೆ ದ್ರೋಹ ಬಗೆದವರಿಗೆ ನೀವು ಶುಭಕೋರಬಾರದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲರ ಅಭಿಪ್ರಾಯಗಳನ್ನೂ ಗೌರವಿಸುತ್ತೇನೆ. ನಿರ್ಮಾಪಕನಿಗೆ ನಟನಾಗಿ ನಾನು ಶುಭಕೋರಿದ್ದೇನೇ ಹೊರತು ಯುವ ಜನತಾದಳ ನಾಯಕನಾಗಿ ಅಲ್ಲ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ರಾಜಕೀಯ ಸಂಘರ್ಷಗಳನ್ನು ಮೀರಿ ದೇವೇಗೌಡರು ಮೋದಿ ಅವರಿಗೆ ಶುಭ ಕೋರುತ್ತಾರೆ. ಮೋದಿ ದೇವೇಗೌಡರಿಗೆ ಶುಭ ಕೋರುತ್ತಾರೆ. ಯಡಿಯೂರಪ್ಪನವರು ಕುಮಾರಸ್ವಾಮಿ ಅವರಿಗೆ ಶುಭ ಆಶಿಸುತ್ತಾರೆ. ಕುಮಾರಸ್ವಾಮಿ ಅವರೂ ಶುಭಾರೈಕೆಗಳನ್ನು ತಿಳಿಸುತ್ತಾರೆ. ಇದು ಕರ್ನಾಟಕದ ರಾಜಕೀಯದ ಸತ್ಸಂಪ್ರದಾಯ. ಹೀಗಾಗಿ ನನ್ನ ಶುಭಕೋರಿಕೆಯಲ್ಲಿ ತಪ್ಪಿರದು ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಮುನಿರತ್ನ ರಾಜಕೀಯವಾಗಿ ಕುಮಾರಸ್ವಾಮಿ ಅವರಿಗೆ ಏನೇ ಮಾಡಿರಬಹುದು. ಅವುಗಳಿಗೆ ಕಣದಲ್ಲಿ ಉತ್ತರಿಸುವ ಪ್ರಯತ್ನ ಮಾಡೋಣ. ಅದರಲ್ಲಿ ಎರಡು ಮಾತಿಲ್ಲ. ಕಾರ್ಯಕರ್ತನಾಗಿ, ಯುವ ಜನತಾದಳದ ಮುಂದಾಳುವಾಗಿ ನನ್ನ ದುಡಿಮೆ ಪಕ್ಷಕ್ಕೆ ಮಾತ್ರ ಎಂದು ನಿಖಿಲ್‌ ಕುಮಾರಸ್ವಾಮಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.